ಚೆನ್ನೈ: ವಿಶ್ವಕಪ್ನ 26ನೇ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಮತ್ತು ಪಾಕಿಸ್ತಾನ ಸೆಣಸಲಿವೆ. ಶುಕ್ರವಾರ ಚೆನ್ನೈನ ಎಂ ಎ ಚಿದಾಂಬರಂ ಸ್ಟೇಡಿಯಂನಲ್ಲಿ ಪಂದ್ಯ ನಡೆಯಲಿದೆ. ಟೂರ್ನಿಯಲ್ಲಿ ಕಳಪೆ ಫಾರ್ಮ್ನಿಂದ ಕಂಗೆಟ್ಟಿರುವ ಪಾಕ್ ತಂಡಕ್ಕೆ ದಕ್ಷಿಣ ಆಫ್ರಿಕಾ ಕಠಿಣ ಸವಾಲಾಗಲಿದೆ.
ಮತ್ತೊಂದೆಡೆ ಟೂರ್ನಿಯಲ್ಲಿ ಬಲಿಷ್ಠ ದಕ್ಷಿಣ ಆಫ್ರಿಕಾ ತಂಡ ಧರ್ಮಶಾಲಾದಲ್ಲಿ ನೆದರ್ಲೆಂಡ್ಸ್ ವಿರುದ್ಧ ಸೋತಿದ್ದು ಹೊರತುಪಡಿಸಿದರೇ, ಶ್ರೀಲಂಕಾ, ಆಸ್ಟ್ರೇಲಿಯಾ, ಇಂಗ್ಲೆಂಡ್ ಮತ್ತು ಬಾಂಗ್ಲಾದೇಶ ವಿರುದ್ಧ ದೊಡ್ಡ ಮೊತ್ತದ ಗೆಲುವು ದಾಖಲಿಸಿ ಭರ್ಜರಿ ಫಾರ್ಮ್ನಲ್ಲಿದೆ. ಅಂಕಪಟ್ಟಿಯಲ್ಲೂ ಎರಡನೇ ಸ್ಥಾನದಲ್ಲಿದೆ.
ಹರಿಣಗಳಿಗೆ ಬ್ಯಾಟಿಂಗ್ ಬಲ: ದಕ್ಷಿಣ ಆಫ್ರಿಕಾಕ್ಕೆ ಬ್ಯಾಟಿಂಗ್ ಬಲವಿದ್ದು ಅದರಲ್ಲೂ ವಿಕೆಟ್ ಕೀಪರ್ ಕಮ್ ಬ್ಯಾಟರ್ ಕ್ವಿಂಟನ್ ಡಿ ಕಾಕ್ ಅವರ ಅದ್ಭುತ ಫಾರ್ಮ್ ತಂಡಕ್ಕೆ ದೊಡ್ಡ ಶಕ್ತಿಯಾಗಿದೆ. ಡಿ ಕಾಕ್ ಈಗಾಗಲೇ ಟೂರ್ನಿಯಲ್ಲಿ ಮೂರು ಶತಕಗಳನ್ನು ಸಿಡಿಸಿದ್ದಾರೆ. ಓಪನರ್ ರೀಜಾ ಹೆಂಡ್ರಿಕ್ಸ್ ಮಧ್ಯಮ ಕ್ರಮಾಂಕದಲ್ಲಿ ಐಡೆನ್ ಮಾರ್ಕ್ರಾಮ್ ಮತ್ತು ಹೆನ್ರಿಚ್ ಕ್ಲಾಸೆನ್ ಕೂಡ ಸ್ಫೋಟಕ ಬ್ಯಾಟಿಂಗ್ ಶೈಲಿಯಿಂದ ತಂಡದ ಸ್ಕೋರ್ ಹೆಚ್ಚಿಸಲು ಸಹಕಾರಿಯಾಗುತ್ತಾರೆ. ಹಾಗಾಗಿ ದಕ್ಷಿಣ ಆಫ್ರಿಕಾ ದೊಡ್ಡ ಮೊತ್ತವನ್ನು ದಾಖಲಿಸುವ ಮತ್ತು ಬೃಹತ್ ಗುರಿಯನ್ನು ಬೆನ್ನಟ್ಟುವ ಸಾಮರ್ಥ್ಯ ಹೊಂದಿದೆ.
