ಹುಬ್ಬಳ್ಳಿ : ಅಂಡರ್-19 ಕರ್ನಾಟಕ ತಂಡಕ್ಕೆ ಹುಬ್ಬಳ್ಳಿಯ ಯುವ ಕ್ರಿಕೆಟಿಗ ಯ್ಕೆಯಾಗುವ ಮೂಲಕ ವಾಣಿಜ್ಯ ನಗರಿ ಕೀರ್ತಿ ಹೆಚ್ಚಿಸಿದ್ದಾನೆ. ಹುಬ್ಬಳ್ಳಿಯ ಯುವರಾಜ್ ಸಿಂಗ್ ಎಂದೇ ಕರೆಯಲ್ಪಡುವ ನಗರದ ಜೆ ಜಿ ಕಾಮರ್ಸ್ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ಓದುತ್ತಿರುವ ರಾಜೇಂದ್ರ ಡಂಗನವರ ವಿನೂ ಮಂಕಡ್ ಟ್ರೋಫಿಯಲ್ಲಿ ಕರ್ನಾಟಕ ತಂಡದ ಭಾಗವಾಗಲಿದ್ದಾರೆ. ಎಡಗೈ ಸ್ಪಿನ್ನರ್ ಆಗಿರುವ ಅವರು, ಮಧ್ಯಮ ಕ್ರಮಾಂಕದ ಸ್ಫೋಟಕ ಬ್ಯಾಟಿಂಗ್ ಮಾಡುವ ಸಾಮರ್ಥ್ಯ ಹೊಂದಿದ್ದಾರೆ.
ರಾಜೇಂದ್ರ ಇದೇ 28ರಿಂದ ಅಕ್ಟೋಬರ್ 4ರವರೆಗೆ ನಡೆಯಲಿರುವ ಪಂದ್ಯಾವಳಿಗೆ ಧಾರವಾಡ ವಲಯದಿಂದ ರಾಜ್ಯ ತಂಡಕ್ಕೆ ಅರ್ಹತೆ ಪಡೆದಿದ್ದಾರೆ. ಬಿಸಿಸಿಐ ಸಿ ಲೆವಲ್ ಹಾಗೂ ತೇಜಲ್ ಶಿರಗುಪ್ಪಿ ಕ್ರಿಕೆಟ್ ಅಕಾಡೆಮಿಯಲ್ಲಿ ಕಳೆದ ನಾಲ್ಕು ವರ್ಷಗಳಿಂದ ಟೀಂ ಇಂಡಿಯಾ ಮಾಜಿ ಕ್ರಿಕೆಟರ್ ಸೋಮಶೇಖರ ಶಿರಗುಪ್ಪಿ ಬಳಿ ತರಬೇತಿ ಪಡೆದಿದ್ದಾರೆ.
6ನೇ ವಯಸ್ಸಿಗೆ ಬ್ಯಾಟ್ ಹಿಡಿಯಲಾರಂಭಿಸಿದ ರಾಜೇಂದ್ರ ಸಿಸಿಕೆ ಧಾರವಾಡ ಪರ ಮೊದಲ ಡಿವಿಷನ್, ಬೆಂಗಳೂರಿನ ಫ್ರೆಂಡ್ಸ್ ಕ್ರಿಕೆಟ್ ಯೂನಿಯನ್ ತಂಡದಲ್ಲೂ ಆಡಿದ್ದಾರೆ. 14 ಮತ್ತು 16ರೊಳಗಿನ ತಂಡದಲ್ಲಿ ಬ್ಯಾಟಿಂಗ್ ಮತ್ತು ಬೌಲಿಂಗ್ ಮೂಲಕ ಸದ್ದು ಮಾಡಿದ್ದಾರೆ. ಈಗ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದು, ಸಾಕಷ್ಟು ನಿರೀಕ್ಷೆ ಹುಟ್ಟಿಸಿದ್ದಾರೆ.

ಕೌಟುಂಬಿಕ ಹಿನ್ನೆಲೆ : ಅನೀಶ್ವರ ಗೌತಮ್ ನಾಯಕನಾಗಿರುವ 19 ವರ್ಷದೊಳಗಿನ ತಂಡದಲ್ಲಿ ಸ್ಥಾನ ಪಡೆದಿರುವ ರಾಜೇಂದ್ರ ಸಾಮಾಜಿಕ ಕಾರ್ಯಕರ್ತ, ಸೆಂಟ್ರಲ್ ಬಿಜೆಪಿ ಮುಖಂಡ ಶಶಿಶೇಖರ್ ಡಂಗನವರ ಹಾಗೂ ಗೌರಿ ದಂಪತಿ ಪುತ್ರ. ಓದಿನಲ್ಲೂ ಮುಂದಿರುವ ಈತ ಎಸ್‌ಎಸ್‌ಎಲ್‌ಸಿಯಲ್ಲಿ ಶೇ.84ರಷ್ಟು ಅಂಕ ಗಳಿಸಿದ್ದಾರೆ.

ಹಲವು ವರ್ಷಗಳ ನಂತರ ವಾಣಿಜ್ಯ ನಗರಿಯ ಯುವಕ ರಾಜ್ಯ ತಂಡದಲ್ಲಿ ಸ್ಥಾನ ಪಡೆದಿದ್ದು, ಇಂದೋರ್ನಲ್ಲಿ ನಡೆಯಲಿರುವ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ತೋರಲಿ ಎಂಬುದು ಪೋಷಕರು ಮತ್ತು ಧಾರವಾಡ ಕ್ರೀಡಾಭಿಮಾನಿಗಳ ಆಶಯವಾಗಿದೆ.
ಇದನ್ನು ಓದಿ:ಕರ್ನಾಟಕ ಅಂಡರ್ 19 ಕ್ರಿಕೆಟ್ ತಂಡಕ್ಕೆ ಶಿವಮೊಗ್ಗದ ಇಬ್ಬರಿಗೆ ಅವಕಾಶ
ರಾಜ್ಯ ಅಂಡರ್-19 ಮಹಿಳಾ ಕ್ರಿಕೆಟ್ ತಂಡಕ್ಕೆ ಆಯ್ಕೆಯಾದ ಬೆಣ್ಣೆನಗರಿಯ ಕುವರಿ