ಅಹಮದಾಬಾದ್(ಗುಜರಾತ್): ಇಲ್ಲಿನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ವಿಶ್ವಕಪ್ ಫೈನಲ್‌ನಲ್ಲಿ ರೋಹಿತ್ ಶರ್ಮಾ ಮತ್ತೊಮ್ಮೆ ಒಂದು ಸಣ್ಣ ಮೊತ್ತಕ್ಕೆ ಔಟಾದರು. ಆದರೆ ಕಡಿಮೆ ರನ್ ಕಲೆ ಹಾಕಿದರೂ ವಿಶ್ವಕಪ್ ಪಂದ್ಯದುದ್ದಕ್ಕೂ ಪ್ರಭಾವಶಾಲಿ ಇನ್ನಿಂಗ್ಸ್ ಕಟ್ಟಿದರು. ಇದು ಪವರ್‌ಪ್ಲೇಯ ಮೊದಲ ಹತ್ತು ಓವರ್‌ಗಳಲ್ಲಿ ಭಾರತಕ್ಕೆ ಭದ್ರ ಅಡಿಪಾಯ ಹಾಕುವಲ್ಲಿ ನೆರವಾಗಿತ್ತು. ನಿನ್ನೆಯ ಪಂದ್ಯದಲ್ಲೂ ಅಷ್ಟೇ, ರೋಹಿತ್ ತಾವೆದುರಿಸಿದ 31 ಎಸೆತಗಳಲ್ಲಿ 4 ಬೌಂಡರಿ ಹಾಗೂ 3 ಸಿಕ್ಸರ್ ಒಳಗೊಂಡ 47 ರನ್ ಪೇರಿಸಿದರು. 151ಕ್ಕಿಂತ ಹೆಚ್ಚು ಸ್ಟ್ರೈಕ್ ರೇಟ್‌ನಲ್ಲಿ ರನ್ ಕಲೆಹಾಕಿದರು.
ಪ್ರಸಕ್ತ ವಿಶ್ವಕಪ್ ಟೂರ್ನಿಯಲ್ಲಿ ರೋಹಿತ್ ಶರ್ಮಾ ಆಡಿರುವ 11 ಪಂದ್ಯಗಳಲ್ಲಿ 54.27 ಸರಾಸರಿಯಲ್ಲಿ 597 ರನ್ ಗಳಿಸಿದ್ದಾರೆ. ಶರ್ಮಾ ಗಳಿಸಿದ ರನ್‌ಗಳು ಸುಮಾರು 126 ಸ್ಟ್ರೈಕ್ ರೇಟ್‌ನಲ್ಲಿ ಬಂದಿವೆ ಅನ್ನೋದು ಗಮನಾರ್ಹ. ಒಂದು ಶತಕ ಮತ್ತು ಮೂರು ಅರ್ಧ ಶತಕಗಳು ಅವರ ಬ್ಯಾಟ್‌ನಿಂದ ಹರಿದುಬಂದಿವೆ. ಅಫ್ಘಾನಿಸ್ತಾನದ ವಿರುದ್ಧ 131 ರನ್ ಗಳಿಸಿದ್ದು ರೋಹಿತ್ ಅತ್ಯುತ್ತಮ ವೈಯಕ್ತಿಕ ಸ್ಕೋರ್ ಆಗಿದೆ. 125 ಸ್ಟ್ರೈಕ್ ರೇಟ್‌ನಲ್ಲಿ 500ಕ್ಕೂ ಹೆಚ್ಚು ರನ್ ಗಳಿಸಿದ್ದಾರೆ. ರೋಹಿತ್ ಟೂರ್ನಿಯಲ್ಲಿ 31 ಸಿಕ್ಸರ್‌ಗಳನ್ನು ಬಾರಿಸಿದ್ದು, ವಿಶ್ವಕಪ್‌ನಲ್ಲಿ ಅತಿ ಹೆಚ್ಚು ಸಿಕ್ಸರ್ ಸಿಡಿಸಿದ ಆಟಗಾರರನೂ ಹೌದು.
