ಪುಣೆ, ಮಹಾರಾಷ್ಟ್ರ: ಬಾಂಗ್ಲಾದೇಶದ ವಿರುದ್ಧ ಅಜೇಯ ಶತಕ ಬಾರಿಸಿ ಭಾರತಕ್ಕೆ ಮತ್ತೊಂದು ಸುಲಭ ಗೆಲುವು ತಂದುಕೊಟ್ಟಿದ್ದ ಸ್ಟಾರ್ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ, ತಂಡವನ್ನು ಗುರಿಯತ್ತ ಕೊಂಡೊಯ್ದಿದ್ದಕ್ಕೆ ಸಂತೋಷವಾಗಿದೆ ಎಂದು ಹೇಳಿದ್ದಾರೆ.
ಪಂದ್ಯದ ಬಳಿಕ ಮಾತನಾಡಿದ ಕೊಹ್ಲಿ, 'ರವೀಂದ್ರ ಜಡೇಜಾ ಅವರಿಂದ ಪಂದ್ಯದ ಅತ್ಯುತ್ತಮ ಆಟಗಾರ ಪ್ರಶಸ್ತಿ ಕದ್ದಿದ್ದಕ್ಕಾಗಿ ಕ್ಷಮಿಸಿ. ನಾನು ದೊಡ್ಡ ಕೊಡುಗೆ ನೀಡಲು ಬಯಸುತ್ತೇನೆ. ಈಗಾಗಲೇ ನಾನು ನಡೆಯುತ್ತಿರುವ ವಿಶ್ವಕಪ್‌ನಲ್ಲಿ ಅರ್ಧಶತಕಗಳನ್ನು ಗಳಿಸಿದ್ದೇನೆ. ಆದರೆ ಈ ಬಾರಿ ಶತಕವನ್ನು ಪೂರ್ಣಗೊಳಿಸಲು ಬಯಸಿದ್ದೆ, ಅದೇ ರೀತಿ ಶತಕ ಬಾರಿಸಿದ್ದೇನೆ ಎಂದು ಕೊಹ್ಲಿ ಹೇಳಿದರು.
ಇದು ನನಗೆ ಕನಸಿನ ಆರಂಭ, ಮೊದಲ ನಾಲ್ಕು ಎಸೆತಗಳಲ್ಲಿ ಎರಡು ಫ್ರೀ ಹಿಟ್‌ಗಳು ಒಲಿದು ಬಂದಿತ್ತು. ಒಂದು ಸಿಕ್ಸರ್ ಮತ್ತು ಒಂದು ಬೌಂಡರಿ ಬಾರಿಸಿದೆ. ಪಿಚ್ ತುಂಬಾ ಚೆನ್ನಾಗಿತ್ತು. ನನ್ನ ಆಟವನ್ನು ಆಡಲು ಪಿಚ್ ನನಗೆ ಅವಕಾಶ ಮಾಡಿಕೊಟ್ಟಿತು. ಪಂದ್ಯದಲ್ಲಿ ಜೋರಾಗಿ ಓಡಿ ರನ್‌ಗಳನ್ನು ಕದಿಯಬೇಕು ಮತ್ತು ಅಗತ್ಯವಿದ್ದಾಗ ಬೌಂಡರಿ ಪಡೆಯಬೇಕು. ನನಗೆ ಅವಕಾಶ ಸಿಕ್ಕಾಗ ಬೌಂಡರಿ ಬಾರಿಸಿದೆ. ಅಷ್ಟೊಂದು ಪ್ರೇಕ್ಷಕರ ಮುಂದೆ ನನ್ನ ಆಟ ಆಡಿರುವುದು ನನಗೆ ವಿಶೇಷ ಅನುಭವ ನೀಡಿತು ಎಂದು ಕೊಹ್ಲಿ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು.
ಇನ್ನು ಪ್ರಧಾನಿ ನರೇಂದ್ರ ಮೋದಿ ಅವರು ಭಾರತದ ವಿಜಯವನ್ನು ಶ್ಲಾಘಿಸಿದರು. ಈ ಹಿಂದೆ ಟ್ವಿಟರ್ ಎಂದು ಕರೆಯಲ್ಪಡುವ ಎಕ್ಸ್ನಲ್ಲಿ PM ಮೋದಿ ಟ್ವೀಟ್ ಮಾಡಿ, ಇನ್ನೊಂದು ಅಸಾಧಾರಣ ಆಟ! ಬಾಂಗ್ಲಾದೇಶದ ವಿರುದ್ಧದ ಪ್ರಭಾವಶಾಲಿ ಗೆಲುವಿನಿಂದ ನಮ್ಮ ಕ್ರಿಕೆಟ್ ತಂಡದ ಬಗ್ಗೆ ಹೆಮ್ಮೆಯಿದೆ. ವಿಶ್ವಕಪ್ ಸಮಯದಲ್ಲಿ ನಮ್ಮ ತಂಡವು ಉತ್ತಮ ಫಾರ್ಮ್‌ನಲ್ಲಿದೆ ಎಂದು ತಂಡಕ್ಕೆ ಶುಭಾಶಯಗಳು ಎಂದು ತಿಳಿಸಿದ್ದಾರೆ.
ಬಾಂಗ್ಲಾದೇಶ ನೀಡಿದ 257 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಭಾರತ, ಕೊಹ್ಲಿ (97 ಎಸೆತಗಳಲ್ಲಿ 103 ರನ್) ಅವರ ಅಜೇಯ ಶತಕದ ನೆರವಿನಿಂದ ಮೂರು ವಿಕೆಟ್‌ಗೆ 261 ರನ್ ಗಳಿಸುವ ಮೂಲಕ ಏಳು ವಿಕೆಟ್‌ಗಳ ಸುಲಭ ಜಯ ದಾಖಲಿಸಿತು. ಆರಂಭಿಕರಾದ ಶುಭ್ಮನ್ ಗಿಲ್ 53 ರನ್‌ಗಳ ಕೊಡುಗೆ ನೀಡಿದರೆ, ನಾಯಕ ರೋಹಿತ್ ಶರ್ಮಾ 48 ರನ್‌ಗಳನ್ನು ಬಾರಿಸಿದ್ದರು. ಇದಕ್ಕೂ ಮೊದಲು ರವೀಂದ್ರ ಜಡೇಜಾ (38ಕ್ಕೆ 2 ವಿಕೆಟ್), ಜಸ್ಪ್ರೀತ್ ಬುಮ್ರಾ (41ಕ್ಕೆ 2 ವಿಕೆಟ್) ಮತ್ತು ಮೊಹಮ್ಮದ್ ಸಿರಾಜ್ (60ಕ್ಕೆ 2 ವಿಕೆಟ್) ಅವರ ಅದ್ಭುತ ಬೌಲಿಂಗ್ ಮುಂದೆ ಬಾಂಗ್ಲಾದೇಶ ತಂಡ ಎಂಟು ವಿಕೆಟ್‌ಗೆ 256 ರನ್ ಗಳಿಸಲಷ್ಟೇ ಶಕ್ತವಾಯಿತು.
ಓದಿ: ಸಚಿನ್ ತೆಂಡೂಲ್ಕರ್ ದಾಖಲೆ ಮುರಿದ ವಿರಾಟ್ ಕೊಹ್ಲಿ: ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ವೇಗದ 26,000 ರನ್ ಗಳಿಕೆ!