ಹೈದರಾಬಾದ್: ಅಫ್ಘಾನಿಸ್ತಾನ ತಂಡ ಯಾವುದೇ ನಿರೀಕ್ಷೆಯಿಟ್ಟುಕೊಳ್ಳದೇ ಈ ಬಾರಿಯ ವಿಶ್ವಕಪ್ಗೆ ಪ್ರವೇಶಿಸಿತು. ಇದೀಗ ಟೂರ್ನಿಯಲ್ಲಿ ಆ ತಂಡದ ಪಯಣ ಮುಗಿದಿದೆ. ಅವರನ್ನು ಸಣ್ಣ ತಂಡವೆಂದು ನೋಡದೆ ದೊಡ್ಡ ತಂಡ ಎಂದು ಪರಿಗಣಿಸಬೇಕಿದೆ. ಯಾಕೆಂದ್ರೆ ಅಫ್ಘಾನಿಸ್ತಾನ ತಂಡದ ಚಹರೆ ಈ ಮೆಗಾ ಟೂರ್ನಮೆಂಟ್‌ನ ಮೊದಲು ಮತ್ತು ನಂತರಕ್ಕೆ ಹೋಲಿಕೆ ಮಾಡಿದಾಗ ವಿಭಿನ್ನವಾಗಿದೆ.
ಇಂಗ್ಲೆಂಡ್, ಪಾಕಿಸ್ತಾನ ಮತ್ತು ಶ್ರೀಲಂಕಾವನ್ನು ಸೋಲಿಸಿದ ನಂತರ ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ಸೋಲಿನ ಭಯದಿಂದ ಹೆದರಿದ್ದವು. ಗೆಲುವಿಗಿಂತ ಹೆಚ್ಚಾಗಿ ತಂಡದ ವ್ಯಕ್ತಿತ್ವ ಮತ್ತು ಆಟಗಾರರ ಪ್ರದರ್ಶನ ಅಫ್ಘಾನಿಸ್ತಾನಕ್ಕೆ ಹೊಸ ಜೀವ ತುಂಬಿತು. ಭವಿಷ್ಯದ ಬಗ್ಗೆ ಭರವಸೆ ಮೂಡಿಸಿದೆ.
ವಿಶ್ವಕಪ್ಗೂ ಮುನ್ನ ಅಫ್ಘಾನಿಸ್ತಾನವು ಬೌಲಿಂಗ್‌ನಲ್ಲಿ ಉತ್ತಮ ಮತ್ತು ಬ್ಯಾಟಿಂಗ್‌ನಲ್ಲಿ ದುರ್ಬಲ ತಂಡ ಎಂದು ಹೆಸರಾಗಿತ್ತು. ಆದರೆ ಈ ವಿಶ್ವಕಪ್‌ನೊಂದಿಗೆ ಆ ಕಪ್ಪುಚುಕ್ಕೆ ಅಳಿಸಿ ಹೋಗಿದೆ. ಇಷ್ಟು ದಿನ ದುರ್ಬಲವಾಗಿದ್ದ ಬ್ಯಾಟಿಂಗ್ ಈಗ ಬಲಿಷ್ಠವಾಗಿದೆ. ಅಫ್ಘಾನಿಸ್ತಾನದ ಐತಿಹಾಸಿಕ ಪ್ರದರ್ಶನ ಸಾಕಾರಗೊಂಡಿದೆ. ಮುಖ್ಯವಾಗಿ ಅಫ್ಘನ್ ಆಟಗಾರರು ತೋರಿದ ವ್ಯಕ್ತಿತ್ವ ಮತ್ತು ಹೋರಾಟದ ಸ್ಪೂರ್ತಿ ಬಗ್ಗೆ ಎಷ್ಟೇ ಹೇಳಿದ್ರೂ ಕಡಿಮೆ. ದೊಡ್ಡ ತಂಡಗಳು ನೋಡಿ ಹಿಂದೆ ಹೆಜ್ಜೆ ಇಡುವ ತಂಡವಲ್ಲ. ಸವಾಲೊಡ್ಡಿ ಹೋರಾಟದಿಂದ ಗೆಲುವು ಸಾಧಿಸುವ ಛಲ ಬೆಳೆಸಿಕೊಳ್ಳುತ್ತಿದ್ದಾರೆ. ಮೂರು ದೊಡ್ಡ ತಂಡಗಳ ವಿರುದ್ಧ ಏಕಕಾಲದಲ್ಲಿ ಅಫ್ಘಾನಿಸ್ತಾನ ಜಯ ಸಾಧಿಸಿರುವುದು ಅದಕ್ಕೆ ಸಾಕ್ಷಿಯಾಗಿದೆ.
