ಪುಣೆ (ಮಹಾರಾಷ್ಟ್ರ): ವಿಶ್ವಕಪ್ನಲ್ಲಿ ಸತತ ಸೋಲಿನಿಂದಾಗಿ ಹೊರಬಿದ್ದಿರುವ ಹಾಲಿ ಚಾಂಪಿಯನ್ ಇಂಗ್ಲೆಂಡ್ ಕೊನೆಗೂ ಕ್ರಿಕೆಟ್ ಶಿಶು ನೆದರ್ಲೆಂಡ್ ವಿರುದ್ಧ 160 ರನ್ಗಳ ಗೆಲುವು ಸಾಧಿಸಿದೆ. ಈ ಮೂಲಕ ಪಾಯಿಂಟ್ ಪಟ್ಟಿಯಲ್ಲಿ ಪ್ರಗತಿ ಸಾಧಿಸಿ, ಚಾಂಪಿಯನ್ ಟ್ರೋಫಿಯಲ್ಲಿ ಸ್ಥಾನ ಪಡೆಯುವ ಭರವಸೆ ಉಳಿಸಿಕೊಂಡಿದೆ.
-
An emphatic win in Pune breaks the streak of five straight #CWC23 losses for England 👌#ENGvNED 📝: https://t.co/e33ymYVr2l pic.twitter.com/blYgaOafsp
— ICC Cricket World Cup (@cricketworldcup) November 8, 2023 " class="align-text-top noRightClick twitterSection" data="
">An emphatic win in Pune breaks the streak of five straight #CWC23 losses for England 👌#ENGvNED 📝: https://t.co/e33ymYVr2l pic.twitter.com/blYgaOafsp
— ICC Cricket World Cup (@cricketworldcup) November 8, 2023An emphatic win in Pune breaks the streak of five straight #CWC23 losses for England 👌#ENGvNED 📝: https://t.co/e33ymYVr2l pic.twitter.com/blYgaOafsp
— ICC Cricket World Cup (@cricketworldcup) November 8, 2023
ಮೊದಲು ಬ್ಯಾಟ್ ಮಾಡಿದ ಆಂಗ್ಲ ಪಡೆ ನಿಗದಿತ 50 ಓವರ್ಗಳಲ್ಲಿ ಬೆನ್ ಸ್ಟೋಕ್ಸ್ ಶತಕ, ಡೇವಿಡ್ ಮಲಾನ್, ಬೌಲರ್ ಕ್ರಿಸ್ ವೋಕ್ಸ್ರ ಅರ್ಧಶತಕದ ನೆರವಿನಿಂದ 9 ವಿಕೆಟ್ಗೆ 339 ರನ್ ಪೇರಿಸಿತು. ಇದಕ್ಕುತ್ತರವಾಗಿ ಡಚ್ಚರು 37.2 ಓವರ್ಗಳಲ್ಲಿ 179 ರನ್ ಗಳಿಸಲಷ್ಟೇ ಶಕ್ತವಾಗಿ ಟೂರ್ನಿಯಿಂದ ಅಧಿಕೃತವಾಗಿ ಗೇಟ್ ಪಾಸ್ ಪಡೆಯಿತು. ಬಲಿಷ್ಠ ದಕ್ಷಿಣ ಆಫ್ರಿಕಾ ತಂಡವನ್ನು ಬಗ್ಗುಬಡಿದಿದ್ದ ಡಚ್ ಪಡೆ ಇಂಗ್ಲೆಂಡ್ ಸೋಲಿಸುವ ಗುರಿ ಈಡೇರಲಿಲ್ಲ.
ವಿಶ್ವಕಪ್ನಲ್ಲಿ ಗಮನಾರ್ಹ ಪ್ರದರ್ಶನ ನೀಡಿದ ನೆದರ್ಲೆಂಡ್ ತಂಡ ಬಾಂಗ್ಲಾದೇಶ, ದಕ್ಷಿಣ ಆಫ್ರಿಕಾ ತಂಡಗಳಿಗೆ ಸೋಲಿನ ರುಚಿ ತೋರಿಸಿತ್ತು. ತಂಡದಲ್ಲಿನ ಆಲ್ರೌಂಡರ್ಗಳು ಮತ್ತು ಉತ್ತಮ ಫೀಲ್ಡಿಂಗ್ ಪ್ರದರ್ಶಿಸಿ ಪ್ರತಿ ಪಂದ್ಯದಲ್ಲಿ ರೋಚಕತೆ ಮೂಡಿಸುತ್ತಿದ್ದ ಡಚ್ಚರು ಇಂಗ್ಲೆಂಡ್ ಎದುರು ಯಾವುದೇ ಪ್ರತಿರೋಧ ಒಡ್ಡಲಿಲ್ಲ. ವೆಸ್ಲೆ ಬರ್ರೆಸ್ಸಿ 37, ಸೈಬ್ರಾಂಡ್ ಎಂಗಲ್‌ಬ್ರೆಕ್ಟ್ 33, ನಾಯಕ ಸ್ಕಾಟ್ ಎಡ್ವರ್ಡ್ 38, ತೇಜ ನಿಡಮನೂರು 41 ಗಳಿಸಿದರೂ ತಂಡವನ್ನು ಗೆಲ್ಲಿಸಲು ಸಾಧ್ಯವಾಗಲಿಲ್ಲ.
