ಮುಂಬೈ(ಮಹಾರಾಷ್ಟ್ರ): ಟೀಂ ಇಂಡಿಯಾದ ಸ್ಟಾರ್ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ 2023ರ ವಿಶ್ವಕಪ್‌ನಿಂದ ಹೊರಬಿದ್ದಿದ್ದಾರೆ. ಐಸಿಸಿ ಕ್ರಿಕೆಟ್ ವಿಶ್ವಕಪ್‌ನಲ್ಲಿ ರೋಹಿತ್ ಬಳಗಕ್ಕೆ ಈ ಸುದ್ದಿ ದೊಡ್ಡ ಆಘಾತ ನೀಡಿದೆ. ಟೀಮ್ ಇಂಡಿಯಾದ ಕೊನೆಯ ಲೀಗ್ ಪಂದ್ಯ, ಸೆಮಿಫೈನಲ್ ಅಥವಾ ಫೈನಲ್‌ಗೂ ಮೊದಲು ಹಾರ್ದಿಕ್ ಫಿಟ್ ಆಗುತ್ತಾರೆ ಎಂದು ಮೊದಲು ನಿರೀಕ್ಷಿಸಲಾಗಿತ್ತು. ಆದರೆ ಈಗ ಅವರು ವಿಶ್ವಕಪ್ 2023 ರಲ್ಲಿ ಟೀಮ್ ಇಂಡಿಯಾ ಪರ ಯಾವುದೇ ಪಂದ್ಯವನ್ನು ಆಡುವುದಿಲ್ಲ ಎಂಬುದು ಸ್ಪಷ್ಟವಾಗಿದೆ. ಅವರ ಜಾಗಕ್ಕೆ ಕನ್ನಡಿಗ ಪ್ರಸಿದ್ಧ್ ಕೃಷ್ಣ ತಂಡಕ್ಕೆ ಎಂಟ್ರಿ ಕೊಟ್ಟಿದ್ದಾರೆ.
2023ರ ವಿಶ್ವಕಪ್‌ನಲ್ಲಿ ಭಾರತ ತಂಡ ತನ್ನ ಅಜೇಯ ಓಟವನ್ನು ಮುಂದುವರಿಸಿದೆ. ರೋಹಿತ್ ಬಳಗ ಏಳು ಪಂದ್ಯಗಳಲ್ಲಿ ಏಳು ಗೆದ್ದು ಸೆಮಿಫೈನಲ್ ತಲುಪಿದೆ. ಇನ್ನು ಟೀಂ ಇಂಡಿಯಾ ನವೆಂಬರ್ 5 ರಂದು ದಕ್ಷಿಣ ಆಫ್ರಿಕಾ ಮತ್ತು ನವೆಂಬರ್ 12 ರಂದು ನೆದರ್ಲ್ಯಾಂಡ್ಸ್ ವಿರುದ್ಧ ಉಳಿದ ಪಂದ್ಯಗಳನ್ನು ಆಡಬೇಕಾಗಿದೆ. ಇದರ ನಂತರ ಸೆಮಿಫೈನಲ್ (ನವೆಂಬರ್ 15 ಮತ್ತು 16) ನಂತರ ವಿಶ್ವಕಪ್ ಫೈನಲ್ ನವೆಂಬರ್ 19 ರಂದು ನಡೆಯಲಿದೆ.
ಇಂತಹ ಪರಿಸ್ಥಿತಿಯಲ್ಲಿ ಹಾರ್ದಿಕ್ ಅನುಪಸ್ಥಿತಿಯಿಂದ ಟೀಂ ಇಂಡಿಯಾ ಅವರ ಕಾಂಬಿನೇಷನ್ನಲ್ಲಿ ಖಂಡಿತ ಮಿಸ್ ಮಾಡಿಕೊಳ್ಳಲಿದೆ. ಇತ್ತೀಚಿನ ಮಾಹಿತಿ ಪ್ರಕಾರ, ಸ್ಟಾರ್ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ತಮ್ಮ ಪಾದದ ಗಾಯದಿಂದ ಚೇತರಿಸಿಕೊಳ್ಳಲು ವಿಳಂಬವಾಗುತ್ತದೆ. ಹೀಗಾಗಿ ಪಂದ್ಯಾವಳಿಯ ಉಳಿದ ಮ್ಯಾಚ್ಗಳಲ್ಲಿ ಆಡಲು ಸಾಧ್ಯವಾಗುವುದಿಲ್ಲ. ಅವರ ಬದಲಿಗೆ ಪ್ರಸಿದ್ಧ್ ಕೃಷ್ಣ ಟೀಮ್ ಇಂಡಿಯಾದಲ್ಲಿ ಸ್ಥಾನ ಪಡೆಯಲಿದ್ದಾರೆ.
