ಡಬ್ಲಿನ್ (ಐರ್ಲೆಂಡ್): ಕ್ರಿಕೆಟ್ ಶಿಶು ಐರ್ಲೆಂಡ್ ವಿರುದ್ಧ ನಡೆದ ಎರಡನೇ ಟಿ-20 ಪಂದ್ಯದಲ್ಲಿ ದೀಪಕ್ ಹೂಡಾ ಶತಕ ಮತ್ತು ಸ್ಯಾಮ್ಸನ್ ಅರ್ಧ ಶತಕ ಸಿಡಿಸಿ ಅಬ್ಬರಿಸಿದ್ದು, ಎದುರಾಳಿ ತಂಡದ ಗೆಲುವಿಗೆ 226 ರನ್ಗಳ ಬೃಹತ್ ಟಾರ್ಗೆಟ್ ನೀಡಿತ್ತು. ಆದರೆ ಭಾರತ ತಂಡ ನೀಡಿದ ಗುರಿಯನ್ನು ಬೆನ್ನತ್ತಿದ್ದ ಐರ್ಲೆಂಡ್ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿ ಗೆಲುವಿನ ಹಾದಿಯಲ್ಲಿ ಸೋಲು ಕಂಡಿತು.
ಭಾರತ ಇನ್ನಿಂಗ್ಸ್: ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿದ ಟೀಂ ಇಂಡಿಯಾ ಆರಂಭದಲ್ಲೇ ವಿಕೆಟ್ ಕೀಪರ್ ಇಶಾನ್ ಕಿಶನ್ (3 ರನ್) ವಿಕೆಟ್ ಕಳೆದುಕೊಂಡಿತು. ಈ ವೇಳೆ, ಒಂದಾದ ಸ್ಯಾಮ್ಸನ್ ಹಾಗೂ ದೀಪಕ್ ಹೂಡಾ ಜೋಡಿ ಐರ್ಲೆಂಡ್ ಬೌಲರ್ಗಳನ್ನ ಬೆಂಡೆತ್ತಿದರು. ದೀಪಕ್ ಹೂಡಾ ತಾವು ಎದುರಿಸಿದ 57 ಎಸೆತಗಳಲ್ಲಿ 6 ಸಿಕ್ಸರ್, 9 ಬೌಂಡರಿ ಸಮೇತ 104 ರನ್ ಗಳಿಕೆ ಮಾಡಿದರೆ, ಸ್ಯಾಮ್ಸನ್ 4 ಸಿಕ್ಸರ್, 9 ಬೌಂಡರಿ ಸಮೇತ 42 ಎಸೆತಗಳಲ್ಲಿ 77 ರನ್ ಗಳಿಸಿದರು. ಈ ಆಟಗಾರರು ಜೊತೆಯಾಟವಾಡಿ 176 ರನ್ಗಳ ಕಾಣಿಕೆ ನೀಡಿದರು.
104 ರನ್ ಗಳಿಕೆ ಮಾಡಿದ್ದ ಹೂಡಾ ಲಿಟ್ಲಿ ಓವರ್‌ನಲ್ಲಿ ವಿಕೆಟ್ ಒಪ್ಪಿಸಿದರೆ, ಸ್ಯಾಮ್ಸನ್ ಮಾರ್ಕ್ ಓವರ್‌ನಲ್ಲಿ ಔಟಾದರು. ಇದಾದ ಬಳಿಕ ಬಂದ ಸೂರ್ಯಕುಮಾರ್ ಯಾದವ್ (15 ರನ್), ಹಾರ್ದಿಕ್ ಪಾಂಡ್ಯ (15 ರನ್) ಗಳಿಸಿದರೆ, ದಿನೇಶ್ ಕಾರ್ತಿಕ್, ಅಕ್ಸರ್ ಪಟೇಲ್ ಹಾಗೂ ಹರ್ಷಲ್ ಪಟೇಲ್ ಶೂನ್ಯ ಸುತ್ತಿದರು. ತಂಡ ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 225 ರನ್ಗಳಿಕೆ ಮಾಡಿದ್ದು, ಎದುರಾಳಿ ತಂಡಕ್ಕೆ 226 ರನ್ಗಳ ಬೃಹತ್ ಟಾರ್ಗೆಟ್ ನೀಡಿತು. ಐರ್ಲೆಂಡ್ ಪರ ಮಾರ್ಕ್ 3 ವಿಕೆಟ್ ಪಡೆದರೆ, ಲಿಟ್ಲ್ ಹಾಗೂ ಯಂಗ್ ತಲಾ 2 ವಿಕೆಟ್ ಪಡೆದುಕೊಂಡು ಮಿಂಚಿದರು.
