ವೆಲ್ಲಿಂಗ್ಟನ್(ನ್ಯೂಜಿಲ್ಯಾಂಡ್): ಐಸಿಸಿ ಮಹಿಳಾ ಏಕದಿನ ಕ್ರಿಕೆಟ್ ವಿಶ್ವಕಪ್ನಲ್ಲಿ ಬಾಂಗ್ಲಾದೇಶ ತಂಡವನ್ನು ಸೋಲಿಸಿದ ಇಂಗ್ಲೆಂಡ್ ತಂಡ ಸೆಮಿಫೈನಲ್ಗೆ ಲಗ್ಗೆ ಇಟ್ಟಿದೆ. ಮೊದಲಿಗೆ ಬ್ಯಾಟಿಂಗ್ ಆಯ್ದುಕೊಂಡು 50 ಓವರ್ಗಳಿಗೆ 6 ವಿಕೆಟ್ ನಷ್ಟಕ್ಕೆ ಇಂಗ್ಲೆಂಡ್ 234 ರನ್ ಗಳಿಸಿತ್ತು. ಇದನ್ನು ಬೆನ್ನಟ್ಟಿದ ಬಾಂಗ್ಲಾದೇಶ ತಂಡ 48 ಓವರ್ಗಳಲ್ಲಿ ಎಲ್ಲಾ ವಿಕೆಟ್ ಕಳೆದುಕೊಂಡು 134 ರನ್ಗಳಿಗೆ ಮುಗ್ಗರಿಸಿ, ಸೋಲನುಭವಿಸಿದೆ. ನೂರು ರನ್ಗಳ ಅಂತರದಿಂದ ಇಂಗ್ಲೆಂಡ್ ಭರ್ಜರಿ ಗೆಲುವು ಸಾಧಿಸಿದೆ.
ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಇಂಗ್ಲೆಂಡ್ ತಂಡದ ಪರವಾಗಿ ಡಂಕ್ಲೆ 67, ಎನ್ ಸ್ಕೀವರ್ 40, ಬ್ಯೂಮೊಂಟ್ 33, ಆ್ಯಮಿ ಜೋನ್ಸ್ 31 ರನ್ ಗಳಿಸಿ, ಆರು ವಿಕೆಟ್ ನಷ್ಟಕ್ಕೆ 234 ರನ್ ಗಳಿಸಲು ತಂಡಕ್ಕೆ ನೆರವಾಗಿದ್ದರು. ಬಾಂಗ್ಲಾದೇಶದ ಪರವಾಗಿ ಬೌಲಿಂಗ್ ಮಾಡಿದ ಸಲ್ಮಾ ಖತುನ್ 2 ವಿಕೆಟ್ ಪಡೆದರೆ, ಜಹನರ ಆಲಂ, ರಿತು ಮೋನಿ, ಫಾಹಿಮಾ ಖತುನ್, ಲತಾ ಮೊಂಡಲ್ ತಲಾ ಒಂದು ವಿಕೆಟ್ ಪಡೆದಿದ್ದಾರೆ.
234 ರನ್ಗಳನ್ನು ಬೆನ್ನಟ್ಟಿದ ಬಾಂಗ್ಲಾದೇಶ ತಂಡ, ಇಂಗ್ಲೆಂಡ್ ಬೌಲರ್ಗಳ ದಾಳಿಗೆ ತತ್ತರಿಸಿತು. ಲತಾ ಮೊಂಡಲ್ 30, ಶಮೀಮಾ ಸುಲ್ತಾನಾ 23, ಶರ್ಮಿನ್ ಅಖ್ತರ್ 23, ಎನ್ ಸುಲ್ತಾನಾ 22 ರನ್ಗಳನ್ನು ಗಳಿಸಿದ್ದು, 50 ಓವರ್ಗಳಲ್ಲಿ 134 ರನ್ಗಳನ್ನು ಗಳಿಸಲು ಮಾತ್ರವೇ ಸಾಧ್ಯವಾಯಿತು.
ಇಂಗ್ಲೆಂಡ್ ತಂಡದ ಪರ ಬೌಲಿಂಗ್ ಮಾಡಿದ ಸೋಫಿ ಎಸ್ಸೆಲ್ಸ್ಟೋನ್, ಚಾರ್ಲೋಟ್ ಡೀನ್ ತಲಾ ಮೂರು ವಿಕೆಟ್ ಪಡೆದರೆ, ಫ್ರೆಯಾ ಡೇವಿಸ್ 2 ಮತ್ತು ಹೀತರ್ ನೈಟ್ ಒಂದು ವಿಕೆಟ್ ಪಡೆದು ಕೇವಲ 134 ರನ್ಗಳಿಗೆ ಬಾಂಗ್ಲಾ ತಂಡವನ್ನು ಕಟ್ಟಿಹಾಕುವಲ್ಲಿ ಸಫಲರಾದರು. ಈ ಮೂಲಕ ಇಂಗ್ಲೆಂಡ್ ತಂಡ ಸೆಮೀಸ್ ತಲುಪಿದೆ.
ಇದನ್ನೂ ಓದಿ: Women World Cup : ದಕ್ಷಿಣಾಫ್ರಿಕಾ ತಂಡದ ವಿರುದ್ಧ ಭಾರತೀಯ ವನಿತೆಯರಿಗೆ ವಿರೋಚಿತ ಸೋಲು