ಜೋಹಾನ್ಸ್‌ಬರ್ಗ್ : ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಿನ ಟೆಸ್ಟ್ ಸರಣಿಯ ಎರಡನೇ ಪಂದ್ಯದಲ್ಲಿ ಆತಿಥೇಯ ದಕ್ಷಿಣ ಆಫ್ರಿಕಾ ತಂಡ ಭಾರತವನ್ನು 7 ವಿಕೆಟ್‌ಗಳ ಅಂತರದಿಂದ ಸೋಲಿಸುವಲ್ಲಿ ಯಶಸ್ವಿಯಾಗಿದೆ. ಈ ಮೂಲಕ ಮೂರು ಪಂದ್ಯಗಳ ಟೆಸ್ಟ್ ಸರಣಿ 1-1 ಅಂತರದಿಂದ ಸಮಬಲಗೊಂಡಿದೆ.
ದಕ್ಷಿಣ ಆಫ್ರಿಕಾ ತಂಡದ ನಾಯಕ ಡೀನ್ ಎಲ್ಗರ್ ಎರಡನೇ ಇನ್ನಿಂಗ್ಸ್‌ನಲ್ಲಿ ಪ್ರದರ್ಶಿಸಿದ ಅದ್ಭುತ ಬ್ಯಾಟಿಂಗ್‌ನಿಂದಾಗಿ ದಕ್ಷಿಣ ಆಫ್ರಿಕಾ ತಂಡ ಮಳೆಯ ಅಡ್ಡಿಯ ಹೊರತಾಗಿಯೂ ನಾಲ್ಕನೇ ದಿನದಲ್ಲಿಯೇ ಗೆಲುವಿನ ಸಂಭ್ರಮವನ್ನಾಚರಿಸುವಲ್ಲಿ ಯಶಸ್ವಿಯಾಗಿದೆ.
ಪಂದ್ಯದ ಗೆಲುವಿನ ಬಳಿಕ ಮಾತನಾಡಿದ ದಕ್ಷಿಣ ಆಫ್ರಿಕಾದ ನಾಯಕ ಡೀನ್ ಎಲ್ಗರ್, 'ನಾನು ತಂಡವನ್ನು ಮನ್ನಡೆಸುವುದರ ಜೊತೆ ಗೆಲುವಿನ ಜವಾಬ್ದಾರಿಯನ್ನು ಹೊತ್ತಿದ್ದೇನೆ’ ಎಂದು ಹೇಳಿದರು. 34 ವರ್ಷ ವಯಸ್ಸಿನ ಆರಂಭಿಕ ಆಟಗಾರ ಎಲ್ಗರ್, 188 ಎಸೆತಗಳಲ್ಲಿ 96 ರನ್ ಗಳಿಸಿ ತಂಡದ ಗೆಲುವಿಗೆ ಕಾರಣವಾಗಿದ್ದಾರೆ.
‘ನಾನು ಹಿರಿಯ ಆಟಗಾರನಾಗಿ ಕೊನೆಯವರೆಗೂ ಬ್ಯಾಟಿಂಗ್ ಮುಂದುವರಿಸುವ ಜವಾಬ್ದಾರಿಯನ್ನು ತೆಗೆದುಕೊಳ್ಳಬೇಕಾಗಿತ್ತು. ಪಂದ್ಯ ಗೆಲುವಿನ ಹಿಂದಿನ ರಾತ್ರಿ ಕೊನೆಯವರೆಗೂ ಆಡಲು ನನಗೆ ನಾನೇ ಹೇಳಿಕೊಂಡಿದ್ದೆ. ಹೀಗಾಗಿ, ಜವಾಬ್ದಾರಿಯುತ ಆಟ ಆಡುತ್ತಿದ್ದೆ. ಇದು ಯಾವಾಗಲೂ ವರ್ಕ್ ಔಟ್ ಆಗುವುದಿಲ್ಲ. ಆದರೆ, ಈಗ ವರ್ಕ್ಔಟ್ ಆಗಿದೆ. ಭಾರತೀಯರ ವಿರುದ್ಧದ ಈ ಸರಣಿ ನಮಗೆ ಹೆಚ್ಚು ಒತ್ತಡದ ಸರಣಿಯಾಗಿತ್ತು’ ಎಂದು ಎಲ್ಗರ್ ಹೇಳಿದರು.
ಸಹ ಆಟಗಾರರನ್ನು ಹೊಗಳಿದ ಎಲ್ಗರ್ : ನಾವು ಇನ್ನೂ ಮುಳುಗಿಲ್ಲ. ನಮ್ಮ ಹೋರಾಟ ಆರಂಭವಾಗಿದೆ. ಇದು ದಕ್ಷಿಣ ಆಫ್ರಿಕಾಕ್ಕೆ ಮೊದಲ ಟೆಸ್ಟ್ ಗೆಲುವು. ನಾವು ದೀರ್ಘ ಮತ್ತು ಕಠಿಣವಾಗಿ ಹೋರಾಡಿದ್ದೇವೆ. ಹುಡುಗರು ಅದ್ಭುತವಾಗಿ ಪ್ರದರ್ಶನ ತೋರಿದ್ದಾರೆ. ಮತ್ತೊಂದು ಟೆಸ್ಟ್ ಗೆಲುವು ಸಾಧಿಸಲು ಈ ಗೆಲುವು ಸಹಾಯಕವಾಗಲಿದೆ ಎಂದು ಎಲ್ಗರ್ ಹೇಳಿದ್ದಾರೆ.
ನಾವು ಸರಿಯಾದ ದಿಕ್ಕಿನಲ್ಲಿ ಹೆಜ್ಜೆ ಹಾಕುತ್ತಿದ್ದೇವೆ ಎಂದು ನಾನು ಭಾವಿಸುತ್ತಿದ್ದೇನೆ. ನಮಗೆ ಇನ್ನೂ ಸಾಕಷ್ಟು ಸವಾಲುಗಳು ನಮ್ಮ ದಾರಿಯಲ್ಲಿ ಬರುತ್ತಿವೆ. ಮುಂದಿನ ಟೆಸ್ಟ್‌ನಲ್ಲಿಯೂ ಸಹ ನಾವು ಸಾಕಷ್ಟು ಮುಖಾಮುಖಿಗಳನ್ನು ಹೊಂದಲಿದ್ದೇವೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಕೇಪ್‌ಟೌನ್‌ನಲ್ಲಿ ಸರಣಿ ನಿರ್ಧರಿಸುವ ಟೆಸ್ಟ್ ಮಂಗಳವಾರದಿಂದ ಆರಂಭವಾಗಲಿದೆ.