ಅಹಮದಾಬಾದ್(ಗುಜರಾತ್): 3ನೇ ಬಾರಿ ವಿಶ್ವ ಚಾಂಪಿಯನ್ ಆಗುವ ಭಾರತದ ಕನಸು ಮತ್ತೊಮ್ಮೆ ಭಗ್ನಗೊಂಡಿತು. ಭಾನುವಾರ ತವರಿನಲ್ಲಿ ನಡೆದ ಪಂದ್ಯದಲ್ಲಿ ಆತಿಥೇಯ ಭಾರತವನ್ನು 6 ವಿಕೆಟ್‌ಗಳಿಂದ ಸೋಲಿಸಿದ ಆಸ್ಟ್ರೇಲಿಯಾ 6ನೇ ಬಾರಿಗೆ ಏಕದಿನ ವಿಶ್ವಕಪ್ ಗೆದ್ದುಕೊಂಡಿತು. ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಏಕದಿನ ವಿಶ್ವಕಪ್ 2023 ಫೈನಲ್‌ನಲ್ಲಿ ಆಸ್ಟ್ರೇಲಿಯಾ ತಂಡವು ಭಾರತವನ್ನು 240 ರನ್‌ಗಳಿಗೆ ಆಲೌಟ್ ಮಾಡಿತು. ಇದಕ್ಕುತ್ತರವಾಗಿ ಟ್ರಾವಿಸ್ ಹೆಡ್ (137) ಅವರ ಶತಕದಾಟದ ಮೂಲಕ ತಂಡ 43 ಓವರ್‌ಗಳಲ್ಲಿ ಗುರಿ ಸಾಧಿಸಿತು. ಈ ಸೋಲಿನ ನಂತರ ಟೀಂ ಇಂಡಿಯಾ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಅವರ ಕನಸೂ ಕಮರಿ ಹೋಯಿತು.
ಆಟಗಾರನಾಗಿ ದ್ರಾವಿಡ್ ಅವರು 2003ರ ಏಕದಿನ ವಿಶ್ವಕಪ್ ಫೈನಲ್‌ನಲ್ಲಿ ಆಸ್ಟ್ರೇಲಿಯಾವನ್ನು ಸೋಲಿಸುವ ಮೂಲಕ ಚಾಂಪಿಯನ್ ಆಗುವ ಅವಕಾಶ ಹೊಂದಿದ್ದರು. ಆದರೆ ಅಲ್ಲಿ ಭಾರತ ತಂಡವು ಕಾಂಗರೂಗಳ ಕೈಯಲ್ಲಿ 125 ರನ್‌ಗಳ ಸೋಲು ಎದುರಿಸಬೇಕಾಯಿತು. ಪಂದ್ಯದಲ್ಲಿ ದ್ರಾವಿಡ್ ಕೇವಲ 47 ರನ್ ಗಳಿಸಿ ಔಟಾಗಿದ್ದರು.
ದ್ರಾವಿಡ್ ನವೆಂಬರ್ 2021ರಲ್ಲಿ ಭಾರತ ತಂಡದ ಕೋಚ್ ಆದರು. ಇದಾದ ಬಳಿಕ ಟೀಂ ಇಂಡಿಯಾದ 'ಗೋಡೆ' ಎಂದೇ ಖ್ಯಾತರಾಗಿರುವ ಅವರಿಗೆ 20 ವರ್ಷಗಳ ಬಳಿಕ ಆಸ್ಟ್ರೇಲಿಯಾ ವಿರುದ್ಧ ಸೇಡು ತೀರಿಸಿಕೊಳ್ಳುವ ಅವಕಾಶ ಸಿಕ್ಕಿತ್ತು. ಭಾರತ ಸತತ 10 ಪಂದ್ಯಗಳನ್ನು ಗೆಲ್ಲುವ ಮೂಲಕ ಫೈನಲ್ ತಲುಪಿದರೆ, ಆಸ್ಟ್ರೇಲಿಯಾ ತಂಡ ಸತತ ಎರಡು ಪಂದ್ಯಗಳ ಸೋಲಿನ ನಂತರ ಅದ್ಭುತ ಪುನರಾಗಮನ ಮಾಡಿತು. ಸತತ 8 ಪಂದ್ಯಗಳನ್ನು ಗೆದ್ದು ಪ್ರಶಸ್ತಿ ಸುತ್ತಿಗೆ ಪ್ರವೇಶಿಸಿದ ಕಾಂಗರೂಗಳು ಟೀಂ ಇಂಡಿಯಾವನ್ನು ಸೋಲಿಸುವ ಮೂಲಕ ವಿಶ್ವಕಪ್ಗೆ ಮುತ್ತಿಕ್ಕಿದರು. ಈ ಮೂಲಕ ದ್ರಾವಿಡ್ ಕೋಚ್ ಆಗಿ ವಿಶ್ವಕಪ್ ಗೆಲ್ಲುವ ಅವಕಾಶ ಕಳೆದುಕೊಂಡರು.
