ಲಖನೌ (ಉತ್ತರ ಪ್ರದೇಶ): ಐಸಿಸಿ ಕ್ರಿಕೆಟ್ ವಿಶ್ವಕಪ್ ಪಂದ್ಯದಲ್ಲಿ ಆಸ್ಟ್ರೇಲಿಯಾ ಸತತ ಎರಡನೇ ಸೋಲು ಕಂಡಿದೆ. ಲಖನೌದಲ್ಲಿ ಗುರುವಾರ ನಡೆದ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 134 ರನ್‌ಗಳ ಸೋಲು ಕಂಡಿದೆ. ಪಂದ್ಯದ ಬಳಿಕ ಆಸ್ಟ್ರೇಲಿಯಾ ತಂಡದ ನಾಯಕ ಪ್ಯಾಟ್ ಕಮ್ಮಿನ್ಸ್ ಮಾತನಾಡಿದ್ದು, ತಂಡ ಎಲ್ಲ ಪರಿಸ್ಥಿತಿಗಳಿಗೆ ಹೊಂದಿಕೊಳ್ಳಬೇಕಾಗಿದೆ ಎಂದು ಹೇಳಿದ್ದಾರೆ. ಪಂದ್ಯ ಸವಾಲಿನಿಂದ ಕೂಡಿದ್ದು, ಸೋಲು ಎಲ್ಲರಿಗೂ ನೋವು ತಂದಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.
ಇದು ಕ್ರಿಕೆಟ್ ವಿಶ್ವಕಪ್ ಇತಿಹಾಸದಲ್ಲಿ ಆಸ್ಟ್ರೇಲಿಯಾದ ಅತಿ ದೊಡ್ಡ ಸೋಲು. ಮತ್ತೊಂದು ಕಡೆ ಈ ಗೆಲುವಿನಿಂದಾಗಿ ದಕ್ಷಿಣ ಆಫ್ರಿಕಾ ಅಂಕಪಟ್ಟಿಯಲ್ಲಿ ನಾಲ್ಕು ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿದೆ. ಆದರೆ, ಆಸ್ಟ್ರೇಲಿಯಾವು ತನ್ನ ಎರಡೂ ಪಂದ್ಯಗಳಲ್ಲಿ ಸೋತ ನಂತರ ಶ್ರೇಯಾಂಕದಲ್ಲಿ ಕೊನೆಯ ಸ್ಥಾನಕ್ಕೆ ಕುಸಿದಿದೆ.
"ಕ್ವಿಂಟನ್ ಡಿ ಕಾಕ್ ನಿಜವಾಗಿಯೂ ಚೆನ್ನಾಗಿ ಬ್ಯಾಟ್ ಮಾಡಿದರು, ಮತ್ತು ದಕ್ಷಿಣ ಆಫ್ರಿಕಾ ಸೇರಿಸಿದ 310 ರನ್ಗಳನ್ನು ಸುಲಭವಾಗಿ ಚೇಸ್ ಮಾಡಬಹುದು ಎಂದುಕೊಂಡಿದ್ದೆವು. ಆದರೆ ಅವರ ಬೌಲರ್‌ಗಳು ನಿಜವಾಗಿಯೂ ಚೆನ್ನಾಗಿ ಬೌಲ್ ಮಾಡಿದರು. ನಾವು ಅಷ್ಟು ರನ್ಗಳನ್ನು ಸೇರಿಸಲು ವಿಫಲರಾದೆವು, ಮೊದಲು ಬ್ಯಾಟಿಂಗ್ ಮಾಡಿದ್ದರೆ ಸುಲಭವಾಗುತ್ತಿತ್ತು. ಆದರೆ ಇದನ್ನು ಹೇಳುವುದು ನಿಜವಾಗಿಯೂ ಕಷ್ಟದ ಕೆಲಸ. ಈ ಸವಾಲನ್ನು ಎದುರಿಸಲು ಮೊದಲು ಬ್ಯಾಟಿಂಗ್ ಮಾಡ್ತೇವಾ, ಇಲ್ಲವೇ ಎರಡನೇ ಬ್ಯಾಟಿಂಗ್ ಮಾಡ್ತೇವಾ ಎಂಬುದನ್ನು ಲೆಕ್ಕಿಸದೇ ಆಟವಾಡಬೇಕು. ಗೆಲ್ಲುವ ಮಾರ್ಗಗಳನ್ನು ಕಂಡು ಹಿಡಿಯಬೇಕಿದೆ. ಸೋಲು ಎಲ್ಲರಿಗೂ ನೋವು ತಂದಿದೆ. ಮುಂದಿನ ಪಂದ್ಯಗಳಲ್ಲಿ ಗೆಲುವಿನ ಹಳಿಗೆ ಬರಲು ಪ್ರಯತ್ನಿಸುತ್ತೇವೆ. ಇದಕ್ಕಾಗಿ ಎಲ್ಲಿ ತಪ್ಪಾಗಿದೆ ಎಂಬುದನ್ನು ನೋಡಿ, ತಿದ್ದುಕೊಂಡು ಜಯದ ಹಳಿಗೆ ಮರಳುತ್ತೇವೆ. ನಾವು ಅಚ್ಚುಕಟ್ಟಾಗಿ ಮಾಡಬೇಕಾದ ಹಲವು ಕೆಲಸಗಳಿವೆ‘‘ ಎಂದು ಆಸ್ಟ್ರೇಲಿಯಾ ನಾಯಕ ಕಮ್ಮಿನ್ಸ್ ಹೇಳಿದರು.
