ಮುಂಬೈ: ವಾಂಖೆಡೆ ಮೈದಾನದಲ್ಲಿ ಮಂಗಳವಾರ ನಡೆದ ಅಫ್ಘಾನಿಸ್ತಾನ ವಿರುದ್ಧದ ಪಂದ್ಯದಲ್ಲಿ ಆಸ್ಟ್ರೇಲಿಯಾ ಐತಿಹಾಸಿಕ ಗೆಲುವು ಸಾಧಿಸಿತು. ಈ ಗೆಲುವಿನ ರೂವಾರಿ ಆಸೀಸ್ ಸ್ಟಾರ್ ಆಲ್‌ರೌಂಡರ್ ಗ್ಲೆನ್ ಮ್ಯಾಕ್ಸ್‌ವೆಲ್. ಕಾಲು ನೋವಿನ ನಡುವೆಯೂ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದ ಮ್ಯಾಕ್ಸಿ, ಏಕದಿನ ವಿಶ್ವಕಪ್ ಕ್ರಿಕೆಟ್‌ನಲ್ಲಿ ಅತಿ ವೇಗದ ದ್ವಿಶತಕ (201*) ಪೇರಿಸುವ ಮೂಲಕ 6 ಹೊಸ ದಾಖಲೆಗಳನ್ನು ರಚಿಸಿದರು.
ಗ್ಲೆನ್ ಮ್ಯಾಕ್ಸ್‌ವೆಲ್ ದಾಖಲೆಗಳು:
- ಏಕದಿನ ವಿಶ್ವಕಪ್ ಕ್ರಿಕೆಟ್‌ನಲ್ಲಿ ನಾನ್-ಓಪನರ್ ಆಗಿ ದ್ವಿಶತಕ ಬಾರಿಸಿದ ವಿಶ್ವದ ಮೊದಲ ಆಟಗಾರ.
- ಆಸ್ಟ್ರೇಲಿಯಾ ಪರ ಏಕದಿನ ವಿಶ್ವಕಪ್ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ವೈಯಕ್ತಿಕ ರನ್ ಗಳಿಕೆ. ಬೆಲಿಂಡಾ ಕ್ಲಾರ್ಕ್ ಅವರು ಮಹಿಳಾ ಏಕದಿನ ಕ್ರಿಕೆಟ್‌ನಲ್ಲಿ ದ್ವಿಶತಕ ಗಳಿಸಿದ ಏಕೈಕ ಆಸ್ಟ್ರೇಲಿಯಾದ ಆಟಗಾರ್ತಿಯಾಗಿದ್ದಾರೆ. ಈವರೆಗೆ ಬಾಂಗ್ಲಾದೇಶದ ವಿರುದ್ಧ ಆಸ್ಟ್ರೇಲಿಯಾದ ಮಾಜಿ ಆಲ್‌ರೌಂಡರ್ ಶೇನ್ ವ್ಯಾಟ್ಸನ್ (185) ಗಳಿಸಿದ ರನ್ ದಾಖಲೆ ಇತ್ತು.
- ಚೇಸ್ ಮಾಡುವಾಗ ಔಟಾಗದೇ ಬ್ಯಾಟರ್‌ವೋರ್ವ ಏಕದಿನ ಕ್ರಿಕೆಟ್‌ನಲ್ಲಿ ಅತ್ಯಧಿಕ ವೈಯಕ್ತಿಕ (201*) ರನ್ ಗಳಿಸಿದ ದಾಖಲೆ ಮ್ಯಾಕ್ಸ್‌ವೆಲ್ ಹೆಸರಿನಲ್ಲಿದೆ. 2021ರಲ್ಲಿ ಪಾಕಿಸ್ತಾನದ ಫಖರ್ ಜಮಾನ್ 2021ರಲ್ಲಿ ಜೋಹಾನ್ಸ್‌ಬರ್ಗ್‌ನಲ್ಲಿ ನಡೆದ ದಕ್ಷಿಣ ಆಫ್ರಿಕಾ ವಿರುದ್ಧ 193 ರನ್ ಗಳಿಸಿದ್ದರು.