ಫೈನಲ್‌ನಲ್ಲಿ ಸೋಲಿನ ನಂತರ ದ್ರಾವಿಡ್ ಪಂದ್ಯದ ಬಗ್ಗೆ ಮಾತನಾಡಿ, "ಇದು ನಮಗೆ ಕಷ್ಟದ ದಿನ. ನಾವು ಗುಣಮಟ್ಟದ ಕ್ರಿಕೆಟ್ ಆಡಿದ ರೀತಿ ನಮಗೆ ಹೆಮ್ಮೆ ತಂದಿದೆ. ಉತ್ತಮ ಪ್ರದರ್ಶನ ನೀಡಿದ್ದೇವೆ. ಆಸ್ಟ್ರೇಲಿಯಾ ನಮಗಿಂತ ಉತ್ತಮವಾಗಿತ್ತು. ಅವರಿಗೆ ಅಭಿನಂದನೆಗಳು. ನಾವು 30-40 ರನ್ ಕಡಿಮೆ ಇದ್ದೆವು. ಅವರು ನಿಜವಾಗಿಯೂ ಚೆನ್ನಾಗಿ ಬೌಲಿಂಗ್ ಮಾಡಿದರು" ಎಂದು ಹೇಳಿದರು.
"ನಾವು ಬೌಂಡರಿಗಳನ್ನು ಪಡೆಯಲು ಸಾಧ್ಯವಾಗಲಿಲ್ಲ. ನಿರ್ಣಾಯಕ ಮಧ್ಯಂತರಗಳಲ್ಲಿ ವಿಕೆಟ್ಗಳನ್ನು ಕಳೆದುಕೊಳ್ಳುತ್ತಲೇ ಇದ್ದೆವು. ಸ್ಕೋರ್ 280-290 ತಲುಪಿದ್ದರೆ ಅದು ವಿಭಿನ್ನ ಆಟವಾಗುತ್ತಿತ್ತು. ಟ್ರಾವಿಸ್ ಹೆಡ್ ಅದ್ಭುತ ಬ್ಯಾಟಿಂಗ್ ಮಾಡಿದರು. ನಮ್ಮ ಹುಡುಗರು ಈಗ ನಿರಾಶೆಗೊಂಡಿದ್ದಾರೆ. ಡ್ರೆಸ್ಸಿಂಗ್ ರೂಮಿನಲ್ಲಿ ಎಲ್ಲರೂ ಭಾವುಕರಾಗಿರುತ್ತಾರೆ. ಅವರನ್ನು ಕೋಚ್ ಆಗಿ ನೋಡುವುದು ಕಷ್ಟವಾಗುತ್ತಿದೆ" ಎಂದು ರಾಹುಲ್ ದ್ರಾವಿಡ್ ಹೇಳಿದರು.
ಮುಂದಿನ ವರ್ಷದ ಜೂನ್‌ನಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ನಲ್ಲಿ ಭಾರತ ಆಡಬೇಕಾಗಿದೆ. ಈ ಟೂರ್ನಿಯವರೆಗೂ ಟೀಮ್ ಇಂಡಿಯಾದ ಕೋಚ್ ಆಗಿ ಉಳಿಯಲು ಬಯಸುತ್ತೀರಾ? ಎಂದು ದ್ರಾವಿಡ್ ಅವರನ್ನು ಕೇಳಿದಾಗ, "ನಾನು ಇನ್ನೂ ಅದರ ಬಗ್ಗೆ ಯೋಚಿಸಿಲ್ಲ. ಸಮಯ ಸಿಕ್ಕಾಗ ನಿರ್ಧಾರ ಮಾಡುತ್ತೇನೆ. ನನ್ನ ಗಮನ ಈ ವಿಶ್ವಕಪ್ ಮೇಲೆ ಮಾತ್ರ ಇತ್ತು" ಎಂದರು.
ಇದನ್ನೂ ಓದಿ: ವಿಶ್ವಕಪ್ ಫೈನಲ್: ವಿರಾಟ್ ಕೊಹ್ಲಿಗೆ ಪ್ಲೇಯರ್ ಆಫ್ ದಿ ಟೂರ್ನಮೆಂಟ್ ಪ್ರಶಸ್ತಿ