ಹೈದರಾಬಾದ್: ವಿಶ್ವಕಪ್ ಟೂರ್ನಿಯ ಎರಡು ಪಂದ್ಯಗಳಿ ಇಂದು ಲಖನೌ ಮತ್ತು ಮುಂಬೈನಲ್ಲಿ ನಡೆಯಲಿವೆ. ನೆದರ್ಲೆಂಡ್ಸ್ vs ಶ್ರೀಲಂಕಾ ಮತ್ತು ಇಂಗ್ಲೆಂಡ್ vs ದಕ್ಷಿಣ ಆಫ್ರಿಕಾ ನಡುವಿನ ಪಂದ್ಯಗಳು ಉತ್ತರಪ್ರದೇಶದ ಲಖನೌನಲ್ಲಿ ಮತ್ತು ಮಹಾರಾಷ್ಟ್ರದ ಮುಂಬೈನಲ್ಲಿ ನಡೆಯಲಿವೆ. ನೆದರ್ಲೆಂಡ್ಸ್ vs ಶ್ರೀಲಂಕಾ ನಡುವಿನ ಪಂದ್ಯ ಬೆಳಗ್ಗೆ 10.30ಕ್ಕೆ ಆರಂಭಗೊಂಡರೇ, ಇಂಗ್ಲೆಂಡ್ vs ದಕ್ಷಿಣ ಆಫ್ರಿಕಾ ನಡುವಿನ ಪಂದ್ಯ ಮಧ್ಯಾಹ್ನ 2 ಗಂಟೆಗೆ ಆರಂಭಗೊಳ್ಳಲಿದೆ.
ನೆದರ್ಲೆಂಡ್ಸ್ vs ಶ್ರೀಲಂಕಾ ಪಂದ್ಯ: ದಕ್ಷಿಣ ಆಫ್ರಿಕಾವನ್ನು ಸೋಲಿಸಿದ ನಂತರ ನೆದರ್ಲೆಂಡ್ಸ್ ತಂಡವು ವಿಶ್ವಕಪ್‌ನಲ್ಲಿ ಇದುವರೆಗೆ ಗೆಲುವಿನ ಖಾತೆ ತೆಗೆಯದ ಶ್ರೀಲಂಕಾ ವಿರುದ್ಧ ಸೆಣಸಲು ಸಜ್ಜಾಗಿದೆ. ಧರ್ಮಶಾಲಾದಲ್ಲಿ ನಡೆದ ಕೊನೆಯ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾವನ್ನು ಮಣಿಸಿರುವ ನೆದರ್ಲೆಂಡ್ಸ್ ತಂಡವು ತಮ್ಮ ಗೆಲುವನ್ನು ಮುಂದುವರಿಸಲು ಪ್ರಯತ್ನಿಸುತ್ತಿದೆ. ನೆದರ್ಲೆಂಡ್ಸ್ ತಮ್ಮ ಆಟಗಾರರಿಂದ ಉತ್ತಮ ಪ್ರದರ್ಶನವನ್ನು ನಿರೀಕ್ಷಿಸುತ್ತದೆ.
ಮಧ್ಯಮ ಕ್ರಮಾಂಕದ ಮೇಲೆ ಒತ್ತಡ ಹೇರಿದ ತಂಡಕ್ಕೆ ವಿಕ್ರಮಜಿತ್ ಸಿಂಗ್, ಮ್ಯಾಕ್ಸ್ ಓಡೌಡ್ ಮತ್ತು ಕಾಲಿನ್ ಅಕರ್ಮನ್ ಉತ್ತಮ ಆರಂಭ ನೀಡಲು ವಿಫಲರಾಗಿದ್ದಾರೆ. ದಕ್ಷಿಣ ಆಫ್ರಿಕಾವನ್ನು ಸೋಲಿಸಿದ ನಂತರ ನೆದರ್ಲೆಂಡ್ಸ್ ತಂಡದ ಆತ್ಮವಿಶ್ವಾಸ ಹೆಚ್ಚಿದ್ದು, ಶ್ರೀಲಂಕಾ ವಿರುದ್ಧವೂ ಇದೇ ಪ್ರಯತ್ನವನ್ನು ಮುನ್ನಡೆಸಲು ಬಯಸಿದೆ. ಸ್ಟಾರ್ ಆಲ್ ರೌಂಡರ್ ಬಾಸ್ ಡಿ ಲೀಡೆ ಬೌಲಿಂಗ್ನಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದ್ದರೂ ಬ್ಯಾಟಿಂಗ್‌ನಲ್ಲಿ ಸುಧಾರಣೆ ಕಾಣಬೇಕಿದೆ.
