ಬರ್ಮಿಂಗ್‌ಹ್ಯಾಮ್: ಲಾರ್ಡ್ಸ್ ಕ್ರಿಕೆಟ್ ಮೈದಾನವು 2023 ಮತ್ತು 2025ರಲ್ಲಿ ನಡೆಯಲಿರುವ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಹಣಾಹಣಿಯ ಆತಿಥ್ಯ ವಹಿಸಲಿದೆ. ಈ ಬಗ್ಗೆ ಮಂಗಳವಾರ ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆದ ಐಸಿಸಿ ವಾರ್ಷಿಕ ಸಭೆಯಲ್ಲಿ ನಿರ್ಧರಿಸಲಾಗಿದೆ.
ಇದಕ್ಕೂ ಮುನ್ನ ಚೊಚ್ಚಲ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ (2019-2021) ಫೈನಲ್ ಪಂದ್ಯವು ಲಾರ್ಡ್ಸ್ನಲ್ಲಿ ನಿಗದಿಯಾಗಿದ್ದರೂ ಬಳಿಕ ಕೋವಿಡ್ ಹಿನ್ನೆಲೆಯಲ್ಲಿ ಸೌತಾಂಪ್ಟನ್‌ಗೆ ಸ್ಥಳಾಂತರಗೊಂಡಿತ್ತು. ಭಾರತ ಹಾಗೂ ನ್ಯೂಜಿಲೆಂಡ್ ತಂಡಗಳು ಫೈನಲ್ನಲ್ಲಿ ಆಡಿದ್ದು, ಕಿವೀಸ್ ಪಡೆ 8 ವಿಕೆಟ್ಗಳ ಜಯ ಸಾಧಿಸಿ ಚಾಂಪಿಯನ್‌ಶಿಪ್ ತನ್ನದಾಗಿಸಿಕೊಂಡಿತ್ತು.
ಸಭೆಯಲ್ಲಿ 2023-2027ರ ಸಮಯದಲ್ಲಿ ಪುರುಷರು ಮತ್ತು ಮಹಿಳೆಯರ ತಂಡಗಳ ವೇಳಾಪಟ್ಟಿಗೆ ಅನುಮೋದನೆ ನೀಡಿದ್ದು, ಮುಂದಿನ ದಿನಗಳಲ್ಲಿ ಈ ಬಗ್ಗೆ ಮಾಹಿತಿ ಹೊರಬೀಳಲಿದೆ. ಇದೇ ವೇಳೆ ವಿವಿಎಸ್ ಲಕ್ಷ್ಮಣ್ ಮತ್ತು ಡೇನಿಯಲ್ ವೆಟ್ಟೋರಿ ಐಸಿಸಿ ಪುರುಷರ ಕ್ರಿಕೆಟ್ ಸಮಿತಿಯಲ್ಲಿ ಪ್ರಸ್ತುತ ಆಟಗಾರ ಪ್ರತಿನಿಧಿಗಳಾಗಿ ಸೇರ್ಪಡೆ ಮಾಡಲಾಗಿದೆ.
ಅಲ್ಲದೆ, 2022ರ ನವೆಂಬರ್ನಲ್ಲಿ ಐಸಿಸಿಯ ಮುಂದಿನ ಅಧ್ಯಕ್ಷರನ್ನು ಆಯ್ಕೆ ಮಾಡುವ ಪ್ರಕ್ರಿಯೆ ನಡೆಯಲಿದೆ. ಚುನಾವಣೆಯು ಸರಳ ಬಹುಮತದ ಮಾದರಿಯಲ್ಲಿ ನಿರ್ಧರಿತವಾಗಲಿದೆ. ಚುನಾಯಿತ ಅಧ್ಯಕ್ಷರ ಅವಧಿಯು ಡಿಸೆಂಬರ್‌ನಿಂದ ಎರಡು ವರ್ಷಗಳ ಅವಧಿಗೆ ಅಂದರೆ 1, 2022ರಿಂದ ನವೆಂಬರ್ 30, 2024ರವರೆಗೆ ಇರಲಿದೆ ಎಂದು ಐಸಿಸಿ ತಿಳಿಸಿದೆ. ಇದೇ ವೇಳೆ ಅಫ್ಘಾನಿಸ್ತಾನ ವರ್ಕಿಂಗ್ ಗ್ರೂಪ್‌ನಿಂದ ಐಸಿಸಿಯು ಅಲ್ಲಿನ ಮಹಿಳಾ ಕ್ರಿಕೆಟ್ ಸ್ಥಿತಿಗತಿ ಬಗ್ಗೆ ಮಾಹಿತಿ ಪಡೆದಿದೆ.
ಇದನ್ನೂ ಓದಿ: ಭಾರತದ ಧ್ವಜಧಾರಿಯಾಗುವ ಅವಕಾಶ ಕಳೆದುಕೊಂಡೆ: ನೀರಜ್ ಚೋಪ್ರಾ ಬೇಸರ