ಚೆನ್ನೈ (ತಮಿಳುನಾಡು): ಸೋಮವಾರ ಚೆನ್ನೈನ ಎಂ.ಎ ಚಿದಾಂಬರಂ ಮೈದಾನದಲ್ಲಿ ನಡೆದ ವಿಶ್ವಕಪ್ನ 22ನೇ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ದ ಅಫ್ಘಾನಿಸ್ತಾನ 8 ವಿಕೆಟ್ಗಳ ಐತಿಸಹಾಸಿಕ ಗೆಲುವು ದಾಖಲಿಸಿತ್ತು. ವಿಶ್ವಕಪ್ನಲ್ಲಿ ಮೊದಲ ಬಾರಿಗೆ ಪಾಕ್ ತಂಡವನ್ನು ಮಣಿಸಿರುವ ಅಫ್ಘಾನ್ನರು ಪಂದ್ಯದ ಬಳಿಕ ಸಂಭ್ರಮಿಸಿದ್ದಾರೆ. ಇದೇ ವೇಳೆ ಭಾರತದ ಮಾಜಿ ಆಲ್‌ರೌಂಡರ್ ಇರ್ಫಾನ್ ಪಠಾಣ್ ಅಫ್ಘಾನ್ ಸ್ಪಿನ್ನರ್ ರಶೀದ್ ಖಾನ್ ಜತೆ ಸೇರಿ ಗೆಲುವಿನ ಸಂಭ್ರಮ ಆಚರಿಸಿದ್ದಾರೆ.
ಬ್ರಾಟಕಾಸ್ಟರ್ ಕಾಮೆಂಟರಿಯಲ್ಲಿದ್ದ ಪಠಾಣ್, ರಶೀದ್ ಖಾನ್ ಬರ್ತಿದಂತೆ ನೃತ್ಯ ಮಾಡಲು ಆರಂಭಿಸಿದ್ದಾರೆ. ರಶೀದ್ ಕೂಡ ಪಠಾಣ್ರೊಂದಿಗೆ ಭರ್ಜರಿ ಸ್ಟೆಪ್ಸ್ ಹಾಕಿ ಸಂಭ್ರಮಿಸಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳ್ಲಿ ಸಖತ್ ವೈರಲ್ ಕೂಡ ಆಗಿದೆ. ರಶೀದ್ರೊಂದಿಗೆ ಸಂಭ್ರಮಿಸಿರುವ ವಿಡಿಯೋವನ್ನು ತಮ್ ಇನ್ಸ್ಟಾ ಖಾತೆಯಲ್ಲಿ ಹಂಚಿಕೊಂಡಿರುವ ಪಠಾಣ್, ರಶೀದ್ ಖಾನ್ ಅವರ ಭರವಸೆಯನ್ನು ಈಡೇರಿಸಿದ್ದೇನೆ ಎಂದು ಬರೆದಿದ್ದಾರೆ.
ನಿನ್ನೆಯ ಪಂದ್ಯದಲ್ಲಿ ಆಲ್‌ರೌಂಡರ್ ಪ್ರದರ್ಶನ ತೋರಿದ ಅಫ್ಘಾನ್ ಎದುರಾಳಿ ಪಾಕ್ ವಿರುದ್ದ 8 ವಿಕೆಟ್ಗಳಿಂದ ಗೆದ್ದು ಎಲ್ಲರನ್ನೂ ಬೆರಗುಗೊಳಿಸಿದರು. ಮೊದಲಿಗೆ ಬ್ಯಾಟ್ ಮಾಡಿದ್ದ ಬಾಬರ್ ನೇತೃತ್ವದ ಪಾಕ್ 283 ರನ್ಗಳ ಗುರಿಯನ್ನು ನೀಡಿತ್ತು. ಸ್ಪರ್ಧಾತ್ಮಕ ಗುರಿ ಬೆನ್ನಟ್ಟಿದ ಅಫ್ಘಾನ್ ಆರಂಭಿಕ ಜೋಡಿ ರಹಮಾನಿಲಾ ಗುರ್ಬಾಜ್ (65) ಮತ್ತು ಇಬ್ರಾಹಿಂ ಝದ್ರಾನ್ (87) 130 ರನ್ಗಳ ಜೊತೆಯಾಟವಾಡಿ ತಂಡಕ್ಕೆ ಭದ್ರ ಬುನಾದಿ ಹಾಕಿದರು. ಅರ್ಧಶತಕ ಪೂರೈಸಿದ್ದ ಗುರ್ಬಾಜ್ ಶಹಿನ್ ಶಾ ಆಫ್ರಿದಿ ಎಸೆತದಲ್ಲಿ ವಿಕೆಟ್ ಒಪ್ಪಿಸಿದರು.
