ಬೆಂಗಳೂರು: ಭಾರತ ಆತಿಥ್ಯ ವಹಿಸುತ್ತಿರುವ ಏಕದಿನ ವಿಶ್ವಕಪ್ ಕ್ರಿಕೆಟ್ 2023 ಇದೀಗ ಸೆಮಿಫೈನಲ್ ಘಟ್ಟಕ್ಕೆ ಪ್ರವೇಶಿಸುತ್ತಿದೆ. ಭಾರತ, ದಕ್ಷಿಣ ಆಫ್ರಿಕಾ ಮತ್ತು ಆಸ್ಟ್ರೇಲಿಯಾ ತಂಡಗಳು ಈಗಾಗಲೇ ಸೆಮಿಫೈನಲ್‌ಗೇರಿವೆ. ಇದೀಗ ನ್ಯೂಜಿಲೆಂಡ್ ನಾಲ್ಕನೇ ತಂಡವಾಗಿ ಸೆಮಿಸ್ನತ್ತ ದಾಪುಗಾಲಿಟ್ಟಿದೆ.
ಮೊದಲ ಸೆಮಿಸ್ನಲ್ಲಿ ಭಾರತವನ್ನು ಕಿವೀಸ್ ಎದುರಿಸುವುದು ಬಹುತೇಕ ಖಚಿತ. ಏಕೆಂದರೆ ಪಾಕಿಸ್ತಾನ ನಾಕೌಟ್ ಹಂತ ಪ್ರವೇಶಿಸಬೇಕಾದರೆ ದೊಡ್ಡ ಪವಾಡವೇ ನಡೆಯಬೇಕು. ಗುರುವಾರ ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ನ್ಯೂಜಿಲೆಂಡ್ 5 ವಿಕೆಟ್‌ಗಳಿಂದ ಭರ್ಜರಿ ಗೆಲುವು ಸಾಧಿಸಿತು.
ಲಂಕಾ ವಿರುದ್ಧದ ಈ ಗೆಲುವಿನೊಂದಿಗೆ ಕಿವೀಸ್ 9 ಪಂದ್ಯಗಳಲ್ಲಿ 5ನ್ನು ಗೆದ್ದು 10 ಅಂಕ ಗಳಿಸಿದೆ. ಕಿವೀಸ್ ತಂಡದ ನೆಟ್ ರನ್‌ರೇಟ್ 0.743 ಆಗಿದೆ. 8 ಪಂದ್ಯಗಳಲ್ಲಿ 4 ಗೆಲುವು, 8 ಅಂಕ ಹಾಗೂ 0.036 ರನ್ ರೇಟ್ ಹೊಂದಿರುವ ಪಾಕಿಸ್ತಾನ ಶನಿವಾರ ತನ್ನ ಕೊನೆಯ ಪಂದ್ಯದಲ್ಲಿ ಇಂಗ್ಲೆಂಡ್ ತಂಡವನ್ನು ಎದುರಿಸಲಿದೆ. ಈ ಪಂದ್ಯದಲ್ಲಿ ಪಾಕ್ ಗೆದ್ದರೆ ಖಾತೆಗೆ 10 ಅಂಕ ಸೇರ್ಪಡೆಯಾಗಲಿದೆ. ಆದರೆ ಕಿವೀಸ್ ನೆಟ್ ರನ್‌ರೇಟ್ ಮೀರಿಸಲು ಸಾಮಾನ್ಯ ಗೆಲುವಷ್ಟೇ ಸಾಕಾಗದು.
