ರಾಜ್‌ಕೋಟ್ (ಗುಜರಾತ್): ದೇಶೀಯ ಕ್ರಿಕೆಟ್ ವಿಜಯ್ ಹಜಾರೆ ಟ್ರೋಫಿಯ ಚೊಚ್ಚಲ ಫೈನಲ್ ಪ್ರವೇಶಿಸಿದ ಹರಿಯಾಣ ಕ್ರಿಕೆಟ್ ತಂಡ ಇತಿಹಾಸವನ್ನು ಬರೆದಿದೆ. ಅಗ್ರ ಕ್ರಮಾಂಕದ ಬ್ಯಾಟರ್ ಹಿಮಾಂಶು ರಾಣಾ ಅವರ ನಾಲ್ಕನೇ ಶತಕ ಮತ್ತು ವೇಗಿ ಅನ್ಶುಲ್ ಕಾಂಬೋಜ್ ಅವರ ನಾಲ್ಕು ವಿಕೆಟ್‌ಗಳ ನೆರವಿನಿಂದ ಐದು ಬಾರಿಯ ಚಾಂಪಿಯನ್ ತಮಿಳುನಾಡು ತಂಡವನ್ನು 63 ರನ್‌ಗಳಿಂದ ಸೋಲಿಸುವ ಮೂಲಕ ಹರಿಯಾಣ ತನ್ನ ಚೊಚ್ಚಲ ವಿಜಯ್ ಹಜಾರೆ ಟ್ರೋಫಿ ಫೈನಲ್‌ಗೆ ಪ್ರವೇಶಿಸಿತು.
ತಮಿಳುನಾಡು ವಿರುದ್ಧದ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಹರ್ಯಾಣ ತಂಡದ ನಾಯಕ ಅಶೋಕ್ ಮೆನಾರಿಯಾ, ರನ್ ಕೋಟೆ ಕಟ್ಟುವ ಉತ್ಸಾಹದೊಂದಿಗೆ ಇನಿಂಗ್ಸ್ ಆರಂಭಿಸಿದರು. ತಂಡಕ್ಕೆ ಆರಂಭಿಕ ಆಟಗಾರ ಯುವರಾಜ್ ಸಿಂಗ್ ನಿರೀಕ್ಷೆಯಂತೆ ಉತ್ತಮ ಭದ್ರ ಬುನಾದಿ ಹಾಕಿದರು. 79 ಎಸೆತಗಳನ್ನು ಎದುರಿಸಿದ ಯುವರಾಜ್, 1 ಸಿಕ್ಸ್ ಹಾಗೂ 7 ಬೌಂಡರಿಗಳ ಸಹಿತ 65 ರನ್ ಬಾರಿಸಿ ತಮ್ಮ ವಿಕೆಟ್ ಒಪ್ಪಿಸಿದರು. ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಹಿಮಾಂಶು ರಾಣಾ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದರು.
ಎದುರಾಳಿ ತಂಡದ ಬೌಲರ್ಗಳನ್ನು ದಿಟ್ಟವಾಗಿ ಎದುರಿಸಿದ ರಾಣಾ 118 ಎಸೆತಗಳಲ್ಲಿ ಅಜೇಯ 116 ರನ್‌ಗಳನ್ನು ಸಿಡಿಸಿ ಪಂದ್ಯದ ಹೀರೋ ಆದರು. ಅಂತಿಮ ಹಂತದಲ್ಲಿ 30 ಎಸೆತಗಳಲ್ಲಿ 3 ಸಿಕ್ಸರ್ ಹಾಗೂ 3 ಬೌಂಡರಿಗಳ ಸಹಿತ ಸುಮಿತ್ ಕುಮಾರ್ 48 ರನ್ ಬಾರಿಸಿದರು. ಇದರೊಂದಿಗೆ ಹರ್ಯಾಣ ತಂಡವು 50 ಓವರ್‌ಗಳಲ್ಲಿ 7 ವಿಕೆಟ್ ಕಳೆದುಕೊಂಡು 293 ರನ್ ಕಲೆಹಾಕಿತು. 294 ರನ್ಗಳ ಗುರಿ ಬೆನ್ನತ್ತಿದ ವಿಕೆಟ್‌ಕೀಪರ್ ಕಂ ಬ್ಯಾಟರ್ ದಿನೇಶ್ ಕಾರ್ತಿಕ್ ನೇತೃತ್ವದ ತಮಿಳುನಾಡು 47.1 ಓವರ್‌ಗಳಲ್ಲಿ 230 ರನ್‌ಗಳಿಗೆ ಆಲೌಟ್ ಆಯಿತು. ಉತ್ತಮ ಆರಂಭ ಮಾಡುವಲ್ಲಿ ಎಡವಿದ ತಂಡ ಕೊನೆವರೆಗೂ ಸುಧಾರಣೆ ಕಾಣಲೇ ಇಲ್ಲ.
