ಹಿಸಾರ್ : ಪರಿಶಿಷ್ಟ ಜಾತಿ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಪ್ರಕರಣದಲ್ಲಿ ಹಿಸಾರ್ ಪೊಲೀಸರು ಕ್ರಿಕೆಟಿಗ ಯುವರಾಜ್ ಸಿಂಗ್ ಅವರನ್ನು ಭಾನುವಾರ ಬಂಧಿಸಿದ್ದಾರೆ.
ಯುವರಾಜ್ ಕಳೆದ ವರ್ಷ ರೋಹಿತ್ ಶರ್ಮಾ ಜೊತೆ ಇನ್ಸ್ಟಾಗ್ರಾಮ್ ಲೈವ್ ಚಾಟ್‌ನಲ್ಲಿ ಪಾಲ್ಗೊಂಡಿದ್ದ ವೇಳೆ ಯುಜ್ವೇಂದ್ರ ಚಹಲ್ ಬಗ್ಗೆ ಮಾತನಾಡುವ ವೇಳೆ ಪರಿಶಿಷ್ಟ ಜಾತಿಯನ್ನ ಅವಹೇಳನ ಪದ ಬಳಸಿದ್ದ ಆರೋಪ ಎದುರಿಸುತ್ತಿದ್ದಾರೆ. ಈ ಆರೋಪದಲ್ಲಿ ಯುವರಾಜ್ ಸಿಂಗ್ ವಿರುದ್ಧ ಹರ್ಯಾಣ ಜಿಲ್ಲೆಯ ಹನ್ಸಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಯುವರಾಜ್ ವಿರುದ್ಧ ಎಸ್‌ಸಿ/ಎಸ್‌ಟಿ ಕಾಯ್ದೆಯ ಸೆಕ್ಷನ್ 3 (1) (ಆರ್) ಮತ್ತು 3 (1) (ಎಸ್) ಹಾಗೂ ಐಪಿಸಿ 153, 153ಎ, 295, 505 ಸೆಕ್ಷನ್ನಗಳ ಅಡಿಯಲ್ಲಿ 2020ರ ಜೂನ್ನಲ್ಲಿ ವಕೀಲರೊಬ್ಬರು ದೂರು ದಾಖಲಿಸಿದ್ದರು. ಅಂದು ಯುವಿ ನಿರೀಕ್ಷಣಾ ಜಾಮೀನು ಪಡೆದಿದ್ದರು.
ಹಂಸಿ ಪೊಲೀಸರು ಯುವರಾಜ್ ಸಿಂಗ್ ಅವರನ್ನು ಬಂಧಿಸಿದ ನಂತರ ವಿಚಾರಣಗೆ ಒಳಪಡಿಸಿದ್ದಾರೆ. ನಂತರ ಹೈಕೋರ್ಟ್ ಆದೇಶದ ಮೇರೆಗೆ ಔಪಚಾರಿಕ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ ಎಂದು ತಿಳಿದು ಬಂದಿದೆ. ಈ ಹಿಂದೆ ಯುವರಾಜ್ಗೆ ಹೈಕೋರ್ಟ್ ನಿರೀಕ್ಷಣಾ ಜಾಮೀನು ನೀಡಿತ್ತು.
ಕ್ಷಮೆಯಾಚಿಸಿದ್ದ ಯುವಿ : ಯುವರಾಜ್ ಅವರ ಜಾತಿನಿಂದನೆ ಹೇಳಿಕೆ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆ ಯುವರಾಜ್ ಸಾಮಾಜಿಕ ಜಾಲತಾಣದಲ್ಲಿ ಕ್ಷಮೆಯಾಚಿಸಿದ್ದರು. ತಾವು ಯಾವುದೇ ಜಾತಿ, ಧರ್ಮ, ಬಣ್ಣ ಹಾಗೂ ಲಿಂಗದ ಆಧಾರದಲ್ಲಿ ಅಸಮಾನತೆ ಆಚರಣೆಯಲ್ಲಿ ನಂಬಿಕೆಯಿಟ್ಟಿಲ್ಲ. ಲೈವ್ ವೇಳೆ ಬಳಕೆ ಮಾಡಿರುವ ಪದ ಉದ್ದೇಶ ಪೂರ್ವಕವಾಗಿ ಮಾಡಿದ್ದಲ್ಲ. ನಾನು ಜನರ ಕಲ್ಯಾಣಕ್ಕಾಗಿ ನನ್ನ ಜೀವನವನ್ನು ಮುಡಿಪಾಗಿಟ್ಟಿದ್ದೇನೆ. ನಾನು ಜೀವನದ ಘನತೆಯನ್ನು ನಂಬುತ್ತೇನೆ ಮತ್ತು ಪ್ರತಿಯೊಬ್ಬ ವ್ಯಕ್ತಿಯನ್ನು ಗೌರವಿಸುತ್ತೇನೆ ಎಂದು ಕ್ಷಮಾಪಣೆ ಕೇಳಿದ್ದರು.
ಇದನ್ನು ಓದಿ:"ಏನಾಗುತ್ತಿದೆ ಎಂದು ನಿಖರವಾಗಿ ತಿಳಿದಿಲ್ಲ".. ದ್ರಾವಿಡ್ ಕೋಚ್ ವಿಚಾರವಾಗಿ ಕೊಹ್ಲಿ ಪ್ರತಿಕ್ರಿಯೆ