ಹೈದರಾಬಾದ್: ಹೈದರಾಬಾದ್ ಬಿರಿಯಾನಿ ಯಾರಿಗೆ ಗೊತ್ತಿಲ್ಲ ಹೇಳಿ?. ಅದರ ರುಚಿ ಮತ್ತು ಖಾರದಿಂದಲೇ ಎಲ್ಲರ ಬಾಯಲ್ಲಿ ನೀರೂರಿಸುತ್ತದೆ. ವಿಶ್ವಕಪ್ ಆಡಲು ಭಾರತಕ್ಕೆ ಬಂದಿರುವ ಪಾಕಿಸ್ತಾನ ತಂಡ ಕೂಡ ಈ ಬಿರಿಯಾನಿಯನ್ನು ಸವಿದಿದ್ದು, ರುಚಿ ಹೇಗಿದೆ ಎಂಬುದರ ಬಗ್ಗೆ ಹೇಳಿದ್ದಾರೆ. ಅಲ್ಲದೇ, 10ಕ್ಕೆ 10 ಅಂಕ ಕೂಡ ನೀಡಿದ್ದಾರೆ.
ಏಕದಿನ ವಿಶ್ವಕಪ್ಗಾಗಿ ಪಾಕ್ ಕ್ರಿಕೆಟಿಗರು ವಾರದ ಹಿಂದೆ ಹೈದರಾಬಾದ್ ತಲುಪಿದ್ದಾರೆ. ಇಲ್ಲಿನ ಹೋಟೆಲ್‌ನಲ್ಲಿ ತಂಗಿರುವ ಅವರು ಹೈದರಾಬಾದಿ ಅಡುಗೆಯನ್ನು ಸವಿದಿದ್ದಾರೆ. ಇತ್ತೀಚೆಗೆ ಅವರು ದಮ್ ಬಿರಿಯಾನಿ (ಹೈದರಾಬಾದಿ ಬಿರಿಯಾನಿ) ಸವಿದಿದ್ದರು. ಕ್ಯಾಪ್ಟನ್ಸ್ ಡೇ ಸಂದರ್ಭದಲ್ಲಿ ಪಾಕ್ ಕ್ರಿಕೆಟಿಗರಿಗೆ ಹೈದರಾಬಾದಿ ಬಿರಿಯಾನಿ ಹೇಗಿದೆ?, ಖಾದ್ಯಕ್ಕೆ ರೇಟಿಂಗ್ ನೀಡಲು ಕೇಳಿದಾಗ ಅವರು ಅದರ ರುಚಿ ಮತ್ತು ವಿಶೇಷವನ್ನು ಹೊಗಳಿ ರೇಟಿಂಗ್ ಕೂಡ ನೀಡಿದ್ದಾರೆ. ಇದರ ವಿಡಿಯೋವನ್ನು ಐಸಿಸಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದೆ.
'ಖಾರ ಜಾಸ್ತಿ, ರುಚಿಯಾಗಿದೆ': ವಿಡಿಯೋದಲ್ಲಿರುವಂತೆ ಪಾಕಿಸ್ತಾನಿ ಕ್ರಿಕೆಟಿಗರಿಗೆ ಹೈದರಾಬಾದ್ ಬಿರಿಯಾನಿ ಮತ್ತು ಕರಾಚಿ ಬಿರಿಯಾನಿಯಲ್ಲಿನ ವ್ಯತ್ಯಾಸ ಮತ್ತು ಎರಡರಲ್ಲಿ ಯಾವುದು ಉತ್ತಮ ಎಂಬ ಪ್ರಶ್ನೆ ಕೇಳಲಾಗಿದೆ. ಹೈದರಾಬಾದಿ ಬಿರಿಯಾನಿಗೆ ತಮ್ಮಿಷ್ಟದಂತೆ ರೇಟ್ ನೀಡಲು ತಿಳಿಸಲಾಗಿತ್ತು. ತಂಡದ ನಾಯಕ ಬಾಬರ್ ಅಜಂ, "ಹೈದರಾಬಾದಿ ಬಿರಿಯಾನಿ ಸ್ವಲ್ಪ ಖಾರವಾಗಿದೆ. ಇದೇ ಅದರ ವಿಶೇಷತೆ. ನಾನು 10ಕ್ಕೆ 8 ಅಂಕಗಳನ್ನು ನೀಡುತ್ತೇನೆ ಎಂದಿದ್ದಾರೆ. ವೇಗದ ಬೌಲರ್ ಹಸನ್ ಅಲಿ ಬಿರಿಯಾನಿ ಸೂಪರ್ 10 ಕ್ಕೆ 10 ಎಂದು ಅಂಕ ನೀಡುವೆ ಎಂದರೆ, ಬ್ಯಾಟರ್ ಇಮಾಮ್ ಉಲ್ ಹಕ್, ಬಿರಿಯಾನಿ ಅದ್ಭುತವಾಗಿದೆ. ಅದರ ರುಚಿಗೆ 10ಕ್ಕೆ 11 ಅಂಕ ನೀಡುವೆ ಎಂದರು.