ಅಫ್ಘಾನಿಸ್ತಾನದ ಈ ಸಾಧನೆಗಳು ಸುಳ್ಳಲ್ಲ. ಸಂಪೂರ್ಣ ಪ್ರಾಬಲ್ಯ ಮತ್ತು ಹೋರಾಟದೊಂದಿಗೆ ಸಾಧಿಸಲಾಗಿದೆ. ಇಂಗ್ಲೆಂಡ್ ತಂಡವನ್ನು 69 ರನ್‌ಗಳಿಂದ ಸೋಲಿಸಿದ್ದು ಸಂಚಲನ ಮೂಡಿಸಿದೆ. ಅಫ್ಘಾನಿಸ್ತಾನ ಕೊನೆಯವರೆಗೂ ಆಸ್ಟ್ರೇಲಿಯಾವನ್ನು ಹೆದರಿಸಿತು. ಮ್ಯಾಕ್ಸ್ ವೆಲ್ ಅವರ ವಿರೋಚಿತ ಇನ್ನಿಂಗ್ಸ್ ಇಲ್ಲದಿದ್ದರೆ ಅಫ್ಘಾನಿಸ್ತಾನ ಮತ್ತೊಂದು ಸಂಭ್ರಮದೊಂದಿಗೆ ಸೆಮಿಸ್ ಪ್ರವೇಶಿಸುತ್ತಿತ್ತು. ಕೊನೆಯ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಸಹ ಅಫ್ಘಾನ್ ವಿರುದ್ಧ ಗೆಲುವು ಸಾಧಿಸಲು ಕಷ್ಟಪಡಬೇಕಾಯಿತು. ಬೌಲಿಂಗ್‌ನಲ್ಲಿ ಸ್ಪಿನ್ ದಾಳಿ ಮತ್ತು ಬ್ಯಾಟಿಂಗ್‌ನಲ್ಲಿ ಅಗ್ರ ಕ್ರಮಾಂಕದ ಸ್ಥಿರತೆಯೊಂದಿಗೆ ತಂಡವು ಪ್ರಗತಿ ಸಾಧಿಸಿತು. ಅದರಲ್ಲೂ ಅಧಿಕ ಒತ್ತಡದ ಇನ್ನಿಂಗ್ಸ್‌ನಲ್ಲಿ ಅಫ್ಘಾನ್ ಬ್ಯಾಟ್ಸ್‌ಮನ್‌ಗಳ ದೃಢತೆ ಅದ್ಭುತವಾಗಿತ್ತು.
