ಹೈದರಾಬಾದ್: ವಿಶ್ವಕಪ್ 2023ರ 12ನೇ ಪಂದ್ಯ ಭಾರತ ಮತ್ತು ಪಾಕಿಸ್ತಾನ ನಡುವೆ ಇಂದು ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿದೆ. ಈ ಪಂದ್ಯ ಮಧ್ಯಾಹ್ನ 2 ಗಂಟೆಗೆ ಆರಂಭಗೊಳ್ಳಲಿದ್ದು, 1.30ಕ್ಕೆ ಟಾಸ್ ನಡೆಯಲಿದೆ . ಈ ಪಂದ್ಯದಲ್ಲಿ ಅಭಿಮಾನಿಗಳೆಲ್ಲರ ಕಣ್ಣು ಭಾರತ ತಂಡದ ನಾಯಕ ರೋಹಿತ್ ಶರ್ಮಾ ಅವರ ಮೇಲಿದೆ. ರೋಹಿತ್ ಇತ್ತೀಚಿನ ದಿನಗಳಲ್ಲಿ ಉತ್ತಮ ಫಾರ್ಮ್‌ನಲ್ಲಿರುವುದು ಗೊತ್ತಿರುವ ಸಂಗತಿ. ದೆಹಲಿಯಲ್ಲಿ ನಡೆದ ಪಂದ್ಯದಲ್ಲಿ ಅಫ್ಘಾನಿಸ್ತಾನ ವಿರುದ್ಧ ಅತ್ಯುತ್ತಮ ಪ್ರದರ್ಶನ ತೋರಿರುವ ರೋಹಿತ್ ಶರ್ಮಾ ಅವರು ಶತಕ ಸಿಡಿಸಿ ಅಬ್ಬರಿಸಿದ್ದರು.
ಪಾಕ್ ನಾಯಕ ಬಾಬರ್ ಆಜಮ್ ಮತ್ತು ರಿಜ್ವಾನ್ ಅವರಂತಹ ಯುವ ಆಟಗಾರರಿಂದ ಪಾಕಿಸ್ತಾನವೂ ಬಲಿಷ್ಠವಾಗಿದೆ. ಆದರೆ, ಇದೀಗ ಎಲ್ಲರ ಕಣ್ಣು ಟೀಂ ಇಂಡಿಯಾದ ಬ್ಯಾಟ್ಸ್‌ಮನ್ ಹಾಗೂ ನಾಯಕ ರೋಹಿತ್ ಶರ್ಮಾ ಮೇಲೆ ನೆಟ್ಟಿದೆ. ಏಕೆಂದರೆ ವಿಶ್ವಕಪ್‌ನಲ್ಲಿ ಆಸ್ಟ್ರೇಲಿಯ ವಿರುದ್ಧ ಭಾರತ ಆಡಿದ ಮೊದಲ ಪಂದ್ಯದಲ್ಲಿ ರೋಹಿತ್ ಡಕ್ ಔಟ್ ಆಗಿದ್ದರು. ಅಫ್ಘಾನಿಸ್ತಾನ ವಿರುದ್ಧದ ಪಂದ್ಯದಲ್ಲಿ ಅವರು ಶತಕ (131) ಗಳಿಸಿದ್ದರು. ಅವರು ತಮ್ಮ ಅಂತಾರಾಷ್ಟ್ರೀಯ ವೃತ್ತಿಜೀವನದಲ್ಲಿ ಅತಿ ಹೆಚ್ಚು ಸಿಕ್ಸರ್‌ಗಳನ್ನು ಬಾರಿಸಿದ ಬ್ಯಾಟ್ಸ್‌ಮನ್ ಎಂಬ ದಾಖಲೆಯನ್ನು ಹೊಂದಿದ್ದಾರೆ. ಈ ಅನುಕ್ರಮದಲ್ಲಿ, ಅವರ ಬಾಲ್ಯದ ಕೋಚ್, ದಿನೇಶ್ ಲಾಡ್ ರೋಹಿತ್ ಅವರ ಬ್ಯಾಟಿಂಗ್ ಬಗ್ಗೆ ಆಸಕ್ತಿದಾಯಕ ವಿಷಯಗಳನ್ನು ಹಂಚಿಕೊಂಡಿದ್ದಾರೆ.
