ಲಖನೌ (ಉತ್ತರಪ್ರದೇಶ): ನಾಳೆ ಅಫ್ಘಾನಿಸ್ತಾನ ಮತ್ತು ನೆದರ್ಲ್ಯಾಂಡ್ಸ್ ನಡುವೆ ಏಕದಿನ ವಿಶ್ವಕಪ್ ಸರಣಿಯ 34ನೇ ಪಂದ್ಯ ನಡೆಯಲಿದೆ. ಮೂರು ಪಂದ್ಯಗಳಲ್ಲಿ ಗೆಲುವು ದಾಖಲಿಸಿರುವ ಅಫ್ಘಾನ್ನರು ನಾಳೆಯ ಪಂದ್ಯ ಗೆದ್ದದ್ದೇ ಆದಲ್ಲಿ ಮೊದಲ ಬಾರಿಗೆ ವಿಶ್ವಕಪ್‌ನಲ್ಲಿ ಅಫ್ಘಾನ್ ನಾಲ್ಕು ಗೆಲುವು ದಾಖಲಿಸಿದಂತಾಗಲಿದೆ. ಸದ್ಯ ನಡೆಯುತ್ತಿರುವ ಟೂರ್ನಿಯಲ್ಲಿ ಹಾಲಿ ಚಾಂಪಿಯನ್ ಇಂಗ್ಲೆಂಡ್, 1992ರ ಚಾಂಪಿಯನ್ ಪಾಕಿಸ್ತಾನ ಮತ್ತು ಶ್ರೀಲಂಕಾದಂತಹ ಮೂರು ಬಲಿಷ್ಠ ತಂಡಗಳನ್ನು ಅಫ್ಘಾನ್ ಮಣಿಸಿದೆ. ನಾಳೆ ಅಟಲ್ ಬಿಹಾರಿ ವಾಜಪೇಯಿ ಏಕನಾ ಸ್ಟೇಡಿಯಂನಲ್ಲಿ ನೆದರ್ಲ್ಯಾಂಡ್ಸ್ ವಿರುದ್ಧ ಸೆಣಸಲಿದೆ.
ಅಫ್ಘಾನಿಸ್ತಾನಕ್ಕೆ, ರಶೀದ್ ಖಾನ್, ಮುಜೀಬ್-ಉರ್-ರಹಮಾನ್ ಮತ್ತು ಮೊಹಮ್ಮದ್ ನಬಿ ಸ್ಪಿನ್ ಬಲವಿದ್ದರೆ, ವೇಗಿ ಫಜಲ್ ಉಲ್ ಹಕ್ ಫಾರೂಕಿ ಕೂಡ ಫಾರ್ಮ್ನಲ್ಲಿದ್ದು, ಕಳೆದ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ಮಾರಕ ಬೌಲಿಂಗ್ ಮಾಡಿ ನಾಲ್ಕು ವಿಕೆಟ್ಗಳನ್ನು ಉರುಳಿಸಿದ್ದರು. ಅಫ್ಘಾನಿಸ್ತಾನ ಬ್ಯಾಟರ್‌ಗಳು ಈ ಆವೃತ್ತಿಯ ವಿಶ್ವಕಪ್‌ನಲ್ಲಿ ಗಣನೀಯವಾಗಿ ಸುಧಾರಿಸಿದ್ದು, ಒಟ್ಟಾಗಿ ಪ್ರದರ್ಶನ ನೀಡಿದ್ದಾರೆ.
ಮತ್ತೊಂದೆಡೆ ನಾಯಕನ ಸ್ಥಾನದಲ್ಲಿರುವ ಹಶ್ಮತ್ ಶಾಹಿದಿ ಈ ವರೆಗೂ ಆರು ಇನ್ನಿಂಗ್ಸ್‌ಗಳನ್ನು ಆಡಿ 226 ರನ್ಗಳಿಸಿದ್ದು, ಜವಾಬ್ದಾರಿಯುತವಾಗಿ ತಂಡವನ್ನು ಮುನ್ನಡೆಸುತ್ತಿದ್ದಾರೆ. ಆರು ಇನ್ನಿಂಗ್ಸ್‌ಗಳಿಂದ 224 ರನ್ ಗಳಿಸಿರುವ ಆರಂಭಿಕ ಆಟಗಾರ ರಹಮಾನುಲ್ಲಾ ಗುರ್ಬಾಜ್ ತಂಡಕ್ಕೆ ಎರಡನೇ ಅತಿ ಹೆಚ್ಚು ರನ್ ಗಳಿಸಿದ ಆಟಗಾರಾಗಿದ್ದಾರೆ. ರಹಮತ್ ಶಾ ಮತ್ತು ಅಜ್ಮತುಲ್ಲಾ ಒಮರ್ಜಾಯ್ ಕೂಡ ಕ್ರೀಸ್ಗೆ ಒಗ್ಗಿಕೊಂಡ ತಂಡವನ್ನು ಗೆಲ್ಲಿಸುವ ಸಾಮರ್ಥ್ಯ ಹೊಂದಿದ್ದಾರೆ. ಆದರೆ, ಈ ಟೂರ್ನಿಯಲ್ಲಿ ಅಫ್ಘಾನ್ನ ಯಾವೊಬ್ಬ ಬ್ಯಾಟರ್ಕೂಡ ಶತಕ ಬಾರಿಸಿಲ್ಲ.