- ಏಕದಿನ ಪಂದ್ಯದಲ್ಲಿ ಚೇಸ್ ಮಾಡುವಾಗ ಮೊದಲ ದ್ವಿಶತಕ ಹೊಡೆದ ಹೆಗ್ಗಳಿಕೆಗೆ ಮ್ಯಾಕ್ಸಿ ಪಾತ್ರರಾಗಿದ್ದಾರೆ.
- 5ನೇ ವಿಕೆಟ್ ನಂತರ ಕ್ರೀಸ್ಗೆ ಬಂದು ಅಧಿಕ ಶತಕ ಸಿಡಿಸಿದ ದಾಖಲೆಯನ್ನು ಮ್ಯಾಕ್ಸ್‌ವೆಲ್ ಬರೆದಿದ್ದಾರೆ.
- ಈವರೆಗೆ ಪುರುಷರ ಏಕದಿನ ವಿಶ್ವಕಪ್‌ನಲ್ಲಿ ಮೂವರಿಂದ ದ್ವಿಶತಕ ದಾಖಲಾಗಿದ್ದು, ಈ ಪೈಕಿ ಮ್ಯಾಕ್ಸಿ (201*) ಒಬ್ಬರು. ವೆಸ್ಟ್ ಇಂಡೀಸ್ ಬ್ಯಾಟರ್ ಕ್ರಿಸ್ ಗೇಲ್ 2015ರಲ್ಲಿ ಜಿಂಬಾಬ್ವೆ ವಿರುದ್ಧ (219) ರನ್ ಮತ್ತು ಅದೇ ವರ್ಷ ನ್ಯೂಜಿಲೆಂಡ್ ಆಟಗಾರ ಮಾರ್ಟಿನ್ ಗಪ್ಟಿಲ್ ವೆಸ್ಟ್ ಇಂಡೀಸ್ ವಿರುದ್ಧ (237)* ರನ್ ಗಳಿಸಿದ್ದರು.
ಏಕದಿನ ಪಂದ್ಯದಲ್ಲಿ ಚೇಸಿಂಗ್- ಅತ್ಯಧಿಕ ಸ್ಕೋರ್‌ಗಳು:
- 201*-ಮ್ಯಾಕ್ಸ್‌ವೆಲ್ (ಆಸ್ಟ್ರೇಲಿಯಾ)- ಅಫ್ಘಾನಿಸ್ತಾನ ವಿರುದ್ಧ- 2023- ಗೆಲುವು (ವಿಶ್ವಕಪ್)
- 193 - ಫಖರ್ ಜಮಾನ್ (ಪಾಕಿಸ್ತಾನ) ದಕ್ಷಿಣ ಆಫ್ರಿಕಾ ವಿರುದ್ಧ-2021- ಸೋಲು
- 185* - ಶೇನ್ ವ್ಯಾಟ್ಸನ್ (ಆಸ್ಟ್ರೇಲಿಯಾ) ಬಾಂಗ್ಲಾದೇಶ ವಿರುದ್ಧ- 2011- ಗೆಲುವು
- 183*- ಎಂ.ಎಸ್.ಧೋನಿ (ಭಾರತ) ಶ್ರೀಲಂಕಾ ವಿರುದ್ಧ 2005- ಗೆಲುವು
- 183- ವಿರಾಟ್ ಕೊಹ್ಲಿ (ಭಾರತ) ಪಾಕಿಸ್ತಾನ ವಿರುದ್ಧ 2012- ಗೆಲುವು
ಇದನ್ನೂ ಓದಿ: ಅವಕಾಶಗಳನ್ನು ಉತ್ತಮವಾಗಿ ಬಳಸಿಕೊಂಡಿದ್ದರಿಂದ ಗೆಲುವು ಸಾಧ್ಯವಾಯಿತು: ಮ್ಯಾಕ್ಸ್‌ವೆಲ್