ಮುಂಬೈ: ಪಾಕಿಸ್ತಾನ ಪ್ರವಾಸ ಮುಗಿಸಿ ಬಂದಿರುವ ಆಸ್ಟ್ರೇಲಿಯಾ ವೇಗಿಗಳಾದ ಜೋಶ್ ಹೇಜಲ್ವುಡ್ ಮತ್ತು ಜೇಸನ್ ಬೆಹ್ರೆನ್ಡಾರ್ಫ್ ಕ್ವಾರಂಟೈನ್ ಮುಗಿಸಿದ್ದು, ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಹೈವೋಲ್ಟೇಜ್ ಪಂದ್ಯಕ್ಕೂ ಮುನ್ನ ತಂಡಕ್ಕೆ ಸೇರ್ಪಡೆಯಾಗಿದ್ದಾರೆ. ಇವರಿಬ್ಬರ ಸೇರ್ಪಡೆ ತಂಡದ ಬೌಲಿಂಗ್ ಬಲವನ್ನು ಹೆಚ್ಚಿಸಿದೆ.
ಈಗಾಗಲೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಜೊತೆಗೆ ಈ ವೇಗಿಗಳು ತರಬೇತಿ ಆರಂಭಿಸಿದ್ದಾರೆ. ಹೆಜಲ್ವುಡ್ ಮತ್ತು ಬೆಹ್ರೆನ್ಡಾರ್ಪ್ ಬೌಲಿಂಗ್ ಮಾಡುತ್ತಿರುವ ಕೆಲವು ಚಿತ್ರಗಳನ್ನು ಫ್ರಾಂಚೈಸಿ ತನ್ನ ಸಾಮಾಜಿಕ ಖಾತೆಗಳಲ್ಲಿ ಹಂಚಿಕೊಂಡಿದೆ. ಈ ಇಬ್ಬರು ವೇಗಿಗಳು ಐಪಿಎಲ್ನ ಮುಂದಿನ ಎಲ್ಲಾ ಪಂದ್ಯಗಳಿಗೆ ಆಯ್ಕೆಗೆ ಲಭ್ಯರಿರಲಿದ್ದಾರೆ.
ಫಾಫ್ ಡು ಪ್ಲೆಸಿಸ್ ಬಳಗ ತಮ್ಮ ಮೊದಲ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ಸೋಲು ಕಂಡರೂ ನಂತರ ಸತತ ಮೂರು ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ. ಪ್ರಸ್ತುತ ಸಿಕ್ಕಿರುವ ಗೆಲುವಿನ ಓಟವನ್ನು ಸಿಎಸ್ಕೆ ವಿರುದ್ಧವೂ ಮುಂದುವರಿಸಿಕೊಂಡು ಹೋಗುವ ಇರಾದೆಯಲ್ಲಿದೆ.
ಮುಂದಿನ ಪಂದ್ಯದಲ್ಲಿ ಬಹುಶಃ ಡೇವಿಡ್ ವಿಲ್ಲಿ ಬದಲಿಗೆ ಹೇಜಲ್ವುಡ್ ಕಣಕ್ಕಿಳಿಯುವ ಸಾಧ್ಯತೆಯಿದೆ. ಇನ್ನುಳಿದಂತೆ ಮ್ಯಾಕ್ಸ್ವೆಲ್, ಡುಪ್ಲೆಸಿಸ್ ಮತ್ತು ಆಲ್ರೌಂಡರ್ ವನಿಂಡು ಹಸರಂಗ ಖಾಯಂ ಆಟಗಾರರಾಗಿ ಮುಂದುವರಿಯಲಿದ್ದಾರೆ.
ಏಪ್ರಿಲ್ 12 ರಂದು ಆರ್ಸಿಬಿ ಮುಂಬೈನ ಡಿ ವೈ ಪಾಟೀಲ್ ಸ್ಟೇಡಿಯಂನಲ್ಲಿ ಸಿಎಸ್ಕೆ ವಿರುದ್ಧ ಕಣಕ್ಕಿಳಿಯಲಿದೆ. ಸತತ 4 ಸೋಲುಗಳಿದ ಕಂಗೆಟ್ಟಿರುವ ಜಡೇಜಾ ಬಳಗವನ್ನು ಮಣಿಸಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರುವ ಅವಕಾಶ ಕೂಡ ಬೆಂಗಳೂರು ತಂಡಕ್ಕಿದೆ.
ಇದನ್ನೂ ಓದಿ:ಮಗನ ಕ್ರಿಕೆಟ್ ಕನಸಿಗೆ ಚಿನ್ನ, ಜಮೀನು ಅಡವಿಟ್ಟ ತಂದೆ-ತಾಯಿ: ರಣಜಿ ತ್ರಿಶತಕ ವೀರನ ರೋಚಕ ಜರ್ನಿ!