ಉದಯೋನ್ಮುಖ ಸ್ಪಿನ್ನರ್ ಹೃತಿಕ್ ಶೋಕೀನ್ ನಡೆಯುತ್ತಿರುವ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಮೊದಲ 'ಇಂಪ್ಯಾಕ್ಟ್ ಪ್ಲೇಯರ್' ಆಗಿ ಹೊರಹೊಮ್ಮಿದ್ದಾರೆ. ಮಂಗಳವಾರ ಜೈಪುರದಲ್ಲಿ ನಡೆದ ಬಿ ಗುಂಪಿನ ಪಂದ್ಯದಲ್ಲಿ ಮಣಿಪುರದ ವಿರುದ್ಧ ದೆಹಲಿ ತಂಡ 71 ರನ್ಗಳ ಜಯ ದಾಖಲಿಸಲು ಕಾರಣರಾದರು.
ಮೊದಲು ಬ್ಯಾಟ್ ಮಾಡಿದ ದೆಹಲಿ ಹಿತೇನ್ ದಲಾಲ್ ಬಿರುಸಿನ 47, ಯಶ್ ದುಲ್ 24, ಹಿಮ್ಮತ್ ಸಿಂಗ್ರ 25 ರನ್ಗಳ ಸಹಾಯದಿಂದ 7 ವಿಕೆಟ್ಗೆ 167 ರನ್ ಗಳಿಸಿತು. ಬಳಿಕ ಎರಡನೇ ಇನಿಂಗ್ಸ್ನಲ್ಲಿ ಇಂಪ್ಯಾಕ್ಸ್ ಪ್ಲೇಯರ್ ಅವಕಾಶ ಪಡೆದ ದೆಹಲಿ ತಂಡ ಹಿತೇಶ್ ದಲಾಲ್ ಬದಲಿಗೆ ಹೃತಿಕ್ ಶೋಕಿನ್‌ರನ್ನು ಸೇರಿಸಿಕೊಂಡಿತು.
ಯುವ ಸ್ಪಿನ್ನರ್ ಸಿಕ್ಕ ಅವಕಾಶವನ್ನು ಉತ್ತಮವಾಗಿ ಬಳಸಿಕೊಂಡು ಬೌಲಿಂಗ್ ಮಾಡಿದ 3 ಓವರ್ಗಳಲ್ಲಿ 13 ರನ್ ಮಾತ್ರ ನೀಡಿ ಪ್ರಮುಖ 2 ವಿಕೆಟ್ ಕಿತ್ತರು. ಬಿಗಿಯಾದ ಬೌಲಿಂಗ್ ದಾಳಿ ನಡೆಸಿದ ದೆಹಲಿ ತಂಡ ಮಣಿಪುರ ತಂಡವನ್ನು 96 ರನ್ಗೆ ಕಟ್ಟಿಹಾಕಿ 71 ರನ್ ಜಯ ಸಾಧಿಸಿತು.
ಆಟದ ಮಧ್ಯದಲ್ಲಿ ಹೆಚ್ಚುವರಿ ಆಟಗಾರನಾಗಿ ಮೈದಾನಕ್ಕೆ ಇಳಿದ ಹೃತಿಕ್ ಶೋಕೇನ್ ಉತ್ತಮ ಪ್ರದರ್ಶನ ನೀಡಿ ಟೂರ್ನಿಯಲ್ಲಿ ಮೊದಲ ಇಂಪ್ಯಾಕ್ಟ್ ಪ್ಲೇಯರ್ ಎಂಬ ದಾಖಲೆ ಬರೆದರು. ಅಲ್ಲದೇ, ಬಿಸಿಸಿಐ ಈ ಹೊಸ ನಿಯಮ ಪರಿಚಯಿಸಿದ ಬಳಿಕ ಅದನ್ನು ಸಮರ್ಥವಾಗಿ ಬಳಸಿಕೊಂಡ ಮೊದಲಿಗ ಎಂಬ ಖ್ಯಾತಿಗೆ ಒಳಗಾದರು.
ಏನಿದು ಇಂಪ್ಯಾಕ್ಟ್ ಪ್ಲೇಯರ್: ಇಂಪ್ಯಾಕ್ಟ್ ಪ್ಲೇಯರ್ ಎಂಬುದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ರೂಪಿಸಿದ ಹೊಸ ನಿಯಮವಾಗಿದೆ. ಒಂದು ನಿರ್ದಿಷ್ಟ ಸಮಯದಲ್ಲಿ ಆಟದ ಮಧ್ಯೆಯೇ ಆಡುವ ಹನ್ನೊಂದರಲ್ಲಿ ಇಲ್ಲದ ಆಟಗಾರನನ್ನೂ ಇನ್ನೊಬ್ಬರ ಸ್ಥಾನದಲ್ಲಿ ಕಣಕ್ಕಿಳಿಸುವುದಾಗಿದೆ. ಪ್ಲೇಯಿಂಗ್ ಎಲೆವೆನ್ನಲ್ಲಿ ಇಲ್ಲದ ಆಟಗಾರ ಬಂದು ಪಂದ್ಯದ ದಿಕ್ಕನ್ನೇ ಬದಲಿಸಿದರೆ, ಆತನಿಗೆ ಇಂಪ್ಯಾಕ್ಸ್ ಆಟಗಾರ ಎಂದು ಕರೆಯಲಾಗುತ್ತದೆ.
'ಇಂಪ್ಯಾಕ್ಟ್ ಪ್ಲೇಯರ್' ನಿಯಮವನ್ನು ಇದೇ ಮೊದಲ ಬಾರಿಗೆ ಬಿಸಿಸಿಐ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಜಾರಿಗೆ ತಂದಿದೆ. ಈ ನಿಯಮ ಯಾವುದೇ ಗೊಂದಲವಿಲ್ಲದೇ ಯಶಸ್ಸು ಕಂಡಲ್ಲಿ ಅದನ್ನು 2023 ರ ಐಪಿಎಲ್ನಲ್ಲಿ ಅನುಷ್ಠಾನ ಮಾಡುವ ಗುರಿಯನ್ನು ಬಿಸಿಸಿಐ ಹೊಂದಿದೆ.
ಓದಿ: ಟಿ20 ವಿಶ್ವಕಪ್ನಲ್ಲಿ ಈ ಮೂರು ದಾಖಲೆ ಬರೆಯುತ್ತಾರಾ ಕಿಂಗ್ ಕೊಹ್ಲಿ?