ಹೈದರಾಬಾದ್ : ವಿಶ್ವಕಪ್ ಲೀಗ್ ಹಂತದ ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧ ಆಡುವಾಗ ಹಾರ್ದಿಕ್ ಪಾಂಡ್ಯ ಗಾಯಕ್ಕೆ ತುತ್ತಾಗಿದ್ದರು. ಇದರಿಂದಾಗಿ ವಿಶ್ವಕಪ್ ಪಂದ್ಯಗಳಿಂದ ಅವರು ಹೊರಗುಳಿದಿದ್ದಲ್ಲದೇ, ಅವರ ಬದಲಿಯಾಗಿ ಪ್ರಸಿದ್ಧ್ ಕೃಷ್ಣ ತಂಡವನ್ನು ಸೇರಿಕೊಂಡಿದ್ದಾರೆ. ಹಾರ್ದಿಕ್ ಚೇತರಿಕೆ ಬಗ್ಗೆ ಕೆಲ ಮಾಹಿತಿ ಬಹಿರಂಗವಾಗುತ್ತಿದ್ದು, ಪಾಂಡ್ಯ ಮುಂದಿನ ಕೆಲ ಸರಣಿಗಳಲ್ಲಿ ಕಾಣಿಸಿಕೊಳ್ಳುವುದು ಅನುಮಾನ ಎಂದು ಹೇಳಲಾಗುತ್ತಿದೆ.
2024ರಲ್ಲಿ ಟಿ20 ವಿಶ್ವಕಪ್ ನಡೆಯಲಿರುವ ಕಾರಣ ಎಲ್ಲ ದೇಶಗಳು ಇದರತ್ತ ಗಮನಹರಿಸುತ್ತಿದೆ. ಏಕದಿನ ವಿಶ್ವಕಪ್ ಮುಗಿದ ಬೆನ್ನಲ್ಲೇ ಎಲ್ಲಾ ರಾಷ್ಟ್ರೀಯ ತಂಡಗಳು ಟಿ20 ಸರಣಿಗಳಿಗೆ ಸಿದ್ಧತೆ ಮಾಡಿಕೊಂಡಿದೆ. ಭಾರತ ತಂಡ ವಿಶ್ವಕಪ್ ಆದ ನಂತರ ಆಸ್ಟ್ರೇಲಿಯಾದ ಜೊತೆಗೆ ಟಿ-20 ಸರಣಿಯನ್ನು ಆಡಲಿದೆ. ಇದು ವಿಶ್ವಕಪ್ಗೂ ಮುನ್ನ ಭಾರತ - ಆಸ್ಟ್ರೇಲಿಯಾದ ನಡುವೆ ನಡೆದ ಏಕದಿನ ಸರಣಿಯ ಮುಂದುವರೆದ ಭಾಗವಾಗಿದೆ. ಅಲ್ಲದೇ 2024ರ ಆರಂಭದಲ್ಲಿ ಭಾರತ ದಕ್ಷಿಣ ಆಫ್ರಿಕಾ ವಿರುದ್ಧ ಪಂದ್ಯಗಳನ್ನು ಆಡಲಿದೆ.
ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಅವರು ಆಸ್ಟ್ರೇಲಿಯಾ ವಿರುದ್ಧದ ಐದು ಪಂದ್ಯಗಳ ಟಿ-20 ಸರಣಿ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧದ ಮೂರು ಪಂದ್ಯಗಳ ಏಕದಿನ ಮತ್ತು ಟಿ20 ಸರಣಿಯಿಂದ ಹೊರಗುಳಿಯಲಿದ್ದಾರೆ ಎಂದು ಕೆಲ ಮಾಧ್ಯಮಗಳು ವರದಿ ಮಾಡಿದೆ. ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ (ಎನ್ಸಿಎ) ಯಲ್ಲಿ ಪುನರ್ವಸತಿಯಲ್ಲಿರುವ ಪಾಂಡ್ಯ ಇನ್ನೆರಡು ತಿಂಗಳು ಆಟದಿಂದ ಹೊರಗುಳಿಯಬಹುದು ಎಂದು ಹೇಳಲಾಗಿದೆ. ಹಾರ್ದಿಕ್ ಪಾಂಡ್ಯರಿಗೆ ಶಸ್ತ್ರಚಿಕಿತ್ಸೆ ಅಗತ್ಯವಿದೆಯೇ ಎಂಬುದನ್ನು ವೈದ್ಯಕೀಯ ತಂಡ ಇನ್ನೂ ನಿರ್ಧರಿಸಿಲ್ಲ, ಹಾರ್ದಿಕ್ ಬೌಲಿಂಗ್ ಮಾಡಲು ಪ್ರಯತ್ನಸಿದ್ದು ಮತ್ತೆ ನೋವಿಗೆ ತುತ್ತಾಗಿದ್ದಾರೆ ಎಂದು ವರದಿಯಾಗಿದೆ.
"ಎರಡು ವಾರಗಳ ಹಿಂದೆ, ಪಾಂಡ್ಯ ನೆಟ್ಸ್ನಲ್ಲಿ ಬೌಲಿಂಗ್ ಮಾಡುವ ಬಗ್ಗೆ ವೈದ್ಯಕೀಯ ತಂಡದಲ್ಲಿ ಕೇಳಿಕೊಂಡಿದ್ದಾರೆ ಮತ್ತು ಇದಕ್ಕೆ ಕಂಡೀಷನಿಂಗ್ ಕೋಚ್‌ಗಳು ನಿಧಾನವಾಗಿ ವೇಗ ಹೆಚ್ಚಿಸುವಂತೆ ಸಲಹೆ ನೀಡಿದ್ದರು. ನೆಟ್ಸ್ನಲ್ಲಿ ಬೌಲಿಂಗ್ ಮಾಡುವಾಗ ಅವರು ತಮ್ಮ ಪಾದದ ಮೇಲೆ ಹೆಚ್ಚು ಒತ್ತಡವನ್ನು ಹಾಕಲು ಬಯಸಲಿಲ್ಲ. ಅವರು ಬೌಲ್ ಮಾಡಿದ ಮೊದಲ ಮೂರು ಎಸೆತಗಳಲ್ಲಿ ಯಾವುದೇ ಸಮಸ್ಯೆಯನ್ನು ಎದುರಿಸಲಿಲ್ಲ. ನಾಲ್ಕನೇ ಎಸೆತಕ್ಕೆ ತಮ್ಮ ಬೌಲಿಂಗ್‌ನ ತೀವ್ರತೆಯನ್ನು ಹೆಚ್ಚಿಸಲು ನಿರ್ಧರಿಸಿದರು. ನಾಲ್ಕನೇ ಎಸೆತದ ಸಮಯದಲ್ಲಿ ಅವರು ತಮ್ಮ ಕಾಲಿನಲ್ಲಿ ಸ್ವಲ್ಪ ನೋವು ಅನುಭವಿಸಿದರು"ಎಂದು ಮೂಲಗಳು ತಿಳಿಸಿವೆ.
ಪಾಂಡ್ಯ ಬೌಲಿಂಗ್ ವೇಳೆ ನೋವು ಅನುಭವಿಸುತ್ತಿರುವುದರಿಂದ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ (ಎನ್ಸಿಎ) ವೈದ್ಯಕೀಯ ತಂಡವು ಮತ್ತೊಂದು ಸುತ್ತಿನ ಸ್ಕ್ಯಾನ್ ಮಾಡಲು ನಿರ್ಧರಿಸಿದೆ. (ಐಎಎನ್ಎಸ್)
ಇದನ್ನೂ ಓದಿ: ವಿಶ್ವಕಪ್ ಕ್ರಿಕೆಟ್ ಫೈನಲ್: 2011ರ ವೈಭವ ಮರುಕಳಿಸುವುದೇ?