ವೆಲ್ಲಿಂಗ್ಟನ್ : ಐಸಿಸಿ ಮಹಿಳಾ ವಿಶ್ವಕಪ್ ಟೂರ್ನಿಯ ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಮಿಥಾಲಿರಾಜ್ ಪಡೆ ಸೋಲು ಅನುಭವಿಸಿದೆ. ಭಾರತದ ವನಿತೆಯರು ನೀಡಿದ್ದ 134 ರನ್‌ಗಳ ಸಾಧಾರಣ ಗುರಿಯನ್ನು ಇಂಗ್ಲೆಂಡ್ 31.2 ಓವರ್‌ಗಳಲ್ಲಿ 6 ವಿಕೆಟ್ ಕಳೆದುಕೊಂಡು ಮುಟ್ಟಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತ ಮಹಿಳಾ ತಂಡ ಆರಂಭಿಕ ಆಘಾತ ಅನುಭವಿಸಿತು. ಕೇವಲ 28 ರನ್ ಆಗುವಷ್ಟರಲ್ಲಿ ಯಸ್ತಿಕಾ ಭಾಟಿಯಾ, ನಾಯಕಿ ಮಿಥಾಲಿರಾಜ್ ಹಾಗೂ ದೀಪ್ತಿ ಶರ್ಮಾ ಅವರ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು.
ಸ್ಫೋಟಕ ಬ್ಯಾಟರ್ ಸ್ಮೃತಿ ಮಂಧಾನ ಜೊತೆಗೂಡಿದ ಹರ್ಮನ್‌ಪ್ರೀತ್ ಕೌರ್ ಅವರ ಜೊತೆಯಾಟ ತಂಡದ ಮೊತ್ತ 60ರ ಗಡಿ ದಾಟುವಂತೆ ಮಾಡಿತು. 14 ರನ್ ಗಳಿಸಿದ್ದ ಕೌರ್ ಷಾರ್ಲೆಟ್ ಡೀನ್‌ಗೆ ವಿಕೆಟ್ ಒಪ್ಪಿಸಿದರೆ 35 ರನ್‌ಗಳಿಸಿದ್ದ ಮಂಧಾನ ಎಕ್ಲೆಸ್ಟೋನ್ ಎಲ್‌ಬಿ ಬಲೆಗೆ ಬಿದ್ದರು.
ವಿಕೆಟ್ ಕೀಪರ್ ರಿಚಾ ಘೋಷ್ 33 ಹಾಗೂ ಜುಲನ್ ಗೋಸ್ವಾಮಿ 22 ರನ್ ಗಳಿಸಿದರು. ಇಂಗ್ಲೆಂಡ್ ಪರ ಷಾರ್ಲೆಟ್ ಡೀನ್ 4 ವಿಕೆಟ್ ಪಡೆದರು. ಅಂತಿಮವಾಗಿ ತಂಡ 134 ರನ್‌ಗಳಿಗೆ ಆಲೌಟ್ ಆಗಿದೆ.
135ರನ್‌ಗಳ ಗುರಿ ಬೆನ್ನಟ್ಟಿದ ಇಂಗ್ಲೆಂಡ್ ಮಹಿಳಾ ತಂಡದ ನಾಯಕಿ ಹೀದರ್ ನೈಟ್ ಅವರ ಅರ್ಧ ಶತಕ ಹಾಗೂ ನಟಾಲಿ ಸ್ಕೈವರ್ ಅವರ 45 ರನ್‌ಗಳ ಉಪಯುಕ್ತ ಆಟದ ನೆರವಿನಿಂದ 31.2 ಓವರ್‌ಗಳಲ್ಲಿ 6 ವಿಕೆಟ್ ಕಳೆದುಕೊಂಡು ಗೆಲುವಿನ ನಗೆ ಬೀರಿತು. ಆ ಮೂಲಕ ಸತತ ಸೋಲುಗಳ ಕೊಂಡಿ ಕಳಚಿಕೊಂಡಿತು.
ಇಂಗ್ಲೆಂಡ್ ಪರ ಟಮ್ಮಿ ಬ್ಯೂಮಾಂಟ್ 1, ಡೇನಿಯಲ್ ವ್ಯಾಟ್ 1, ಹೀದರ್ ನೈಟ್ 53, ನಟಾಲಿ ಸ್ಕೈವರ್ 45, ಆಮಿ ಎಲ್ಲೆನ್ ಜೋನ್ಸ್ 10, ಸೋಫಿಯಾ ಡಂಕ್ಲೆ 17, ಕ್ಯಾಥರೀನ್ ಬ್ರಂಟ್ 0 ಹಾಗೂ ಔಟಾಗದೆ ಸೋಫಿ ಎಕ್ಲೆಸ್ಟೋನ್ 5 ರನ್ ಗಳಿಸಿದರು. ಭಾರತ ಪರ ಮೇಘ್ನಾ ಸಿಂಗ್ 3 ವಿಕೆಟ್ ಪಡೆದರೆ ಜುಲನ್ ಗೋಸ್ವಾಮಿ, ರಾಜೇಶ್ವರಿ ಗಾಯಕ್ವಾಡ್ ಹಾಗೂ ಪೂಜಾ ವಸ್ತ್ರಾಕರ್ ತಲಾ 1 ವಿಕೆಟ್ ಪಡೆದರು.
ಇದನ್ನೂ ಓದಿ: ಮಹಿಳಾ ಕ್ರಿಕೆಟ್ಗೆ ಜೂಲನ್ ಕೊಡುಗೆ ಅವಿಸ್ಮರಣೀಯ, ಅವರ ಮೇಲೆ ಅಪಾರ ಗೌರವವಿದೆ: ಪೆರ್ರಿ ಪ್ರಶಂಸೆ