ಬೆಂಗಳೂರು: ಇಂದು ಪಾಕಿಸ್ತಾನ ಮತ್ತು ನ್ಯೂಜಿಲೆಂಡ್ ನಡುವೆ ನಡೆಯುತ್ತಿರುವ ಪಂದ್ಯ ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದೆ. ಈಗಾಗಲೇ ಟಾಸ್ ಗೆದ್ದಿರುವ ಪಾಕ್ ತಂಡ ಫೀಲ್ಡಿಂಗ್ ಆಯ್ದುಕೊಂಡಿದೆ.
ಈ ಪಂದ್ಯ ಎರಡೂ ತಂಡಗಳಿಗೆ ಅತ್ಯಂತ ಮಹತ್ವದ್ದಾಗಿದೆ. ಏಕೆಂದರೆ ಇಂದಿನ ಪಂದ್ಯವನ್ನು ಗೆಲ್ಲುವ ತಂಡವು ಸೆಮಿಫೈನಲ್ ರೇಸ್‌ನಲ್ಲಿ ಉಳಿಯಲು ಸುಲಭ ಮಾರ್ಗ ಕಂಡುಕೊಳ್ಳಲಿದೆ. ಆದರೆ ಈ ಪಂದ್ಯಕ್ಕೆ ಮಳೆ ಅಡ್ಡಿಪಡಿಸುವ ಸಾಧ್ಯತೆಯಿದ್ದು, ಒಂದು ವೇಳೆ ಪಂದ್ಯ ರದ್ದಾದ್ರೆ ಉಭಯ ತಂಡಗಳು 1-1 ಅಂಕಗಳಿಗೆ ತೃಪ್ತಿಪಟ್ಟುಕೊಳ್ಳಬೇಕಾಗಬಹುದು. ಆಗ ಸೆಮಿಗೆ ಪಾಕ್ನ ಹಾದಿ ತುಂಬ ಕಠಿಣವಾಗುತ್ತದೆ.
ಈ ವಿಶ್ವಕಪ್ ಅಭಿಯಾನದಲ್ಲಿ ಪಾಕಿಸ್ತಾನ ತಂಡವು ಇದುವರೆಗೆ 7 ಪಂದ್ಯಗಳಲ್ಲಿ 3 ರಲ್ಲಿ ಮಾತ್ರ ಗೆದ್ದಿದೆ. ಉಳಿದ 4 ಪಂದ್ಯಗಳಲ್ಲಿ ಸೋತಿದ್ದು, ಪ್ರಸ್ತುತ ಬಾಬರ್ ಅಜಮ್ ನೇತೃತ್ವದ ಪಾಕಿಸ್ತಾನ ತಂಡ 6 ಅಂಕಗಳೊಂದಿಗೆ ಪಾಯಿಂಟ್ ಪಟ್ಟಿಯಲ್ಲಿ ಆರನೇ ಸ್ಥಾನದಲ್ಲಿದೆ.
ಇನ್ನು ನ್ಯೂಜಿಲೆಂಡ್ ತಂಡ 7 ಪಂದ್ಯಗಳಲ್ಲಿ 4 ರಲ್ಲಿ ಗೆದ್ದಿದೆ. ನ್ಯೂಜಿಲೆಂಡ್ ತಂಡ 8 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ. ಕಳೆದ ಮೂರು ಪಂದ್ಯಗಳಲ್ಲಿ ಸತತ ಸೋಲು ಕಂಡಿರುವ ನ್ಯೂಜಿಲೆಂಡ್ ತಂಡವು ಪಾಕ್ ವಿರುದ್ಧ ಗೆಲ್ಲುವ ಉದ್ದೇಶದಿಂದ ಕಣಕ್ಕಿಳಿಯಲಿದೆ.
ಏಕದಿನ ವಿಶ್ವಕಪ್‌ನಲ್ಲಿ ಪಾಕಿಸ್ತಾನ ಮತ್ತು ನ್ಯೂಜಿಲೆಂಡ್‌ನ ಮುಖಾಮುಖಿ ದಾಖಲೆಯ ಬಗ್ಗೆ ಮಾತನಾಡಿದರೆ, ಪಾಕಿಸ್ತಾನ ಯಾವಾಗಲೂ ನ್ಯೂಜಿಲೆಂಡ್‌ಗಿಂತ ಶ್ರೇಷ್ಠವಾಗಿದೆ. ಟೂರ್ನಿಯಲ್ಲಿ ಇದುವರೆಗೆ ಉಭಯ ತಂಡಗಳ ನಡುವೆ ಒಟ್ಟು 9 ಪಂದ್ಯಗಳು ನಡೆದಿದ್ದು, ಈ ಪೈಕಿ 7 ಪಂದ್ಯಗಳಲ್ಲಿ ಪಾಕಿಸ್ತಾನ ಮತ್ತು 2 ಪಂದ್ಯಗಳಲ್ಲಿ ನ್ಯೂಜಿಲೆಂಡ್ ಗೆಲುವು ಸಾಧಿಸಿದೆ.
ನ್ಯೂಜಿಲೆಂಡ್ 11ರ ಬಳಗ: ಅಬ್ದುಲ್ಲಾ ಶಫೀಕ್, ಫಖರ್ ಜಮಾನ್, ನಾಯಕ ಬಾಬರ್ ಅಜಮ್, ವಿಕೆಟ್ ಕೀಪರ್ ಮೊಹಮ್ಮದ್ ರಿಜ್ವಾನ್, ಇಫ್ತಿಕರ್ ಅಹ್ಮದ್, ಸೌದ್ ಶಕೀಲ್, ಅಘಾ ಸಲ್ಮಾನ್, ಶಾಹೀನ್ ಅಫ್ರಿದಿ, ಹಸನ್ ಅಲಿ, ಮೊಹಮ್ಮದ್ ವಾಸಿಂ ಜೂನಿಯರ್, ಹ್ಯಾರಿಸ್ ರೌಫ್.
ಪಾಕಿಸ್ತಾನ್ 11ರ ಬಳಗ: ಡೆವೊನ್ ಕಾನ್ವೆ, ರಚಿನ್ ರವೀಂದ್ರ, ನಾಯಕ ಕೇನ್ ವಿಲಿಯಮ್ಸನ್, ಡೇರಿಲ್ ಮಿಚೆಲ್, ವಿಕೆಟ್ ಕೀಪರ್ ಟಾಮ್ ಲ್ಯಾಥಮ್, ಗ್ಲೆನ್ ಫಿಲಿಪ್ಸ್, ಮಾರ್ಕ್ ಚಾಪ್ಮನ್, ಮಿಚೆಲ್ ಸ್ಯಾಂಟ್ನರ್, ಇಶ್ ಸೋಧಿ, ಟಿಮ್ ಸೌಥಿ, ಟ್ರೆಂಟ್ ಬೌಲ್ಟ್.
ಓದಿ: ವಿಶ್ವಕಪ್ನಿಂದ ಹೊರ ಬಿದ್ದ ಹಾರ್ದಿಕ್ ಪಾಂಡ್ಯ.. ಆಲ್ರೌಂಡರ್ ಜಾಗದಲ್ಲಿ ಕನ್ನಡಿಗನಿಗೆ ಸ್ಥಾನ