ಟಾಸ್ ಗೆದ್ದ ಆಸ್ಟ್ರೇಲಿಯಾ ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತ್ತು. ಅವರ ನಿರ್ಧಾರ ತಪ್ಪು ಎಂಬಂತೆ, ದಕ್ಷಿಣ ಆಫ್ರಿಕಾದ ಕ್ವಿಂಟನ್ ಡಿ ಕಾಕ್, ಎಂಟು ಬೌಂಡರಿ ಮತ್ತು ಐದು ಸಿಕ್ಸರ್ ಸೇರಿದಂತೆ 106 ಎಸೆತಗಳಲ್ಲಿ 109 ರನ್‌ಗಳ ಮೂಲಕ ಸತತ WCನ 2ನೇ ಶತಕ ಸಿಡಿಸಿದರು. ಏಡೆನ್ ಮಾರ್ಕ್ರಾಮ್ 44 ಎಸೆತಗಳಲ್ಲಿ 56 ರನ್ ಬಾರಿಸಿದರು. ಅವರ ಈ ಆಟದಲ್ಲಿ ಏಳು ಬೌಂಡರಿ ಮತ್ತು ಒಂದು ಸಿಕ್ಸರ್ ಇತ್ತು. ಇನ್ನು ದಕ್ಷಿಣ ಆಫ್ರಿಕಾ ನಾಯಕ ಟೆಂಬಾ ಬಾವುಮಾ 55 ಎಸೆತಗಳಲ್ಲಿ 35 ರನ್ ಬಾರಿಸಿದರು. ಈ ಮೂಲಕ ತಂಡ 50 ಓವರ್‌ಗಳಲ್ಲಿ 7 ವಿಕೆಟ್ ಕಳೆದುಕೊಂಡು 311 ರನ್ ಪೇರಿಸಿತ್ತು.
ಈ ಗುರಿ ಬೆನ್ನಟ್ಟಿದ ಆಸ್ಟ್ರೇಲಿಯಾ, ಕೇವಲ 40.5 ಓವರ್‌ಗಳಲ್ಲಿ 177 ರನ್‌ಗಳಿಗೆ ಆಲೌಟ್ ಆಗುವ ಮೂಲಕ ವಿಶ್ವಕಪ್ ಇತಿಹಾಸದಲ್ಲಿ 134 ರನ್‌ಗಳ ಸೋಲನ್ನು ದಾಖಲಿಸಿತು. ಆಸ್ಟ್ರೇಲಿಯಾ ಎರಡು ಪಂದ್ಯಗಳಲ್ಲಿ ಸೋಲುವ ಮೂಲಕ ಒಂಭತ್ತನೇ ಸ್ಥಾನದಲ್ಲಿದೆ. ಅತ್ತ ದಕ್ಷಿಣ ಆಫ್ರಿಕಾ ಎರಡು ಗೆಲುವು ಮತ್ತು ನಾಲ್ಕು ಪಾಯಿಂಟ್‌ಗಳೊಂದಿಗೆ ಅಗ್ರಸ್ಥಾನದಲ್ಲಿದೆ. ಡಿ ಕಾಕ್ ತಮ್ಮ ಶತಕಕ್ಕಾಗಿ 'ಪ್ಲೇಯರ್ ಆಫ್ ದಿ ಮ್ಯಾಚ್' ಪ್ರಶಸ್ತಿ ಪಡೆದರು. (ANI)