ಕ್ಲಾಸೇನ್ ತಂಡಕ್ಕೆ ಹೆಚ್ಚಿನ ರನ್ಗಳ ಕಲೆ ಹಾಕುವಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ. ಬಾಂಗ್ಲಾ ವಿರುದ್ಧ ಭರ್ಜರಿ ಬ್ಯಾಟ್ ಮಾಡಿದ್ದ ಕ್ಲಾಸೇನ್ 49 ಎಸೆತಗಳಲ್ಲಿ 90 ರನ್ಗಳನ್ನು ಚಚ್ಚಿದ್ದರು. ಡೆವಿಡ್ ಮಿಲ್ಲರ್ ಫಾರ್ಮ್ನಲ್ಲಿ ಇಲ್ಲದಿದ್ದರು ಅಗತ್ಯ ಸಂದರ್ಭದಲ್ಲಿ ಬ್ಯಾಟಿಂಗ್ ಮಾಡಲಿದ್ದಾರೆ.
ಬೌಲಿಂಗ್ ವಿಭಾಗದಲ್ಲೂ ಹರಿಣ ಬೌಲರ್‌ಗಳು ಉತ್ತಮ ಪ್ರದರ್ಶನ ತೋರಲಿದ್ದು, ವೇಗಿ ಕಗಿಸೋ ರಬಾಡ ಎದುರಾಳಿ ತಂಡಕ್ಕೆ ಮಾರಕವಾಗಲಿದ್ದಾರೆ. ಸ್ಪಿನ್ನರ್ ಕೇಶವ್ ಮಹಾರಾಜ್ ಚೆಪಾಕ್‌ನಲ್ಲಿ ಪ್ರಮುಖ ಪಾತ್ರವನ್ನು ವಹಿಸಲಿದ್ದು, ಟ್ರ್ಯಾಕ್ ಸ್ಪಿನ್ನರ್‌ಗಳಿಗೆ ಪಿಚ್ ಸಹಕಾರಿಯಾಗಲಿದೆ. ಒಂದು ವೇಳೆ ಪಂದ್ಯದಲ್ಲಿ ಹರಿಣಗಳ ಪಡೆ ಗೆದ್ದರೆ ಸೆಮಿಸ್ ಅರ್ಹತೆ ಹಾದಿ ಮತ್ತಷ್ಟು ಸುಲಭವಾಗಲಿದೆ.
ಪಾಕಿಸ್ತಾನ ತಂಡ: ಪಾಕ್ ತಂಡದ ವಿಶ್ವಕಪ್ ಜರ್ನಿ ನೋಡುವುದಾದರೆ ಈವರೆಗೂ ಕೇವಲ ಎರಡು ಪಂದ್ಯಗಳಲ್ಲಿ ಮಾತ್ರ ಗೆದ್ದಿದೆ. ನೆದರ್ಲೆಂಡ್ಸ್ ಮತ್ತು ಶ್ರೀಲಂಕಾ ವಿರುದ್ಧದ ಆರಂಭಿಕ ಎರಡು ಪಂದ್ಯಗಳನ್ನು ಗೆದ್ದ ನಂತರ, ಬಾಬರ್ ಅಜಮ್ ನೇತೃತ್ವದ ತಂಡ ಸತತ ಸೋಲನ್ನನುಭವಿಸುತ್ತಿದೆ. ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಭಾರತದ ವಿರುದ್ಧ ಆರಂಭವಾದ ಸೋಲಿನ ಪಯಣ, ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆಸ್ಟ್ರೇಲಿಯಾ ಮತ್ತು ಚೆನ್ನೈನಲ್ಲಿ ಅಫ್ಘಾನ್ ವಿರುದ್ಧ ಮುಂದುವರೆದಿದೆ. ಸದ್ಯ ಸೆಮಿಸ್ ರೇಸ್ನಿಂದ ಹೊರಬೀಳುವ ಸಂಕಷ್ಟ ತಂಡಕ್ಕೆ ಎದುರಾಗಿದೆ. ಹಾಗಾಗಿ ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯ ಮಾಡು ಇಲ್ಲವೆ ಮಡಿ ಎಂಬಂತಾಗಿದೆ.