ಪುಣೆಯಲ್ಲಿ ಅಕ್ಟೋಬರ್ 19 ರಂದು ಬಾಂಗ್ಲಾದೇಶ ವಿರುದ್ಧದ ಭಾರತ ವಿಶ್ವಕಪ್ ಪಂದ್ಯದ ವೇಳೆ ಬೌಲಿಂಗ್ ಮಾಡುವಾಗ ಪಾಂಡ್ಯ ಅವರ ಎಡ ಹಿಮ್ಮಡಿಗೆ ಗಾಯವಾಗಿತ್ತು. ಗಾಯದ ಬಳಿಕ ಮೈದಾನದಿಂದ ಹೊರಗೆ ಹೋದ ಅವರನ್ನು, ಸ್ಕ್ಯಾನಿಂಗ್‌ಗಾಗಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆಗ ಭಾರತೀಯ ಉಪನಾಯಕ ಮತ್ತು ಸ್ಟಾರ್ ಆಲ್ ರೌಂಡರ್ ಪಾಂಡ್ಯ ಗಾಯಗೊಂಡಿರುವ ಬಗ್ಗೆ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಮಾಹಿತಿ ನೀಡಿದ್ದರು. ಪಾಂಡ್ಯ ಅವರಿಗೆ ಸ್ಕ್ಯಾನಿಂಗ್ ಮಾಡಿಸಲಾಗಿತ್ತು. ವೈದ್ಯರು ವಿಶ್ರಾಂತಿಗೆ ಸೂಚಿಸಿದ್ದಾರೆ. ಅವರು ಬಿಸಿಸಿಐ ವೈದ್ಯಕೀಯ ತಂಡದ ನಿರಂತರ ಮೇಲ್ವಿಚಾರಣೆಯಲ್ಲಿರುತ್ತಾರೆ ಎಂದು ಹೇಳಿದ್ದರು.
ಬಿಸಿಸಿಐ ಹೇಳಿದ್ದೇನು?: ಭಾರತ ತಂಡ ಹಾರ್ದಿಕ್ ಹೊರತಾಗಿ ಅ.22 ರಂದು ನ್ಯೂಜಿಲೆಂಡ್ ಮತ್ತು ಅ.29 ರಂದು ಇಂಗ್ಲೆಂಡ್ ವಿರುದ್ಧ ಭಾರತ ಪಂದ್ಯಗಳನ್ನಾಡಿತ್ತು. ಈ ಪಂದ್ಯಗಳಿಗೂ ಮುನ್ನ ಬಿಸಿಸಿಐ ಹಾರ್ದಿಕ್ ಅಲಭ್ಯತೆಯ ಬಗ್ಗೆ ಮಾಹಿತಿ ನೀಡಿದ್ದರು. ನವೆಂಬರ್ 2 ರಂದು ಶ್ರೀಲಂಕಾ ವಿರುದ್ಧ ವಾಂಖೆಡೆಯಲ್ಲಿ ನಡೆದ ಪಂದ್ಯದಲ್ಲಿ ಹಾರ್ದಿಕ್ ತಂಡಕ್ಕೆ ಮರಳುವ ನಿರೀಕ್ಷೆ ಇತ್ತು. ಆದರೆ, ಅವರು ಸಂಪೂರ್ಣವಾಗಿ ಚೇತರಿಸಿಕೊಂಡಿರದ ಕಾರಣ ಶ್ರೀಲಂಕಾ ಮತ್ತು ನ. 5 ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ಹಾರ್ದಿಕ್ ಆಡುತ್ತಿಲ್ಲ ಎಂದು ಬಿಸಿಸಿಐ ಹೇಳಿತ್ತು. ಈಗ ಹಾರ್ದಿಕ್ ಸಂಪೂರ್ಣ ಚೇತರಿಸಿಕೊಳ್ಳದ ಕಾರಣ ವಿಶ್ವಕಪ್‌ನಿಂದ ಹೊರ ಬಿದ್ದಿದ್ದಾರೆ.
ಓದಿ: ಸಂಪೂರ್ಣ ಚೇತರಿಸಿಕೊಳ್ಳದ ಹಾರ್ದಿಕ್ ಪಾಂಡ್ಯ: ಶ್ರೀಲಂಕಾ, ದಕ್ಷಿಣ ಆಫ್ರಿಕಾ ಪಂದ್ಯಕ್ಕೂ ಅಲಭ್ಯ