ಅಮೃತಸರ್(ಪಂಜಾಬ್): ಜಪಾನ್ ಟೋಕಿಯೋದಲ್ಲಿ ನಡೆಯುತ್ತಿರುವ ಒಲಿಂಪಿಕ್ಸ್ನಲ್ಲಿ ಭಾರತದ ಮಹಿಳಾ ಹಾಕಿ ತಂಡ ಅದ್ಭುತ ಪ್ರದರ್ಶನ ನೀಡಿದ್ದು, ಈಗಾಗಲೇ ಸೆಮಿಫೈನಲ್ಗೆ ಲಗ್ಗೆ ಹಾಕಿದೆ. ತಂಡದಲ್ಲಿ ಮೋನಿಕಾ ಮಲಿಕ್ ಕೂಡ ತಮ್ಮದೇ ಕೊಡುಗೆ ನೀಡಿದ್ದು, ಇಂದು ಪೋಷಕರೊಂದಿಗೆ ತಮ್ಮ ಸಂಭ್ರಮ ಹಂಚಿಕೊಂಡಿದ್ದಾರೆ.
ವಿಡಿಯೋ ಕಾಲ್ ಮೂಲಕ ಮಾತನಾಡಿರುವ ಮೋನಿಕಾ ಮಲಿಕ್, ಈ ಗೆಲುವಿನೊಂದಿಗೆ ಎಲ್ಲರೂ ಸಂತೋಷದಲ್ಲಿದ್ದು, ನಾವು ಇದೀಗ ಮುಂದಿನ ಪಂದ್ಯಕ್ಕಾಗಿ ತಯಾರಾಗಬೇಕಾಗಿದೆ. ಆಸ್ಟ್ರೇಲಿಯಾದಂತಹ ಬಲಿಷ್ಠ ತಂಡದ ವಿರುದ್ಧ ನಾವು ಗೆಲುವು ಸಾಧಿಸುತ್ತೇವೆ ಎಂಬುದನ್ನ ನಾವು ನಿರೀಕ್ಷೆ ಮಾಡಿರಲಿಲ್ಲ. ಆದರೆ, ಎಲ್ಲರೂ ಉತ್ತಮವಾದ ಪ್ರದರ್ಶನ ನೀಡಿದ್ದರಿಂದ ಈ ಫಲಿತಾಂಶ ಹೊರಬಂದಿದೆ. ಸೆಮಿಫೈನಲ್ನಲ್ಲಿ ನಾವು ಅರ್ಜೆಂಟೈನಾ ವಿರುದ್ಧ ಸೆಣಸಬೇಕಾಗಬಹುದು. ಉತ್ತಮ ಪ್ರದರ್ಶನ ನೀಡಿದ್ದರಿಂದ ಅಭಿನಂದನೆಗಳ ಮಹಾಪೂರವೇ ಹರಿದು ಬರುತ್ತಿದೆ ಎಂದರು.
ಸಿಹಿ ಹಂಚಿ ಸಂಭ್ರಮಿಸಿದ ಗುರ್ಜಿತ್ ಕೌರ್ ಕುಟುಂಬ
ಆಸ್ಟ್ರೇಲಿಯಾ ವಿರುದ್ಧ ನಡೆದ ಪಂದ್ಯದಲ್ಲಿ ಭಾರತ ಮಹಿಳಾ ಹಾಕಿ ತಂಡದ ಗುರ್ಜಿತ್ ಕೌರ್ ಗೋಲು ಹೊಡೆದು, ತಂಡಕ್ಕೆ ಮೆಲುಗೈ ತಂದುಕೊಟ್ಟಿದ್ದರು. ಇದೇ ಕಾರಣದಿಂದ ತಂಡ ಸೆಮೀಸ್ಗೆ ಲಗ್ಗೆ ಹಾಕಿದೆ. ಒಲಿಂಪಿಕ್ಸ್ನಲ್ಲಿ ಕೌರ್ ಪ್ರದರ್ಶನದಿಂದ ಅವರ ಕುಟುಂಬ ಸಂತೋಷದಲ್ಲಿದೆ. ಸಿಹಿ ಹಂಚಿ ಸಂಭ್ರಮ ವ್ಯಕ್ತಪಡಿಸಿದ್ದಾರೆ. ಭಾರತೀಯ ಹಾಕಿ ತಂಡದಲ್ಲಿ ಗುರ್ಜಿತ್ ಕೌರ್ ಪಂಜಾಬ್ನ ಏಕೈಕ ಆಟಗಾರ್ತಿಯಾಗಿದ್ದು, ಇದೇ ಕಾರಣದಿಂದ ಕುಟುಂಬ ಹಾಗೂ ಗ್ರಾಮಸ್ಥರು ಸಂತೋಷದಲ್ಲಿದ್ದಾರೆ.
ಇದನ್ನೂ ಓದಿರಿ: ಈಟಿವಿ ಭಾರತ Exclusive: ಮಹಿಳಾ ಹಾಕಿ ತಂಡದ ಮಾಜಿ ಕ್ಯಾಪ್ಟನ್ ಪ್ರೀತಮ್ ಸಿವಾಚ್ ಜೊತೆ ಸಂದರ್ಶನ