ಮತ್ತೊಂದೆಡೆ ಉತ್ತಮ ಬ್ಯಾಟಿಂಗ್ ನಿರ್ವಹಿಸುತ್ತಿದ್ದ ಝದ್ರಾನ್ ವೇಗಿ ಅಸನ್ ಅಲಿ ಎಸೆತದಲ್ಲಿ ರಿಜ್ವಾನ್ಗೆ ಕ್ಯಾಚ್ ನೀಡಿ ಹೊರ ನಡೆದರು. ಎರಡು ವಿಕೆಟ್ಗಳ ಪಡೆದು ಕಮ್ಬ್ಯಾಕ್ ಮಾಡಲು ಯೋಜನೆ ರೂಪಿಸಿದ ಪಾಕ್ ಬೌಲರ್ಗಳು ರಹಮತ್ ಶಾ ಮತ್ತು ಹಶ್ಮತುಲ್ಲ ಶಹಿದಿ ವಿಕೆಟ್ ಪಡೆಯಲು ಎಷ್ಟೇ ಪ್ರಯತ್ನಿಸಿದರು ಕೊನೆವರೆಗೂ ಸಾಧ್ಯವಾಗಲೇ ಇಲ್ಲ. ಈ ಇಬ್ಬರು ಜೋಡಿ ಸಮಯೋಚಿತ ಬ್ಯಾಟಿಂಗ್ ಮೂಲಕ 6 ಎಸೆತಗಳು ಬಾಕಿ ಇರುವಾಗಲೇ ತಂಡವನ್ನು ಗೆಲುವಿನ ದಡ ಸೇರಿಸಿದರು.
ಸದ್ಯ ಹಾಲಿ ವಿಶ್ವ ಚಾಂಪಿಯನ್ ಇಂಗ್ಲೆಂಡ್ ಮತ್ತು ಒಂದು ಬಾರಿಯ ವಿಶ್ವಕಪ್ ವಿಜೇತ ಪಾಕಿಸ್ತಾನ ತಂಡವನ್ನು ಮಣಿಸಿರುವ ಅಫ್ಘಾನ್ ವಿಶ್ವಕಪ್ ಟೂರ್ನಿಯಲ್ಲಿ ಎರಡು ಗೆಲುವುಗಳನ್ನು ದಾಖಲಿಸಿ ಸೆಮಿಸ್ ಕನಸನ್ನು ಜೀವಂತವಾಗಿರಿಸಿಕೊಂಡಿದೆ. ಅಂಕ ಪಟ್ಟಿಯಲ್ಲೂ ಇಂಗ್ಲೆಂಡ್ ಮತ್ತು ಶ್ರೀಲಂಕಾ ತಂಡಗಳನ್ನು ಹಿಂದಿಕ್ಕಿ 6ನೇ ಸ್ಥಾನಕ್ಕೇರಿದೆ. ಏತನ್ಮಧ್ಯೆ, ಪಾಕಿಸ್ತಾನ ನಾಲ್ಕು ಅಂಕಗಳೊಂದಿಗೆ ಐದನೇ ಸ್ಥಾನದಲ್ಲಿದೆ. ಅಫ್ಘಾನಿಸ್ತಾನ ಅಕ್ಟೋಬರ್ 30 ರಂದು ಪುಣೆಯ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂನಲ್ಲಿ ಶ್ರೀಲಂಕಾ ವಿರುದ್ಧ ಮುಂದಿನ ಪಂದ್ಯವನ್ನು ಆಡಲಿದೆ.
ಇದನ್ನೂ ಓದಿ: ವಿಶ್ವಕಪ್: ಇಂದು ದಕ್ಷಿಣ ಆಫ್ರಿಕಾ vs ಬಾಂಗ್ಲಾದೇಶ ಕದನ : ಉಭಯ ತಂಡಗಳ ನಾಯಕರು ಕಣಕ್ಕಿಳಿಯುವ ಸಾಧ್ಯತೆ