ಗ್ರೂಪ್ ಹಂತದಲ್ಲಿ ಪಾಕಿಸ್ತಾನ ತಂಡದ ಕೊನೆಯ ಪಂದ್ಯ ನವೆಂಬರ್ 11ರಂದು ಕೋಲ್ಕತ್ತಾದ ಈಡನ್ ಗಾರ್ಡನ್ಸ್‌ನಲ್ಲಿ ಇಂಗ್ಲೆಂಡ್ ವಿರುದ್ಧ ನಡೆಯಲಿದೆ. ಪಾಕ್ ಸೆಮಿಫೈನಲ್ ಪ್ರವೇಶಿಸಬೇಕಾದರೆ ಒಂದು ರೀತಿಯ ಅದ್ಭುತವೇ ನಡೆಯಬೇಕು. ಏಕೆಂದರೆ ಪಾಕಿಸ್ತಾನವು ಇಂಗ್ಲೆಂಡ್ ಅನ್ನು ಕನಿಷ್ಠ 287 ರನ್‌ಗಳಿಂದ ಸೋಲಿಸಲೇಬೇಕು. 2016ರಲ್ಲಿ ಐರ್ಲೆಂಡ್ ವಿರುದ್ಧ ಪಾಕಿಸ್ತಾನ 255 ರನ್‌ಗಳ ಅತಿ ದೊಡ್ಡ ಜಯ ಸಾಧಿಸಿತ್ತು.
ಇಷ್ಟು ದೊಡ್ಡ ಅಂತರದಿಂದ ಪಂದ್ಯ ಗೆಲ್ಲಬೇಕಾದರೆ ಪಾಕಿಸ್ತಾನಕ್ಕೆ ಮೊದಲು ಬ್ಯಾಟ್ ಮಾಡುವ ಅವಕಾಶ ಸಿಗಬೇಕು. ಇಂಗ್ಲೆಂಡ್ ವಿರುದ್ಧ ಪಾಕಿಸ್ತಾನ 400 ಅಥವಾ 450ಕ್ಕಿಂತ ಹೆಚ್ಚು ರನ್ ಗಳಿಸಬೇಕಿದೆ. ಇದಾದ ಬಳಿಕ ಕರಾರುವಾಕ್ ಬೌಲಿಂಗ್ ಕೂಡ ಮಾಡಬೇಕು. ಆದರೆ ತಂಡದ ಹಿಂದಿನ ಪ್ರದರ್ಶನದಂತೆ ನೋಡುವುದಾದರೆ ಇದು ಕಷ್ಟಸಾಧ್ಯ.
ಒಂದು ವೇಳೆ ಇಂಗ್ಲೆಂಡ್ ಮೊದಲು ಬ್ಯಾಟ್ ಮಾಡಿ 150 ರನ್‌ಗಳಿಗೆ ಆಲೌಟ್ ಆದ್ರೆ, ಪಾಕಿಸ್ತಾನ ಕೇವಲ 3.4 ಓವರ್‌ಗಳಲ್ಲಿ ಆ ಗುರಿ ಸಾಧಿಸಬೇಕು. ಇದು ಸಾಧ್ಯವಾಗದೇ ಇದ್ದರೆ ಪಾಕ್ ವಿಶ್ವಕಪ್ ಅಭಿಯಾನ ಕೊನೆಗೊಳ್ಳುತ್ತದೆ. ಮತ್ತೊಂದೆಡೆ, -0.338 ರನ್‌ರೇಟ್ ಹೊಂದಿರುವ ಅಫ್ಘಾನಿಸ್ತಾನವು ಸೆಮಿಸ್‌ಗೆ ಅರ್ಹತೆ ಪಡೆಯಲು ಶುಕ್ರವಾರ ದಕ್ಷಿಣ ಆಫ್ರಿಕಾ ವಿರುದ್ಧದ ಅಂತಿಮ ಪಂದ್ಯವನ್ನು ಕನಿಷ್ಠ 438 ರನ್‌ಗಳಿಂದ ಗೆಲ್ಲಬೇಕಾಗಿದೆ.
ಇದನ್ನು ಓದಿ: 'ಪಾಕಿಸ್ತಾನ ವಿಶ್ವಕಪ್ ಸೆಮಿಫೈನಲ್ಗೆ ಬರಲಿ': ಭಾರತದ ಮಾಜಿ ನಾಯಕನ ವಿಚಿತ್ರ ಕೋರಿಕೆ