ಬಾಬರ್ ಅಜಮ್ ವಿಫಲ: ಪ್ರಸ್ತುತ ಏಕದಿನ ಬ್ಯಾಟಿಂಗ್ ರ್ಯಾಂಕಿಂಗ್ನಲ್ಲಿ ಅಗ್ರಸ್ಥಾನ ಅಲಂಕರಿಸಿಕೊಂಡಿರುವ ಬಾಬರ್ ಅಜಮ್ ವಿಶ್ವಕಪ್ ಟೂರ್ನಿಯಲ್ಲಿ ನಿರಾಸದಾಯಕ ಪ್ರದರ್ಶನ ತೋರುತ್ತಿದ್ದಾರೆ. ಅವರ ಫಾರ್ಮ್ ತಂಡಕ್ಕೆ ದೊಡ್ಡ ಚಿಂತೆಯಾಗಿದೆ. ಪಾಕಿಸ್ತಾನದ ಪ್ರಮುಖ ಆರಂಭಿಕ ಆಟಗಾರ ಅಬ್ದುಲ್ಲಾ ಶಫೀಕ್ ಮತ್ತು ಮೊಹಮ್ಮದ್ ರಿಜ್ವಾನ್ ಆಟವನ್ನು ಯಾವುದೇ ಕ್ಷಣದಲ್ಲಿ ಬದಲಿಸಿ ತಂಡವನ್ನು ಗೆಲ್ಲಿಸುವ ಸಾಮರ್ಥ್ಯವನ್ನು ಹೊಂದಿದ್ದಾರೆ. ಓಪನರ್ ಇಮಾಮ್ ಉಲ್ ಹಕ್ ಕೂಡ ದೊಡ್ಡ ಸ್ಕೋರ್ ಮಾಡಲು ತಂಡಕ್ಕೆ ನೆರವಾಗಬಲ್ಲರು.
ಬೌಲಿಂಗ್ನಲ್ಲಿ ವೈಫಲ್ಯ: ಅತ್ಯುತ್ತಮ ಬೌಲಿಂಗ್ನಿಂದಲೇ ಖ್ಯಾತಿ ಪಡೆದಿರುವ ಪಾಕ್ ತಂಡದ ಬೌಲರ್‌ಗಳು ಪ್ರಸ್ತುತ ಟೂರ್ನಿಯಲ್ಲಿ ವಿಕೆಟ್ ಪಡೆಯಲು ಪರದಾಡುತ್ತಿದ್ದಾರೆ. ದಕ್ಷಿಣ ಆಫ್ರಿಕಾದ ಅಗ್ರ ಮತ್ತು ಮಧ್ಯಮ ಕ್ರಮಾಂಕದ ಬ್ಯಾಟರ್ಗಳ ವಿರುದ್ಧ ಬೌಲರ್‌ಗಳು ಉತ್ತಮ ಪ್ರದರ್ಶನ ತೋರಿದರೆ ಮಾತ್ರ ದೊಡ್ಡ ಮೊತ್ತದ ಸ್ಕೋರ್ನಿಂದ ತಂಡವನ್ನು ರಕ್ಷಿಸಬಹುದಾಗಿದೆ. ಈ ಪಂದ್ಯದಲ್ಲಿ ಮ್ಯಾಚ್ ಟರ್ನಿಂಗ್ ಸ್ಪಿನ್ನರ್ ಶಾದಾಬ್ ಖಾನ್ ಪಾತ್ರ ನಿರ್ಣಾಯಕವಾಗಲಿದೆ.
ಫೀಲ್ಡಿಂಗ್ನಲ್ಲೂ ಸುಧಾರಣೆ ಅವಶ್ಯಕ: ಅಫ್ಘಾನಿಸ್ತಾನ ವಿರುದ್ಧದ ಪಂದ್ಯದಲ್ಲಿ ಕಳಪೆ ಫೀಲ್ಡಿಂಗ್ನಿಂದ ಪಂದ್ಯವನ್ನು ಕೈಚಲ್ಲಿದ ಪಾಕ್ ಆಟಗಾರರು ಟ್ರೋಲರ್ಗಳ ಕೆಂಗಣ್ಣಿಗೆ ಗುರಿಯಾಗಿದ್ದರು. ಹಾಗಾಗಿ ಆಫ್ರಿಕಾ ವಿರುದ್ಧದ ಪಂದ್ಯ ಗೆಲ್ಲಬೇಕಾದರೆ ತಂಡಕ್ಕೆ ಉತ್ತಮ ಫೀಲ್ಡಿಂಗ್ ಕೂಡ ಅವಶ್ಯಕವಾಗಿದೆ.
ಇದನ್ನೂ ಓದಿ: ವಿಶ್ವಕಪ್: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿಂದು ಇಂಗ್ಲೆಂಡ್ Vs ಶ್ರೀಲಂಕಾ ಫೈಟ್