ಓದಿ: ಐರ್ಲೆಂಡ್ ವಿರುದ್ಧ ಶತಕ ಸಿಡಿಸಿ ಅಬ್ಬರಿಸಿದ ಹೂಡಾ; 226 ರನ್ಗಳ ಬೃಹತ್ ಟಾರ್ಗೆಟ್ ನೀಡಿದ ಭಾರತ
ಐರ್ಲೆಂಡ್ ಇನ್ನಿಂಗ್ಸ್: ಭಾರತ ತಂಡ ನೀಡಿದ ಮೊತ್ತವನ್ನು ಬೆನ್ನಟ್ಟಿದ ಐರ್ಲೆಂಡ್ ತಂಡ ಎದೆಗುಂದದೇ ಆಟ ಶುರು ಮಾಡಿತು. ಭುವನೇಶ್ವರ್ ಕುಮಾರ ಮೊದಲನೇ ಓವರ್ಗೆ ಅಬ್ಬರಿಸಿದ ಸ್ಟಿರ್ಲಿಂಗ್ ಒಂದು ಸಿಕ್ಸ್ ಮತ್ತು ಮೂರು ಬೌಂಡರಿ ಬಾರಿಸುವ ಮೂಲಕ 18 ರನ್‌ಗಳನ್ನು ಕಲೆಹಾಕಿದರು. ನಂತರ ನಾಯಕ ಹಾರ್ದಿಕ್ ಪಾಂಡ್ಯ ಬೌಲಿಂಗ್ನಲ್ಲಿ ಸ್ಟಿರ್ಲಿಂಗ್ ಸಿಕ್ಸರ್ ಬಾರಿಸಿದರು. ಆರಂಭಿಕ ಜೋಡಿಯು ತಮ್ಮ ಆಕ್ರಮಣಕಾರಿ ಪ್ರದರ್ಶನವನ್ನು ಮುಂದುವರಿಸಿತು. ಐರ್ಲೆಂಡ್ ಕೇವಲ ನಾಲ್ಕು ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 50 ರನ್ ಗಳಿಸಿ ಮುನ್ನಡೆ ಸಾಗುತ್ತಿತ್ತು.
ಲೆಗ್-ಸ್ಪಿನ್ನರ್ ರವಿ ಬಿಷ್ಣೋಯ್ ಆರನೇ ಓವರ್‌ನಲ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡುತ್ತಿದ್ದ ಆರಂಭಿಕ ಜೋಡಿಯನ್ನು ಮುರಿದರು. ಐರ್ಲೆಂಡ್ 72 ರನ್ ಕಲೆ ಹಾಕಿದ್ದಾಗ ಸ್ಟಿರ್ಲಿಂಗ್ (18 ಎಸೆತಗಳಲ್ಲಿ 40 ರನ್) ಔಟಾದರು. ಬಿಷ್ಣೋಯ್ ಮುಂದಿನ ಓವರ್‌ನಲ್ಲಿ ಇಶಾನ್ ಕಿಶನ್ ಐರ್ಲೆಂಡ್ ನಾಯಕ ಬಲ್ಬಿರ್ನಿನನ್ನು ಸ್ಟಂಪ್ ಮಾಡಿದರು. ಆದರೆ, ಅದು ನೋ ಬಾಲ್ ಆಗಿ ಹೊರಹೊಮ್ಮಿತು. ಬಲ್ಬಿರ್ನಿ ಈ ಅವಕಾಶವನ್ನು ಬಳಸಿಕೊಂಡು ಭಾರತ ತಂಡ ಬೌಲರ್ಗಳನ್ನು ಸರಿಯಾಗಿ ಬೆಂಡೆತ್ತಿದ್ದರು. ಐರ್ಲೆಂಡ್ ಒಂಬತ್ತು ಓವರ್‌ಗಳಲ್ಲಿ ಎರಡು ವಿಕೆಟ್‌ಗಳ ನಷ್ಟಕ್ಕೆ 100 ರನ್‌ಗಳನ್ನು ಗಳಿಸಿ ಭರ್ಜರಿ ಪ್ರದರ್ಶನ ತೋರಿತು.
