ದುಬೈ : ರವೀಂದ್ರ ಜಡೇಜಾ ಆಲ್ರೌಂಡರ್ ಶ್ರೇಯಾಂಕದಲ್ಲಿ ಇಂಗ್ಲೆಂಡ್ನ ಬೆನ್ ಸ್ಟೋಕ್ಸ್ರನ್ನು ಹಿಂದಿಕ್ಕಿ 2ನೇ ಸ್ಥಾನಕ್ಕೇರಿದ್ದಾರೆ. ಬುಧವಾರ ಬಿಡುಗಡೆಯಾಗಿರುವ ನೂತನ ಅಂತಾರಾಷ್ಟ್ರೀಯ ಕ್ರಿಕೆಟ್ ಸಂಸ್ಥೆ(ಐಸಿಸಿ) ಶ್ರೇಯಾಂಕ ಪಟ್ಟಿಯಲ್ಲಿ ಜಡೇಜಾ ಕೇವಲ ವೆಸ್ಟ್ ಇಂಡೀಸ್ ಸ್ಟಾರ್ ಜೇಸನ್ ಹೋಲ್ಡರ್ಗಿಂತ ಹಿಂದೆ ಉಳಿದಿದ್ದಾರೆ. ಇನ್ನು, ಬೌಲಿಂಗ್ ಶ್ರೇಯಾಂಕದಲ್ಲಿ ರವಿ ಚಂದ್ರನ್ ಅಶ್ವಿನ್ 2ನೇ ಸ್ಥಾನ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾದರೆ, ಬ್ಯಾಟ್ಸ್ಮನ್ಗಳ ಪೈಕಿ ರೋಹಿತ್, ವಿರಾಟ್ ಕೊಹ್ಲಿ ಮತ್ತು ರಿಷಭ್ ಪಂತ್ ಅಗ್ರ 10ರಲ್ಲಿ ಕಾಣಿಸಿಕೊಂಡಿದ್ದಾರೆ.
ನ್ಯೂಜಿಲ್ಯಾಂಡ್ ಮತ್ತು ಇಂಗ್ಲೆಂಡ್ ಸರಣಿಯ ಮೊದಲ ಪಂದ್ಯದ ಬಳಿಕ ಐಸಿಸಿ ನೂತನ ರ‍್ಯಾಂಕಿಂಗ್ ಬಿಡುಗಡೆ ಮಾಡಿದೆ. ಇದರಲ್ಲಿ ಜಡೇಜಾ 386 ಅಂಕ ಪಡೆದು 2ನೇ ಸ್ಥಾನದಲ್ಲಿದ್ದರೆ, ಹೋಲ್ಡರ್ ಅವರಿಗಿಂತ 37 ಅಂಕ ಹೆಚ್ಚಿಗೆ ಪಡೆದು ಅಗ್ರಸ್ಥಾನ ಪಡೆದಿದ್ದಾರೆ. ನ್ಯೂಜಿಲ್ಯಾಂಡ್ ವಿರುದ್ಧದ ಸರಣಿಯಲ್ಲಿ ತಂಡದಿಂದ ಹೊರಗಿರುವ ಬೆನ್ ಸ್ಟೋಕ್ಸ್ 3ನೇ ಸ್ಥಾನಕ್ಕೆ ಕುಸಿದಿದ್ದಾರೆ. ಭಾರತದ ಆರ್. ಅಶ್ವಿನ್ 4ನೇ ಸ್ಥಾನದಲ್ಲಿದ್ದಾರೆ.
ಬ್ಯಾಟಿಂಗ್ ಶ್ರೇಯಾಂಕದಲ್ಲಿ ಭಾರತದ ಆರಂಭಿಕ ಬ್ಯಾಟ್ಸ್ಮನ್ ರೋಹಿತ್ ಶರ್ಮಾ ನ್ಯೂಜಿಲೆಂಡ್ ತಂಡದ ಹೆನ್ರಿ ನಿಕೊಲ್ಸ್ರನ್ನು ಹಿಂದಿಕ್ಕಿ 7ನೇ ಸ್ಥಾನಕ್ಕೇರಿದರೆ, ರಿಷಭ್ ಪಂತ್ 6ನೇ ಮತ್ತು ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ 5ನೇ ಸ್ಥಾನದಲ್ಲಿದ್ದಾರೆ. ನ್ಯೂಜಿಲೆಂಡ್ ತಂಡದ ಕೇನ್ ವಿಲಿಯಮ್ಸನ್ ಮತ್ತು ಆಸ್ಟ್ರೇಲಿಯಾದ ಸ್ಟೀವ್ ಸ್ಮಿತ್ ಮತ್ತು ಲಾಬುಶೇನ್ ಅಗ್ರ 3ರಲ್ಲಿದ್ದಾರೆ.
ಇಂಗ್ಲೆಂಡ್ ವಿರುದ್ಧ 5 ವಿಕೆಟ್ ಪಡೆದಿದ್ದ ಕಿವೀಸ್ ಅನುಭವಿ ಬೌಲರ್ ಟಿಮ್ ಸೌಥಿ ಬೌಲಿಂಗ್ ಶ್ರೇಯಾಂಕದಲ್ಲಿ 3 ಸ್ಥಾನ ಮೇಲೇರಿ ಟಾಪ್ 3ಕ್ಕೆ ಬಡ್ತಿ ಪಡೆದರೆ, ಕೇವಲ ಒಂದು ವಿಕೆಟ್ ಪಡೆದಿದ್ದ ನೀಲ್ ವ್ಯಾಗ್ನರ್ 2 ಸ್ಥಾನ ಕುಸಿದು 5ಕ್ಕೆ ಇಳಿದಿದ್ದಾರೆ. ಆಸ್ಟ್ರೇಲಿಯಾದ ಪ್ಯಾಟ್ ಕಮಿನ್ಸ್ ಮತ್ತು ಭಾರತದ ರವಿಚಂದ್ರನ್ ಅಶ್ವಿನ್ ಅಗ್ರ 2ರಲ್ಲಿ ಮುಂದುವರಿದಿದ್ದಾರೆ.
ಇದನ್ನು ಓದಿ : WTCಯಲ್ಲಿ ಕಿವೀಸ್ಗಿಂತ ಅತ್ಯುತ್ತಮ ತಂಡ ಭಾರತ.. ದಾಖಲೆಗಳು ಹೀಗಿವೆ ನೋಡಿ