ನಾಳೆ ಶತಕ ಸಿಡಿಸುವ ಸಂಭವ ಇದೆ ಎಂದು ಕೋಚ್ಗಳು ಅಭಿಪ್ರಾಯ ಪಟ್ಟಿದ್ದಾರೆ. ಸದ್ಯ ಅಫ್ಘಾನಿಸ್ತಾನ ಆಡಿರುವ 6 ಪಂದ್ಯಗಳ ಪೈಕಿ ಮೂರಲ್ಲಿ ಗೆದ್ದು ಮೂರರಲ್ಲಿ ಸೋಲನ್ನು ಅನುಭವಿಸಿ ಅಂಕ ಪಟ್ಟಿಯಲ್ಲಿ ಆರನೇ ಸ್ಥಾನದಲ್ಲಿದೆ. ನಾಳೆ ಗೆದ್ದರೆ ಪಾಕ್ ತಂಡವನ್ನು ಹಿಂದಿಕ್ಕಿ 5ನೇ ಸ್ಥಾನಕ್ಕೆ ಏರಲಿದ್ದಾರೆ.
ಕ್ರಿಕೆಟ್ ಶಿಶು ನೆದರ್ಲೆಂಡ್ಸ್ ಕೂಡ ವಿಶ್ವಕಪ್‌ನಲ್ಲಿ ಉತ್ಸಾಹ ಭರಿತ ಪ್ರದರ್ಶನವನ್ನು ನೀಡಿದೆ. ಬಲಿಷ್ಠ ದಕ್ಷಿಣ ಆಫ್ರಿಕಾವನ್ನೇ ಮಣಿಸಿ ಬೆಚ್ಚಿಬೀಳಿಸಿತ್ತು. ಅಲ್ಲದೇ ಬಾಂಗ್ಲಾದೇಶವನ್ನೂ ಡಚ್ಚರು ಮಣಿಸುವ ಮೂಲಕ ಕ್ರಿಕೆಟ್ ಶ್ರೇಷ್ಠರಿಂದ ಪ್ರಶಂಸೆ ಗಳಿಸಿದ್ದಾರೆ. ನಾಯಕ ಸ್ಕಾಟ್ ಎಡ್ವರ್ಡ್ಸ್ ತಂಡವನ್ನು ಮುನ್ನಡೆಸುತ್ತಿದ್ದು, ತಂಡದ ಗೆಲುವಿಗಾಗಿ ಎದುರಾಳಿಗಳಿಗೆ ಒಳ್ಳೆಯ ಪೈಪೋಟಿ ನೀಡುತ್ತಿದ್ದಾರೆ.
ನಾಳೆಯ ಪಂದ್ಯದಲ್ಲಿ ಡಚ್ಚರು ಬೌಲಿಂಗ್, ಬ್ಯಾಟಿಂಗ್ನಲ್ಲಿ ಸಾಂಘಿಕ ಪ್ರದರ್ಶನ ತೋರಿ ಗೆಲುವು ದಾಖಲಿಸಿದರೇ ಪಾಕಿಸ್ತಾನದಲ್ಲಿ ನಡೆಯಲಿರುವ ಚಾಂಪಿಯನ್ಸ್ ಟ್ರೋಫಿ 2025ಗೆ ಅರ್ಹತೆ ಪಡೆಯಬಹುದಾಗಿದೆ. ಸದ್ಯ ಅಂಕಪಟ್ಟಿಯಲ್ಲಿ ಹಾಲಿ ಚಾಂಪಿಯನ್ ಇಂಗ್ಲೆಂಡ್ ತಂಡವನ್ನೂ ಹಿಂದಿಕ್ಕಿ ನೆದರ್ಲ್ಯಾಂಡ್ 8ನೇ ಸ್ಥಾನದಲ್ಲಿದೆ.
ಇದನ್ನೂ ಓದಿ: ಹೋಮ್ ಪಿಚ್ನಲ್ಲಿ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದ ರೋಹಿತ್.. ನಾಲ್ಕು ರನ್ನಿಗೆ ಹಿಟ್ ಮ್ಯಾನ್ ಔಟ್