ಬಲ್ಬಿರ್ನಿ 34 ಎಸೆತಗಳಲ್ಲಿ ತಮ್ಮ ಆರನೇ ಟಿ-20 ಅಂತರಾಷ್ಟ್ರೀಯ 50 ರನ್ ಗಳಿಸಿದರು. ಸ್ವಲ್ಪ ಸಮಯದವರೆಗೆ ಆಕ್ರಮಣಕಾರಿ ಆಟ ಮುಂದುವರಿಸಿದ ಅವರು ಹರ್ಷಲ್ ಪಟೇಲ್ ಎಸೆತದಲ್ಲಿ ಬಿಷ್ಣೋಯ್ಗೆ ಕ್ಯಾಚ್ ನೀಡಿ ಪೆವಿಲಿಯನ್ ಹಾದಿ ಹಿಡಿದರು. ಆದರೆ, ಟೆಕ್ಟರ್ 28 ಎಸೆತದಲ್ಲಿ 39 ರನ್ಗಳಿಸಿ ಔಟಾದ್ರೆ, ಡಾಕ್ರೆಲ್ (16 ಎಸೆತಗಳಲ್ಲಿ 34 ರನ್) ಮತ್ತು ಮಾರ್ಕ್ ಆಡೈರ್ (12 ಎಸೆತಗಳಲ್ಲಿ ಔಟಾಗದೆ 23) ಪಂದ್ಯ ಗೆಲುವಿಗಾಗಿ ಕೊನೆಯವರೆಗೂ ಹೋರಾಡಿ ಅಜೇಯರಾಗಿ ಉಳಿದರು.
ಐರ್ಲೆಂಡ್ ತಂಡ ನಿಗದಿತ 20 ಓವರ್ಗಳಿಗೆ 5 ವಿಕೆಟ್‌ಗಳ ನಷ್ಟಕ್ಕೆ 221 ರನ್‌ಗಳನ್ನು ಕಲೆ ಹಾಕುವ ಮೂಲಕ ಭಾರತ ತಂಡದ ವಿರುದ್ಧ ಭರ್ಜರಿ ಪ್ರದರ್ಶನ ನೀಡಿ ಕೇವಲ 4 ರನ್ಗಳಿಂದ ಸೋಲು ಕಂಡಿತು. ಭಾರತ ತಂಡದ ಪರ ರವಿ ಬಿಷ್ಣೋಯ್, ಹರ್ಷಲ್ ಪಟೇಲ್, ಭುವನೇಶ್ವರ್ ಕುಮಾರ್, ಉಮ್ರಾನ್ ಮಲಿಕ್ ತಲಾ ಒಂದೊಂದು ವಿಕೆಟ್ ಪಡೆದು ತಂಡದ ಗೆಲುವಿಗೆ ಶ್ರಮಿಸಿದರು.
ಟಿ-20ಯಲ್ಲಿ ಶತಕ ಸಿಡಿಸಿದ 4ನೇ ಭಾರತೀಯ: ಐರ್ಲೆಂಡ್ ವಿರುದ್ಧ ನಡೆದ 2ನೇ ಟಿ20ಯಲ್ಲಿ ಶತಕ ಸಿಡಿಸಿದ ದೀಪಕ್ ಹೂಡಾ ವಿಶೇಷ ಸಾಧನೆ ಮಾಡಿದ್ದಾರೆ. ಚುಟುಕು ಕ್ರಿಕೆಟ್ನಲ್ಲಿ ರೈನಾ, ರೋಹಿತ್ ಶರ್ಮಾ ಹಾಗೂ ಕೆಎಲ್ ರಾಹುಲ್ ಬಳಿಕ ಸೆಂಚುರಿ ಬಾರಿಸಿರುವ 4ನೇ ಭಾರತೀಯ ಬ್ಯಾಟರ್ ಆಗಿದ್ದಾರೆ.