ಮತ್ತೊಂದೆಡೆ ಬೌಲಿಂಗ್ ಬಗ್ಗೆ ಶ್ರೀಲಂಕಾಗೆ ಆತಂಕ ಶುರುವಾಗಿದೆ. ಇಲ್ಲಿಯವರೆಗೆ ತಂಡವು ಒಂದು ಗುಂಪಾಗಿ ಉತ್ತಮ ಪ್ರದರ್ಶನ ನೀಡಲು ಸಾಧ್ಯವಾಗಿಲ್ಲ. ಬ್ಯಾಟಿಂಗ್‌ನಲ್ಲಿ ಅವರು ಎರಡು ಪಂದ್ಯಗಳಲ್ಲಿ 300 ಕ್ಕೂ ಹೆಚ್ಚು ರನ್ ಗಳಿಸಿದ್ರೂ ಇದುವರೆಗೆ ಒಂದೂ ಪಂದ್ಯದಲ್ಲಿಯೂ ಗೆಲುವು ಕಂಡಿಲ್ಲ. ಇದುವರೆಗೆ ಏಳು ವಿಕೆಟ್ ಪಡೆದಿರುವ ದಿಲ್ಶಾನ್ ಮಧುಶಂಕ ಮೇಲೆ ಜವಾಬ್ದಾರಿ ಹೆಚ್ಚಿದೆ. ಇದೇ ಮೈದಾನದಲ್ಲಿ ಆಸ್ಟ್ರೇಲಿಯಾ ವಿರುದ್ಧ ನಡೆದ ಪಂದ್ಯದಲ್ಲಿ ಅವರ ಚೆಂಡು ಸ್ವಿಂಗ್ ಆಗಿದ್ದು, ಇದೀಗ ಡಚ್ ತಂಡದ ವಿರುದ್ಧ ಇದರ ಲಾಭ ಪಡೆಯಲು ಪ್ರಯತ್ನಿಸಲಿದ್ದಾರೆ.
ಶ್ರೀಲಂಕಾ ಮತ್ತು ನೆದರ್ಲ್ಯಾಂಡ್ಸ್ ಐದು ಬಾರಿ ಮುಖಾಮುಖಿಯಾಗಿದ್ದು, ಶ್ರೀಲಂಕಾ ಎಲ್ಲಾ ಐದು ಪಂದ್ಯಗಳನ್ನು ಗೆದ್ದಿದೆ. ಈ ವರ್ಷ ವಿಶ್ವಕಪ್ ಅರ್ಹತಾ ಸುತ್ತಿನಲ್ಲಿ ಶ್ರೀಲಂಕಾ ಎರಡು ಬಾರಿ ನೆದರ್ಲೆಂಡ್ಸ್ ಅನ್ನು ಸೋಲಿಸಿರುವುದು ಗಮನಾರ್ಹ. ಇನ್ನು ನೆದರ್ಲೆಂಡ್ಸ್ vs ಶ್ರೀಲಂಕಾ ನಡುವಿನ ಪಂದ್ಯ ಉತ್ತರಪ್ರದೇಶದ ಲಖನೌನ ಭಾರತ ರತ್ನ ಅಟಲ್ ಬಿಹಾರಿ ವಾಜಪೇಯಿ ಏಕನಾ ಕ್ರಿಕೆಟ್ ಸ್ಟೇಡಿಯಂನಲ್ಲಿ ಬೆಳಗ್ಗೆ 10.30ಕ್ಕೆ ಆರಂಭಗೊಳ್ಳಲಿದೆ.
