ನವದೆಹಲಿ: ಭಾರತ ತಂಡ ನ್ಯೂಜಿಲ್ಯಾಂಡ್ ವಿರುದ್ಧದ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪಂದ್ಯದಲ್ಲಿ ಸೋಲು ಕಂಡ ನಂತರ ಭಾರತ ತಂಡದ ನಾಯಕತ್ವ ಬದಲಾವಣೆ ಕುರಿತು ಚರ್ಚೆಯಾಗುತ್ತಿದೆ. ಭಾರತ ತಂಡದ ಮಾಜಿ ಕ್ರಿಕೆಟಿಗ ಸುರೇಶ್ ರೈನಾ ಪ್ರಕಾರ, ಕೊಹ್ಲಿ ಈಗಲೂ ನಂಬರ್ 1 ಕ್ಯಾಪ್ಟನ್ ಆಗಿದ್ದು, ತಮ್ಮ ಸಾಮರ್ಥ್ಯ ಸಾಬೀತುಪಡಿಸಲು ಮತ್ತಷ್ಟು ವರ್ಷ ಅವಕಾಶ ನೀಡಬೇಕೆಂದು ಅಭಿಪ್ರಾಯಪಟ್ಟಿದ್ದಾರೆ.
ವಿರಾಟ್ ಕೊಹ್ಲಿ ನೇತೃತ್ವದಲ್ಲಿ ಭಾರತ ತಂಡ 2017ರ ಐಸಿಸಿ ಚಾಂಪಿಯನ್ಸ್ ಟ್ರೋಫಿ ಫೈನಲ್, 2019ರ ಏಕದಿನ ವಿಶ್ವಕಪ್ ಸೆಮಿಫೈನಲ್ ಮತ್ತು 2021ರ ಐಸಿಸಿ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ತಲುಪಿದೆ. ಕೊಹ್ಲಿ ಭಾರತ ತಂಡದ ಪರ ಹೆಚ್ಚು ಟೆಸ್ಟ್ ಪಂದ್ಯಗಳನ್ನು ಗೆದ್ದ ನಾಯಕ ಕೂಡ ಆಗಿದ್ದಾರೆ. ಆದರೆ ಮುಂದೆ 2 ಟಿ20 ವಿಶ್ವಕಪ್ ಮತ್ತು 2023ರ ಏಕದಿನ ವಿಶ್ವಕಪ್ ಬರಲಿದ್ದು, ಅಲ್ಲಿಯವರೆಗೂ ತಂಡದಲ್ಲಿ ನಾಯಕನಾಗಿ ಮುಂದುವರಿಯಬೇಕು ಎಂದು ರೈನಾ ಹೇಳುತ್ತಾರೆ.
ಅವರು(ಕೊಹ್ಲಿ) ನಂಬರ್ 1 ಕ್ಯಾಪ್ಟನ್, ಆತ ಏನು ಸಾಧನೆ ಮಾಡಿದ್ದಾರೋ ಅದನ್ನು ಅವರ ದಾಖಲೆಗಳೇ ತೋರಿಸುತ್ತಿವೆ. ನನ್ನ ಪ್ರಕಾರ ಅವರು ವಿಶ್ವದ ನಂಬರ್ 1 ಬ್ಯಾಟ್ಸ್ಮನ್. ಆದರೆ ನೀವು ಅವರ ಐಸಿಸಿ ಟ್ರೋಫಿ ಗೆದ್ದಿಲ್ಲ ಎನ್ನುವುದರ ಬಗ್ಗೆ ಮಾತನಾಡುತ್ತಿದ್ದೀರಾ, ಆದರೆ ಅವರು ಇನ್ನೂ ಐಪಿಎಲ್ ಕೂಡ ಗೆಲ್ಲಲಾಗಿಲ್ಲ. ಹಾಗಾಗಿ ಅವರಿಗೆ ಇನ್ನೂ ಸ್ವಲ್ಪ ಸಮಯ ನೀಡಬೇಕಾಗಿದೆ ಎಂದು ಭಾವಿಸುತ್ತೇನೆ. ಇನ್ನು 2 ವರ್ಷಗಳಲ್ಲಿ 2 ಟಿ20 ವಿಶ್ವಕಪ್ ಮತ್ತು ಒಂದು 50 ಓವರ್ಗಳ ವಿಶ್ವಕಪ್ ಆಯೋಜನೆಯಾಗಲಿದೆ. ಅಲ್ಲದೆ ಅವರ ನೇತೃತ್ವದಲ್ಲಿ ಫೈನಲ್ ತಲುಪಿದೆ, ಫೈನಲ್ ತಲುಪುವುದೇನೂ ಸುಲಭದ ಮಾತಲ್ಲ ಎಂದು ಅವರು ಹೇಳಿದ್ದಾರೆ.
ಭಾರತ ಚೋಕರ್ಸ್ ಅಲ್ಲ:
ಭಾರತ ಕೆಲವು ಐಸಿಸಿ ನಾಕೌಟ್ಗಳಲ್ಲಿ ಸೋಲು ಕಂಡಿದ್ದರಿಂದ ಕೆಲವರು ಚೋಕರ್ಸ್ ಎಂದು ಕರೆಯುತ್ತಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿದ ರೈನಾ, ನಾವು ಚೋಕರ್ಸ್ ಅಲ್ಲ, ಏಕೆಂದರೆ ಈಗಾಗಲೆ ನಾವು 1983ರ ವಿಶ್ವಕಪ್ ಗೆದ್ದಿದ್ದೇವೆ, 2007ರ ಟಿ20 ಮತ್ತು 2011ರ ಏಕದಿನ ವಿಶ್ವಕಪ್ ಗೆದ್ದಿದ್ದೇವೆ. ನಾವು ಎಲ್ಲಾ ಆಟಗಾರರು ಕಠಿಣವಾಗಿ ತರಬೇತಿ ನಡೆಸುತ್ತಾರೆಂದು ನಾವೆಲ್ಲರೂ ಅರ್ಥಮಾಡಿಕೊಳ್ಳುವ ಅಗತ್ಯವಿದೆ. 3 ವಿಶ್ವಕಪ್ ಗೆದ್ದಿರುವ ಭಾರತವನ್ನು ಯಾರಾದರೂ ಚೋಕರ್ಸ್ ಎಂದು ಕರೆಯುತ್ತಾರೆ ಎಂದು ನಾನು ಭಾವಿಸುವುದಿಲ್ಲ" ಎಂದು ರೈನಾ ತಿಳಿಸಿದ್ದಾರೆ.
ಇದನ್ನೂ ಓದಿ:ಐಪಿಎಲ್ನಲ್ಲಿ ಆಡಿರುವುದು ಯುವ ಆಟಗಾರರಿಗೆ ದೊಡ್ಡ ಅನುಭವ, ಅವರ ಮೇಲೆ ಭರವಸೆಯಿದೆ: ಭುವನೇಶ್ವರ್ ಕುಮಾರ್