2019ರ ಆವೃತ್ತಿಯಲ್ಲಿ ನ್ಯೂಜಿಲೆಂಡ್ ನಾಯಕ ಕೇನ್ ವಿಲಿಯಮ್ಸನ್ ಪೇರಿಸಿದ್ದ 578 ರನ್‌ಗಳನ್ನು ಹಿಂದಿಕ್ಕಿ ರೋಹಿತ್ ಈ ವಿಶ್ವಕಪ್ ಆವೃತ್ತಿಯಲ್ಲಿ ನಾಯಕನಾಗಿ ಅತಿ ಹೆಚ್ಚು ರನ್ ಗಳಿಸಿದ ದಾಖಲೆ ಬರೆದರು. ಈ ಮೂಲಕ ವಿಶ್ವಕಪ್ ಟೂರ್ನಿಯಲ್ಲಿ ಕನಿಷ್ಠ 400 ರನ್ ಗಳಿಸಿದ ಎರಡನೇ ಆಟಗಾರರಾದರು. 2015ರ ವಿಶ್ವಕಪ್‌ನಲ್ಲಿ ಎಂಟು ಪಂದ್ಯಗಳಲ್ಲಿ 144.31 ಸ್ಟ್ರೈಕ್ ರೇಟ್‌ನಲ್ಲಿ 482 ರನ್ ಗಳಿಸಿದ ದಕ್ಷಿಣ ಆಫ್ರಿಕಾದ ಎಬಿ ಡಿವಿಲಿಯರ್ಸ್ ಹೆಸರಿನಲ್ಲಿ ಸದ್ಯದ ದೊಡ್ಡ ದಾಖಲೆ ಇದೆ.
ರೋಹಿತ್ ಗಳಿಸಿರುವ 597 ರನ್‌ಗಳಲ್ಲಿ, ಮೊದಲ ಪವರ್‌ಪ್ಲೇನಲ್ಲಿ 401 ರನ್‌ಗಳನ್ನು ಒಂದರಿಂದ ಹತ್ತನೇ ಓವರ್‌ಗಳ ನಡುವೆ ಗಳಿಸಲಾಗಿದೆ. 135.01 ಸ್ಟ್ರೈಕ್ ರೇಟ್‌ನಲ್ಲಿ ಈ ರನ್ ಗಳಿಸಲು ಅವರು ಕೇವಲ 297 ಎಸೆತಗಳನ್ನು ಎದುರಿಸಿದ್ದಾರೆ. ಪವರ್‌ಪ್ಲೇನಲ್ಲಿ ಅವರ ಸರಾಸರಿ 80.20 ಆಗಿದೆ. ಇನ್ನಿಂಗ್ಸ್‌ನ ಈ ಹಂತದಲ್ಲಿ 24 ಸಿಕ್ಸರ್‌ಗಳನ್ನು ಹೊಡೆದಿದ್ದಾರೆ. ರೋಹಿತ್ ಈ ವಿಶ್ವಕಪ್ನ ಎಲ್ಲಾ ಅಂಶಗಳನ್ನು ಪರಿಗಣಿಸಿದರೂ ಅತ್ಯುತ್ತಮ ಪವರ್‌ಪ್ಲೇ ಬ್ಯಾಟರ್ ಆಗಿದ್ದಾರೆ.
ಶರ್ಮಾ ತಮ್ಮ ವಿಶ್ವಕಪ್ ವೃತ್ತಿಜೀವನದಲ್ಲಿ 60.57ರ ಸರಾಸರಿಯಲ್ಲಿ 1,575 ರನ್ ಗಳಿಸಿದ್ದಾರೆ. 105.49 ಸ್ಟ್ರೈಕ್ ರೇಟ್ ಕಾಯ್ದುಕೊಂಡಿದ್ದಾರೆ. ಇದರಲ್ಲಿ ದಾಖಲೆಯ 7 ಶತಕಗಳು ಮತ್ತು ಆರು ಅರ್ಧಶತಕಗಳಿವೆ. ಅತ್ಯುತ್ತಮ ಸ್ಕೋರ್ 140 ಆಗಿದೆ. ಟೂರ್ನಿಯ ಇತಿಹಾಸದಲ್ಲಿ ಅತಿ ಹೆಚ್ಚು ರನ್ ಗಳಿಸಿದವರ ಪೈಕಿ ನಾಲ್ಕನೇ ಸ್ಥಾನದಲ್ಲಿದ್ದಾರೆ. ವಿಶ್ವಕಪ್ ಕ್ರಿಕೆಟ್‌ನಲ್ಲಿ ಭಾರತದ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರು 44 ಇನ್ನಿಂಗ್ಸ್‌ಗಳಲ್ಲಿ ಆರು ಶತಕ ಮತ್ತು 15 ಅರ್ಧಶತಕಗಳೊಂದಿಗೆ 2,278 ರನ್ ಗಳಿಸಿದ್ದಾರೆ.
ಇದನ್ನೂ ಓದಿ: 'ನಾವು ಯಾವಾಗಲೂ ನಿಮ್ಮೊಂದಿಗಿರುತ್ತೇವೆ': ವಿಶ್ವಕಪ್ ಸೋಲಿನ ಬಳಿಕ ಭಾರತ ಕ್ರಿಕೆಟ್ ತಂಡಕ್ಕೆ ಮೋದಿ ಸಂದೇಶ