ಈ ಬಾರಿಯ ವಿಶ್ವಕಪ್‌ನಲ್ಲಿ ಅಫ್ಘಾನಿಸ್ತಾನ ಒಂದಲ್ಲ ಎಲ್ಲ ವಿಭಾಗದಲ್ಲೂ ಬಲಿಷ್ಠವಾಗಿದೆ. ಬೌಲಿಂಗ್, ಬ್ಯಾಟಿಂಗ್ ಮತ್ತು ಫೀಲ್ಡಿಂಗ್‌ನಲ್ಲಿ ಅದ್ಭುತ. ಬ್ಯಾಟಿಂಗ್‌ನಲ್ಲಿ ವಿಶೇಷವಾಗಿ ಅಗ್ರ ಕ್ರಮಾಂಕದ ಆಟಗಾರರು ಪ್ರಭಾವಿತರಾಗಿದ್ದರು. ಇಬ್ರಾಹಿಂ ಜದ್ರಾನ್ 9 ಪಂದ್ಯಗಳಲ್ಲಿ 47ರ ಸರಾಸರಿಯಲ್ಲಿ 376 ರನ್ ಗಳಿಸಿದ್ದಾರೆ. ಅದರಲ್ಲಿ ಶತಕವೂ ಸೇರಿದೆ. ವಿಶ್ವಕಪ್‌ನಲ್ಲಿ ಅಫ್ಘಾನಿಸ್ತಾನ ಪರ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಎನಿಸಿಕೊಂಡರು.
ಆಲ್ರೌಂಡರ್ ಅಜ್ಮತುಲ್ಲಾ ಒಮರ್ಜಾಯ್ 8 ಇನ್ನಿಂಗ್ಸ್‌ಗಳಲ್ಲಿ 70.60 ಸರಾಸರಿಯಲ್ಲಿ 353 ರನ್ ಗಳಿಸಿದರು. ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ಅವರ ಆಟ ಮೆಚ್ಚಲೇಬೇಕು. ರಹಮತ್ ಶಾ (320 ರನ್) ಮತ್ತು ಗುರ್ಬಾಜ್ (280 ರನ್) ಕೂಡ ಆಕರ್ಷಕವಾಗಿ ಆಡಿದ್ದಾರೆ. ನಾಯಕ ಹಶ್ಮತ್ಉಲ್ಲಾ ಶಾಹಿದಿ (310 ರನ್) ಬಗ್ಗೆ ವಿಶೇಷವಾಗಿ ಉಲ್ಲೇಖಿಸಬೇಕು. ರನ್ ಚೇಸ್ನಲ್ಲಿ ಕೊನೆಯವರೆಗೂ ಕ್ರೀಸ್ನಲ್ಲಿ ನಿಂತು ತಂಡವನ್ನು ಗೆಲುವಿನ ದಡ ಮುಟ್ಟಿಸುವಲ್ಲಿ ಪರಿಶ್ರಮ ಹಾಕಿದರು.
ಬೌಲಿಂಗ್‌ನಲ್ಲಿ ರಶೀದ್ ಖಾನ್ (11 ವಿಕೆಟ್), ಮೊಹಮ್ಮದ್ ನಬಿ (8), ನವೀನ್ ಉಲ್ ಹಕ್ (8), ಮುಜಿಬುರ್ ರೆಹಮಾನ್ (8), ಅಜ್ಮತುಲ್ಲಾ (7), ಫಾರೂಕಿ (6), ನೂರ್ ಅಹ್ಮದ್ (5) ಕೂಡ ಸ್ಥಿರವಾಗಿ ಮಿಂಚಿದರು. ಅದರಲ್ಲೂ ನಾಲ್ವರು ಸ್ಪಿನ್ನರ್‌ಗಳೊಂದಿಗೆ ದಾಳಿ ಮುಂದುವರಿಸಿದ ಅಫ್ಘಾನಿಸ್ತಾನಕ್ಕೆ ಫಲಿತಾಂಶ ಸಿಕ್ಕಿದೆ. ತಂಡವು ಯಾವುದೇ ಒಬ್ಬ ಆಟಗಾರನ ಮೇಲೆ ಅವಲಂಬಿತವಾಗಿಲ್ಲದಿರುವುದು ಅಫ್ಘಾನಿಸ್ತಾನಕ್ಕೆ ಉತ್ತಮವಾಗಿದೆ.
ಓದಿ: ಆಸೀಸ್- ಬಾಂಗ್ಲಾ ಪಂದ್ಯ; ಟಾಸ್ ಗೆದ್ದ ಆಸ್ಟ್ರೇಲಿಯಾ ಫೀಲ್ಡಿಂಗ್ ಆಯ್ಕೆ