ಸೊರಗಿದ್ದ ಇಂಗ್ಲೆಂಡ್ ಬೌಲಿಂಗ್ ವಿಭಾಗ ಡಚ್ಚರ ವಿರುದ್ಧ ಪುಟಿದೆದ್ದಿತು. ಆದಿಲ್ ರಶೀದ್, ಮೊಯೀನ್ ಅಲಿ ತಲಾ 3 ವಿಕೆಟ್ ಪಡೆದರೆ, ಡೇವಿಡ್ ವಿಲ್ಲೆ 2, ಕ್ರಿಸ್ ವೋಕ್ಸ್ 1 ವಿಕೆಟ್ ಪಡೆದು ತಂಡಕ್ಕೆ ಗೆಲುವು ತಂದುಕೊಟ್ಟರು.
ಬೆನ್ಸ್ಟೋಕ್ಸ್ ಭರ್ಜರಿ ಶತಕ: ನಿವೃತ್ತಿ ವಾಪಸ್ ಪಡೆದು ವಿಶ್ವಕಪ್ನಲ್ಲಿ ಆಡುತ್ತಿರುವ ಆಲ್ರೌಂಡರ್ ಬೆನ್ ಸ್ಟೋಕ್ಸ್, ಅದ್ಭುತ ಇನಿಂಗ್ಸ್ ಕಟ್ಟಿದರು. ಡೇವಿಡ್ ಮಲಾನ್ (87) ಔಟಾದ ಬಳಿಕ ಮತ್ತೆ ವಿಕೆಟ್ ಕಳೆದುಕೊಳ್ಳುತ್ತಾ ಸಾಗಿದ ತಂಡವನ್ನು ಆಧರಿಸಿದರು. ಹ್ಯಾರಿ ಬ್ರೂಕ್ (11), ಜೋಸ್ ಬಟ್ಲರ್ (5) ಮತ್ತು ಮೊಯಿನ್ ಅಲಿ (4) ವಿಕೆಟ್ ಕಾಯ್ದುಕೊಳ್ಳುವಲ್ಲಿ ವಿಫಲರಾದರು. ಆದರೆ, ಆಲ್ರೌಂಡರ್ ಕ್ರಿಸ್ ವೋಕ್ಸ್ ಜೊತೆಗೂಡಿ 7ನೇ ವಿಕೆಟ್ಗೆ 129 ರನ್ಗಳ ಪಾಲುದಾರಿಕೆ ನೀಡಿದರು. ಸ್ಟೋಕ್ಸ್ 84 ಎಸೆತಗಳಲ್ಲಿ ತಲಾ 6 ಬೌಂಡರಿ, ಸಿಕ್ಸರ್ಗಳ ಸಮೇತ 108 ರನ್ ಕಲೆಹಾಕಿ ಔಟಾದರು. ಇನ್ನೊಂದು ಬದಿಯಲ್ಲಿ ಕ್ರಿಸ್ ವೋಕ್ಸ್ (51) ಅರ್ಧಶತಕವನ್ನು ಬಾರಿಸಿದರು.
ಚಾಂಪಿಯನ್ ಟ್ರೋಫಿಗೆ ಅರ್ಹತೆ?: ವಿಶ್ವಕಪ್ನಲ್ಲಿ ಮೊದಲ 8ರಲ್ಲಿ ಸ್ಥಾನ ಪಡೆಯುವ ತಂಡಗಳಿಗೆ 2025 ರ ಚಾಂಪಿಯನ್ ಟ್ರೋಫಿಗೆ ನೇರ ಅರ್ಹತೆ ಸಿಗಲಿದೆ. ಈ ಗೆಲುವಿನ ಮೂಲಕ ಇಂಗ್ಲೆಂಡ್ ಪಾಯಿಂಟ್ ಪಟ್ಟಿಯಲ್ಲಿ 7 ನೇ ಸ್ಥಾನ ಪಡೆದಿದೆ. ಟೂರ್ನಿಯಲ್ಲಿ ಇನ್ನೊಂದು ಪಂದ್ಯ ಬಾಕಿ ಇದ್ದು, ನವೆಂಬರ್ 11 ರಂದು ಪಾಕಿಸ್ತಾನದ ವಿರುದ್ಧ ಕೋಲ್ಕತ್ತಾದಲ್ಲಿ ಆಡಲಿದೆ. ಇಲ್ಲಿ ಗೆಲುವು ಸಾಧಿಸಿದಲ್ಲಿ 6 ಅಥವಾ 7 ನೇ ಸ್ಥಾನ ಪಡೆದು ನೇರವಾಗಿ ಅರ್ಹತೆ ಪಡೆಯಲಿದೆ. ಸೋತಲ್ಲಿ ಅರ್ಹತೆ ಕಳೆದುಕೊಳ್ಳಲಿದೆ.
ಇದನ್ನೂ ಓದಿ: "ಭಾರತ ವಿಶೇಷ ಬಾಲ್ ಬಳಸಿ ಆಡುತ್ತಿದೆ" - ಹೀಗೆ ಹೇಳಲು 'ನಾಚಿಕೆ ಆಗುವುದಿಲ್ಲವೇ' ಹಸನ್ ರಾಝಾ ಎಂದು ಕೇಳಿದ ಶಮಿ