ಲಂಡನ್: ಇಂಗ್ಲೆಂಡ್ ವಿರುದ್ಧದ 2ನೇ ಟೆಸ್ಟ್ ವೇಳೆ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಕೇವಲ 20 ರನ್ಗಳಿಗೆ ವಿಕೆಟ್ ಒಪ್ಪಿಸಿದರು. ಕೊಹ್ಲಿ ಔಟಾದ ರೀತಿಗೆ ದಿಗ್ಗಜ ಸುನೀಲ್ ಗವಾಸ್ಕರ್ ಸೇರಿದಂತೆ ಕೆಲವು ಮಾಜಿ ಕ್ರಿಕೆಟಿಗರು ಹಾಗೂ ವಿಶ್ಲೇಷಕರು ತಂತ್ರಗಾರಿಕೆ ವೈಫಲ್ಯ ಎಂದಿದ್ದರು. ಆದರೆ, ಬ್ಯಾಟಿಂಗ್ ಕೋಚ್ ವಿಕ್ರಮ್ ರಾಥೋರ್ ಏಕಾಗ್ರತೆಯ ಕೊರತೆಯಿಂದ ಟೀಮ್ ಇಂಡಿಯಾ ನಾಯಕ ವಿಕೆಟ್ ಒಪ್ಪಿಸಿದ್ದಾರೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ವಿರಾಟ್ ಕೊಹ್ಲಿ ಭಾನುವಾರ 20 ರನ್ಗಳಿಸಿ ಸ್ಯಾಮ್ ಕರ್ರನ್ ಬೌಲಿಂಗ್ನಲ್ಲಿ ವಿಕೆಟ್ ಒಪ್ಪಿಸಿದ್ದರು. 20120ರಿಂದ ಶತಕದ ಬರ ಎದುರಿಸುತ್ತಿರುವ ಕೊಹ್ಲಿ ಈ ಪಂದ್ಯದಲ್ಲಿ ಪಡೆದ ಆರಂಭ ನೋಡಿ ಅಭಿಮಾನಿಗಳು ಶತಕದ ಬರ ನೀಗಬಹುದು ಎಂದು ಆಲೋಚಿಸಿದ್ದರು. ಆದರೆ, ಕೊಹ್ಲಿ ಆಟ 20 ರನ್ಗಳಿಗೆ ಮೀಸಲಾಯಿತು. ರಾಥೋರ್ ಪ್ರಕಾರ ಕೊಹ್ಲಿ ಆಟದಲ್ಲಿ ಯಾವುದೇ ಸಮಸ್ಯೆಯಿಲ್ಲ, ಆದರೆ, ಅವರು ಏಕಾಗ್ರತೆ ಕೊರತೆ ಅನುಭವಿಸುತ್ತಿದ್ದಾರೆ ಎಂದು ತಿಳಿಸಿದ್ದಾರೆ.
ಕೊಹ್ಲಿ ಬ್ಯಾಟಿಂಗ್ನಲ್ಲಿ ಸಮಸ್ಯೆಯಿದೆ ಎಂದು ನಾನು ಭಾವಿಸುವುದಿಲ್ಲ. 2ನೇ ಇನ್ನಿಂಗ್ಸ್ನಲ್ಲಿ ಔಟಾಗಿದ್ದು, ಕೇವಲ ಏಕಾಗ್ರತೆಯ ಕೊರತೆಯಿಂದ ಅಷ್ಟೆ. ಅವರು ಆ ಚೆಂಡನ್ನು ಆಡಬಾರದಿತ್ತು, ಆದರೂ ಆಡಿದರು. ಇದರಲ್ಲಿ ಬೇರೇನೂ ಇಲ್ಲ ಎಂದು ರಾಥೋರ್ ಹೇಳಿದ್ದಾರೆ.
ಒಂದು ರೀತಿ ರಾಥೋರ್ ಹೇಳಿಕೆಯಲ್ಲೂ ಅರ್ಥವಿದೆ. ಏಕೆಂದರೆ ಕೊಹ್ಲಿ ಔಟಾಗುವ ಹಿಂದಿನ ಓವರ್, ವೇಗಿ ಜೇಮ್ಸ್ ಆ್ಯಂಡರ್ಸನ್ ಭಾರತೀಯ ನಾಯಕನನ್ನು ಕೆಣಕಿದ್ದರು. ಇದರಿಂದ ಕುಪಿತಗೊಂಡಿದ್ದ ಕೊಹ್ಲಿ ಅದೇ ಭಾಷೆಯಲ್ಲಿ ಆ್ಯಂಡರ್ಸನ್ಗೆ ತಿರುಗೇಟು ನೀಡಿದ್ದರು. ಆದರೆ, ಸ್ಯಾಮ್ ಕರ್ರನ್ ಎಸೆದ ನಂತರದ ಓವರ್ನಲ್ಲಿ ವಿಕೆಟ್ ಒಪ್ಪಿಸಿದರು. ಇದರಲ್ಲಿ ಇಂಗ್ಲೀಷ್ ಕ್ರಿಕೆಟಿಗರ ತಂತ್ರಗಾರಿಕೆ ಕೆಲಸ ಮಾಡಿತ್ತು.
ಇದನ್ನು ಓದಿ:ಕೊಹ್ಲಿ ಸರಿಯಾಗಿ ಆಡಲಿಲ್ಲ, ಅವರ ಬ್ಯಾಟಿಂಗ್ ವಿಧಾನ ದೋಷಪೂರಿತವಾಗಿತ್ತು: ಗವಾಸ್ಕರ್