ಹೋಬರ್ಟ್ : ಐಪಿಎಲ್ನ 2022ರ ಆವೃತ್ತಿಯ ಮೆಗಾ ಹರಾಜಿನಲ್ಲಿ ಕಾಣಿಸಿಕೊಳ್ಳುವುದಾಗಿ ಹೇಳಿದ್ದ ಇಂಗ್ಲೆಂಡ್ ಟೆಸ್ಟ್ ತಂಡದ ನಾಯಕ ಜೋ ರೂಟ್, ಆ್ಯಶಸ್ ಸರಣಿಯನ್ನು ಹೀನಾಯವಾಗಿ ಸೋಲು ಕಂಡ ಬಳಿಕ ಉಲ್ಟಾ ಹೊಡೆದಿದ್ದಾರೆ. ತಾನು ಇಂಗ್ಲೆಂಡ್ ತಂಡವನ್ನು ಪುನರ್ ನಿರ್ಮಾಣ ಮಾಡುವುದಕ್ಕಾಗಿ ಐಪಿಎಲ್ಗೆ ತನ್ನ ಹೆಸರನ್ನು ನೀಡಿಲ್ಲ ಎಂದು ಹೇಳಿದ್ದಾರೆ.
ಆಸ್ಟ್ರೇಲಿಯಾ ವಿರುದ್ಧ ಕೊನೆಯ ಟೆಸ್ಟ್ ಪಂದ್ಯವನ್ನು 146 ರನ್ಗಳಿಂದ ಸೋಲು ಕಂಡು, ಸರಣಿಯನ್ನು 4-0ಯಲ್ಲಿ ಕಳೆದುಕೊಂಡ ಬಳಿಕ ರೂಟ್ ತಮ್ಮ ನಿರ್ಧಾರವನ್ನು ಖಚಿತಪಡಿಸಿದ್ದಾರೆ.
ನಾನು ಐಪಿಎಲ್ಗೆ ಹೆಸರನ್ನು ನೀಡಿಲ್ಲ, ನನ್ನ ಸಂಪೂರ್ಣ ಸಾಮರ್ಥ್ಯವನ್ನು ಬಳಸಿಕೊಳ್ಳಲು ಅರ್ಹವಾಗಿರುವ ಈ ತಂಡಕ್ಕಾಗಿ ನಾವು ಮಾಡಬೇಕಾದದ್ದು ತುಂಬಾ ಇದೆ ಎಂದು ನಾನು ಭಾವಿಸುತ್ತೇನೆ. ಅದನ್ನು ಮಾಡಲು ನನಗೆ ಅವಕಾಶ ಸಿಗುತ್ತದೆ ಎಂಬ ಭರವಸೆ ಇದೆ.
ನಮ್ಮ ದೇಶದ ಟೆಸ್ಟ್ ಕ್ರಿಕೆಟ್ ಬಗ್ಗೆ ನನಗೆ ತುಂಬಾ ಕಾಳಜಿ ಇರುವುದರಿಂದ ನಾನು ಸಾಧ್ಯವಾದಷ್ಟು ತ್ಯಾಗ ಮಾಡುತ್ತೇನೆ ಎಂದು ರೂಟ್ ವರ್ಚುವಲ್ ಮಾಧ್ಯಮಗೋಷ್ಠಿಯಲ್ಲಿ ಹೇಳಿದ್ದಾರೆ.
ರೂಟ್ ಜೊತೆಗೆ ಕಳೆದ 5 ವರ್ಷಗಳಿಂದ ಐಪಿಎಲ್ನಿಂದ ದೂರ ಉಳಿದಿರುವ ಆಸ್ಟ್ರೇಲಿಯಾದ ವೇಗಿ ಮಿಚೆಲ್ ಸ್ಟಾರ್ಕ್ ಕೂಡ ಐಪಿಎಲ್ಗೆ ಮರಳುವ ಆಲೋಚನೆ ಮಾಡಿದ್ದಾರೆ. ಆದರೆ, ಮೆಗಾ ಹರಾಜಿಗೆ ತಮ್ಮ ಹೆಸರನ್ನು ಸೇರಿಸುವ ಮುನ್ನ ತಮ್ಮ ಅಂತಾರಾಷ್ಟ್ರೀಯ ವೇಳಾಪಟ್ಟಿಯನ್ನಾಧರಿಸಿ ಅಂತಿಮ ನಿರ್ಧಾರ ತೆಗೆದುಕೊಳ್ಳುವುದಾಗಿ ತಿಳಿಸಿದ್ದರು.
ಇದನ್ನೂ ಓದಿ:ಕೆಎಲ್ ರಾಹುಲ್ ಭಾರತ ಟೆಸ್ಟ್ ತಂಡದ ನಾಯಕನಾಗಬೇಕು : ಮಾಜಿ ಬಿಸಿಸಿಐ ಕಾರ್ಯದರ್ಶಿ ಸಂಜಯ್ ಜಗದಾಳೆ