ರೋಹಿತ್ ಶರ್ಮಾ ಅವರ ಶಾಟ್ ಆಯ್ಕೆ ಈಗ ತುಂಬಾ ಚೆನ್ನಾಗಿದೆ ಎಂದು ಲಾಲಚಂದ್ ರಜಪೂತ್ ಹೇಳಿದ್ದಾರೆ. ಆದ್ದರಿಂದಲೇ ರೋಹಿತ್ ಏಕದಿನ ಕ್ರಿಕೆಟ್‌ನಲ್ಲಿ ಮೂರು ದ್ವಿಶತಕ, ಅಂತಾರಾಷ್ಟ್ರೀಯ ಟಿ20 ಮಾದರಿಯಲ್ಲಿ ನಾಲ್ಕು ಶತಕ ಮತ್ತು ಟೆಸ್ಟ್ ಕ್ರಿಕೆಟ್‌ನಲ್ಲಿ ಒಂದು ದ್ವಿಶತಕ ಗಳಿಸಿದ್ದಾರೆ. ಸದ್ಯ ರೋಹಿತ್ ಪುಲ್ ಶಾಟ್ ಮತ್ತು ಲಾಫ್ಟೆಡ್ ಶಾಟ್‌ಗಳನ್ನು ಬಾರಿಸುವ ಮೂಲಕ ಮಿಂಚುತ್ತಿದ್ದಾರೆ.
2009ರ ಟಿ20 ವಿಶ್ವಕಪ್ ಮತ್ತು 2011ರ ಏಕದಿನ ವಿಶ್ವಕಪ್‌ನಲ್ಲಿ ರೋಹಿತ್ ಶರ್ಮಾಗೆ ಹೆಚ್ಚಿನ ಅವಕಾಶಗಳು ಸಿಗಲಿಲ್ಲ ಎಂದು ರೋಹಿತ್ ಶರ್ಮಾ ಅವರ ಬಾಲ್ಯದ ಕೋಚ್ ದಿನೇಶ್ ಲಾಡ್ ಹೇಳಿದ್ದಾರೆ. ಅದಾದ ನಂತರ 2013ರ ಚಾಂಪಿಯನ್ಸ್ ಟ್ರೋಫಿಯಲ್ಲಿ ರೋಹಿತ್ ಶರ್ಮಾ ಅವರನ್ನು ಅಂದಿನ ಟೀಂ ಇಂಡಿಯಾ ನಾಯಕ ಮಹೇಂದ್ರ ಸಿಂಗ್ ಧೋನಿ ಓಪನರ್ ಆಗಿ ಕಳುಹಿಸಿದ್ದರು.. ಅಂದಿನಿಂದ ರೋಹಿತ್ ಹಿಂತಿರುಗಿ ನೋಡಿಲ್ಲ.
ರೋಹಿತ್ ಶರ್ಮಾ 2007ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು. ಅದೇ ವರ್ಷ ಜೂನ್ 23 ರಂದು ಐರ್ಲೆಂಡ್ ವಿರುದ್ಧ ರೋಹಿತ್ ಅವರ ಮೊದಲ ಪಂದ್ಯವಾಗಿತ್ತು. ಆ ಬಳಿಕ ರೋಹಿತ್ ಪಯಣ ಏರಿಳಿತಗಳ ಮೂಲಕ ಸಾಗಿತು. 2011ರ ನಂತರ ರೋಹಿತ್ ತಮ್ಮ ಬ್ಯಾಟಿಂಗ್ ಶೈಲಿಯನ್ನು ಬದಲಾಯಿಸಿದರು. ಪುಲ್ ಶಾಟ್, ಕಟ್ ಶಾಟ್, ಸ್ಟ್ರೈಟ್ ಡ್ರೈವ್ ಮತ್ತು ಫ್ಲಿಕ್ ಶಾಟ್‌ಗಳನ್ನು ಕರಗತ ಮಾಡಿಕೊಂಡಿದ್ದಾರೆ.
ಐಪಿಎಲ್ ಮತ್ತು ಟಿ20 ವಿಶ್ವಕಪ್‌ನಲ್ಲಿ ಆ ಹೊಡೆತಗಳನ್ನು ಆಡಿದ ರೋಹಿತ್ ಎದುರಾಳಿ ಬೌಲರ್‌ಗಳಿಗೆ ಹೆಚ್ಚಿನ ನಡುಕ ಹುಟ್ಟಿಸಿದರು. ಈ ಕ್ರಮದಲ್ಲಿ ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗ ಲಾಲ್ಚಂದ್ ರಜಪೂತ್ ರೋಹಿತ್ ಅವರನ್ನು ಹೊಗಳಿದ್ದಾರೆ. ಶಾಟ್ ಆಯ್ಕೆಯಲ್ಲಿ ರೋಹಿತ್ ಸುಧಾರಣೆಗೆ ಟಿ20 ಸ್ವರೂಪವೇ ಕಾರಣ ಎಂದು ಅವರು ಈಟಿವಿ ಭಾರತಗೆ ತಿಳಿಸಿದ್ದಾರೆ.