ಆರಂಭಿಕರಾಗಿ ಬಾಬಾ ಅಪರಜಿತ್ (7) ಹಾಗೂ ನಾರಾಯನ್ ಜಗದೀಸನ್ (30) ಬೇಗನೇ ಔಟಾದರೆ, ಹರಿ ನಿಶಾಂತ್ ಕೇವಲ 1 ರನ್ಗಳಿಸಿ ಭರವಸೆ ಹುಸಿಗೊಳಿಸಿದರು. ಬಳಿಕ ಬಂದ ವಿಜಯ್ ಶಂಕರ್ 23 ರನ್ ಗಳಿಸಿ ಪೆವಿಲಿಯನ್ ದಾರಿ ಹಿಡಿದರು. ಮಧ್ಯಮ ಕ್ರಮಾಂಕದಲ್ಲಿ ತುಸು ಎಚ್ಚರಿಕೆಯ ಆಟವಾಡಿದ ಬಾಬಾ ಇಂದ್ರಜಿತ್ 64 ರನ್ ಗಳಿಸಿ ತಂಡದ ಗೆಲುವಿಗೆ ಪ್ರಯತ್ನಿಸಿದರಾದರೂ ಅದಾಗಲಿಲ್ಲ. ನಾಯಕ ದಿನೇಶ್ ಕಾರ್ತಿಕ್ 31 ರನ್ ಬಾರಿಸಿ ಔಟಾದರು.
ತಮಿಳುನಾಡು ಬ್ಯಾಟರ್ಗಳನ್ನು ಇನ್ನಿಲ್ಲದಂತೆ ಕಾಡಿದ ಹರಿಯಾಣದ ವೇಗಿ ಅನ್ಶುಲ್ ಕಾಂಬೋಜ್, ಕೇವಲ 30 ರನ್ ನೀಡಿ 4 ವಿಕೆಟ್ ಕಿತ್ತರು. ಇದು ಅವರ ವೃತ್ತಿ ಜೀವನದ ಉತ್ತಮ ಫಲಿತಾಂಶವಾಯಿತು. ರಾಹುಲ್ ತೆವಾಟಿಯಾ 2, ಸುಮೀತ್ ಕುಮಾರ್ 1 ವಿಕೆಟ್ ಪಡೆದರು. ತಮಿಳುನಾಡು ಪರ ಟಿ ನಟರಾಜನ್ 3, ರವಿಶ್ರೀನಿವಾಸನ್ ಸಾಯಿ ಕಿಶೋರ್ ಮತ್ತು ವರುಣ್ ಚಕ್ರವರ್ತಿ ಕ್ರಮವಾಗಿ ಎರಡು ವಿಕೆಟ್ ಪಡೆದರು. ಹರಿಯಾಣ ತಂಡವು ಗುರುವಾರ ಇಲ್ಲಿ ನಡೆಯಲಿರುವ ರಾಜಸ್ಥಾನ ಮತ್ತು ಕರ್ನಾಟಕ ನಡುವಿನ ಎರಡನೇ ಸೆಮಿಫೈನಲ್‌ನಲ್ಲಿ ಗೆದ್ದ ತಂಡದ ವಿರುದ್ಧ ಸೆಣಸಲಿದೆ.
ಸಂಕ್ಷಿಪ್ತ ಸ್ಕೋರ್‌ಗಳು : ಹರಿಯಾಣ (ಯುವರಾಜ್ ಸಿಂಗ್ 65, ಹಿಮಾಂಶು ರಾಣಾ ಔಟಾಗದೇ 116, ಸುಮಿತ್ ಕುಮಾರ್ 48; ಟಿ ನಟರಾಜನ್ 3/79, ವರುಣ್ ಚಕ್ರವರ್ತಿ 2/67, ಸಾಯಿ ಕಿಶೋರ್ 2/41) ತಮಿಳುನಾಡು 47.1 ಓವರ್‌ಗಳಲ್ಲಿ 230 (ನಾರಾಯಣ ಜಗದೀಸನ್ 30, ನಾರಾಯಣ್ ಜಗದೀಸನ್ 30) ಇಂದ್ರಜಿತ್ 64, ದಿನೇಶ್ ಕಾರ್ತಿಕ್ 31; ಅಂಶುಲ್ ಕಾಂಬೋಜ್ 4/30, ರಾಹುಲ್ ತೆವಾಟಿಯಾ 2/50).
ಇದನ್ನೂ ಓದಿ: ಟೆಸ್ಟ್ ತಂಡದಲ್ಲಿ ಅವಕಾಶ ಕಳೆದುಕೊಂಡ ಪೂಜಾರ: 2024ರ ಕೌಂಟಿಯಲ್ಲಿ ಆಡಲು ಸಹಿ