ಎರಡು ಬಿರಿಯಾನಿಗಳ ನಡುವಿನ ವ್ಯತ್ಯಾಸದ ಬಗ್ಗೆ ಕೇಳಿದಾಗ, ಹೈದರಾಬಾದಿ ಬಿರಿಯಾನಿ ಸ್ವಲ್ಪ ಮಸಾಲೆಯುಕ್ತವಾಗಿದೆ ಎಂದು ಬಾಬರ್ ಅಜಮ್ ಹೇಳಿದರು. ಇಮಾಮ್ ಉಲ್ ಹಕ್, ಹೈದರಾಬಾದಿ ಬಿರಿಯಾನಿ ಚೆನ್ನಾಗಿದೆ ಎಂದು ಕೇಳಿದ್ದೆ. ಅದನ್ನೀಗ ಸವಿದಿದ್ದೇನೆ. ನಿಜಕ್ಕೂ ತುಂಬಾ ಚೆನ್ನಾಗಿದೆ. ಕರಾಚಿ ಮತ್ತು ಹೈದರಾಬಾದಿ ಎರಡೂ ಬಿರಿಯಾನಿಗಳು ರುಚಿಕರ ಎಂದು ಅಭಿಪ್ರಾಯಪಟ್ಟರು.
ಏಳು ವರ್ಷಗಳ ಬಳಿಕ ಭಾರತಕ್ಕೆ ಪಾಕ್: ಏಳು ವರ್ಷಗಳ ಬಳಿಕ ಭಾರತಕ್ಕೆ ಪ್ರವಾಸ ಮಾಡಿರುವ ಪಾಕ್ ತಂಡದ ಆಟಗಾರರಿಗೆ ಅಭಿಮಾನಿಗಳು ಅದ್ಧೂರಿ ಸ್ವಾಗತ ಕೋರಿದರು. ವಿಶ್ವಕಪ್‌ಗೆ ತಯಾರಿ ನಡೆಸುತ್ತಿರುವ ತಂಡ ಈಗಾಗಲೇ ಉಪ್ಪಳ ಮೈದಾನದಲ್ಲಿ ನ್ಯೂಜಿಲೆಂಡ್ ಮತ್ತು ಆಸ್ಟ್ರೇಲಿಯಾ ವಿರುದ್ಧ ನಡೆದ ಅಭ್ಯಾಸ ಪಂದ್ಯಗಳನ್ನು ಆಡಿದ್ದು, ಎರಡೂ ಪಂದ್ಯಗಳಲ್ಲಿ ಸೋತಿದೆ. ಇದೇ ಕ್ರೀಡಾಂಗಣದಲ್ಲಿ ನಡೆಯಲಿರುವ ವಿಶ್ವಕಪ್ ಪಂದ್ಯಗಳಲ್ಲಿ ತಂಡ ಅಕ್ಟೋಬರ್ 6 ರಂದು ನೆದರ್ಲ್ಯಾಂಡ್ಸ್ ಮತ್ತು ಅಕ್ಟೋಬರ್ 10 ರಂದು ಶ್ರೀಲಂಕಾವನ್ನು ಎದುರಿಸಲಿದೆ. ಅಕ್ಟೋಬರ್ 14 ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ ನಡುವೆ ಮಹತ್ವದ ಪಂದ್ಯ ನಡೆಯಲಿದೆ.
ಇದನ್ನೂ ಓದಿ: ವಿಶ್ವಕಪ್ ಅಖಾಡದಲ್ಲಿರುವ ತಂಡಗಳ ಹಿರಿಯ, ಕಿರಿಯ ಆಟಗಾರರು ಇವರು..