ಇಂಗ್ಲೆಂಡ್ vs ದಕ್ಷಿಣ ಆಫ್ರಿಕಾ ಪಂದ್ಯ: ಇಂಗ್ಲೆಂಡ್ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಪಂದ್ಯ ಇಂದು ಮಧ್ಯಾಹ್ನ 2 ಗಂಟೆಗೆ ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯಲಿದೆ. ವಿಶ್ವಕಪ್‌ನಲ್ಲಿ ಇಂಗ್ಲೆಂಡ್‌ನ ಆರಂಭ ಅಷ್ಟೊಂದು ವಿಶೇಷವೇನೂ ಆಗಿರಲಿಲ್ಲ. ಅವರು ಆಡಿರುವ ಮೂರು ಪಂದ್ಯಗಳಲ್ಲಿ ಒಂದನ್ನು ಮಾತ್ರ ಗೆದ್ದಿದ್ದಾರೆ. ಇಂಗ್ಲೆಂಡ್ ತಂಡ ನ್ಯೂಜಿಲೆಂಡ್ ಮತ್ತು ಅಫ್ಘಾನಿಸ್ತಾನ ವಿರುದ್ಧ ಸೋಲು ಕಂಡಿದೆ. ಬಾಂಗ್ಲಾದೇಶ ವಿರುದ್ಧ ಮಾತ್ರ ಇಂಗ್ಲೆಂಡ್ ಗೆದ್ದಿದೆ. ದಕ್ಷಿಣ ಆಫ್ರಿಕಾ ತಂಡ ಶ್ರೀಲಂಕಾ ಮತ್ತು ಆಸ್ಟ್ರೇಲಿಯಾವನ್ನು ಸೋಲಿಸಿದೆ. ದಕ್ಷಿಣ ಆಫ್ರಿಕಾ ತಂಡ ಮೂರನೇ ಪಂದ್ಯದಲ್ಲಿ ನೆದರ್ಲೆಂಡ್ಸ್ ವಿರುದ್ಧ ಸೋತಿತ್ತು. ನೆದರ್ಲೆಂಡ್ಸ್ ವಿರುದ್ಧ ದಕ್ಷಿಣ ಆಫ್ರಿಕಾದ ಸೋಲು ಅಚ್ಚರಿ ಮೂಡಿಸಿತ್ತು.
ಇಂಗ್ಲೆಂಡ್ ಮತ್ತು ದಕ್ಷಿಣ ಆಫ್ರಿಕಾ ಏಕದಿನದಲ್ಲಿ 69 ಬಾರಿ ಮುಖಾಮುಖಿಯಾಗಿವೆ. ಇಂಗ್ಲೆಂಡ್ 30 ಬಾರಿ ದಕ್ಷಿಣ ಆಫ್ರಿಕಾವನ್ನು ಸೋಲಿಸಿದೆ. 5 ಪಂದ್ಯಗಳು ರದ್ದಾಗಿವೆ. ದಕ್ಷಿಣ ಆಫ್ರಿಕಾ ಮತ್ತು ಇಂಗ್ಲೆಂಡ್ ನಡುವೆ ಒಂದು ಪಂದ್ಯ ಟೈ ಆಗಿದೆ.
ವಿಶ್ವಕಪ್ ಟೂರ್ನಿಯಲ್ಲಿ ಈವರೆಗೆ ಇಂಗ್ಲೆಂಡ್ ಮತ್ತು ದಕ್ಷಿಣ ಆಫ್ರಿಕಾ ನಡುವೆ 7 ಪಂದ್ಯಗಳು ನಡೆದಿವೆ. ವಿಶ್ವಕಪ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಇಂಗ್ಲೆಂಡ್ ಮೇಲುಗೈ ಸಾಧಿಸಿದೆ. ಇಂಗ್ಲೆಂಡ್ 4 ಬಾರಿ ದಕ್ಷಿಣ ಆಫ್ರಿಕಾವನ್ನು ಸೋಲಿಸಿದೆ.
ಓದಿ: ವಿಶ್ವಕಪ್ ಕ್ರಿಕೆಟ್: ಆಸ್ಟ್ರೇಲಿಯಾ ಭರ್ಜರಿ ಕಮ್ಬ್ಯಾಕ್.. ಪಾಕಿಸ್ತಾನಕ್ಕೆ ಸತತ ಎರಡನೇ ಸೋಲು