ಮುಂಬೈ: ಒಂದೇ ವರ್ಷದಲ್ಲಿ ತಮ್ಮ - ತಂದೆಯನ್ನು ಕಳೆದುಕೊಂಡು ತೀವ್ರ ಆಘಾತಕ್ಕೊಳಗಾಗಿದ್ದ ಯುವ ಬೌಲರ್ ಚೇತನ್ ಸಕಾರಿಯಾ ಒಂದೇ ವರ್ಷದಲ್ಲಿ ಐಪಿಎಲ್, ಭಾರತ ಟಿ-20 ಮತ್ತು ಏಕದಿನ ತಂಡಕ್ಕೂ ಆಯ್ಕೆಯಾಗಿ ಅಚ್ಚರಿ ಮೂಡಿಸಿದ್ದರು. 2021ರಲ್ಲಿ 1.2 ಕೋಟಿ ರೂ ಪಡೆದಿದ್ದ ಎಡಗೈ ವೇಗಿಯನ್ನ 2022ರ ಮೆಗಾ ಹರಾಜಿನಲ್ಲಿ ಬರೋಬ್ಬರಿ 4.2 ಕೋಟಿ ರೂಗಳಿಗೆ ಡೆಲ್ಲಿ ಕ್ಯಾಪಿಟಲ್ಸ್ ಖರೀದಿಸಿದೆ.
ಐಪಿಎಲ್ನಲ್ಲಿ ಆಡುವ ಅವಕಾಶಕ್ಕಾಗಿ ಲಕ್ಷಾಂತರ ಯುವ ಕ್ರಿಕೆಟಿಗರು ಸಾಲು ಸಾಲಾಗಿ ಕಾದು ನಿಂತಿದ್ದಾರೆ. ಇಂತಹದ್ದೇ ಕನಸಿನ್ನಿಟ್ಟುಕೊಂಡಿದ್ದ ಚೇತನ್ ಸಕಾರಿಯಾ ಐಪಿಎಲ್ಗೂ ಬರುವ ಮುನ್ನ ದೊಡ್ಡ ದುರಂತವನ್ನೇ ಎದುರಿಸಿ ಬಂದಿದ್ದರು. 2021ರ ಸಯ್ಯದ್ ಮುಸ್ತಾಕ್ ಟಿ-20 ವೇಳೆ ತಮ್ಮನನ್ನು ಕಳೆದುಕೊಂಡಿದ್ದರು.
ಆದರೆ, ಈತನ ಕ್ರಿಕೆಟ್ ಜೀವನ ಹಾಳಗಬಾರದೆಂದು ಲಾರಿ ಡ್ರೈವರ್ ಆಗಿದ್ದ ತಂದೆ ಮತ್ತು ಟೈಲರಿಂಗ್ ಮಾಡುತ್ತಿದ್ದ ತಾಯಿ ಸಕಾರಿಯಾ ಅವರಿಂದ 10 ದಿನಗಳ ಕಾಲ 2ನೇ ಮಗನ ಸಾವಿನ ಸುದ್ದಿಯನ್ನು ಮುಚ್ಚಿಟ್ಟಿದ್ದರು. ಬಡತನದಲ್ಲಿ ಕ್ರಿಕೆಟ್ ಆಟವನ್ನು ಒಲಿಸಿಕೊಂಡಿದ್ದ ಈತನನ್ನು ದೊಡ್ಡ ಮಟ್ಟದಲ್ಲಿ ನೋಡುವ ಅವರ ಕನಸು ಮನೆಯಲ್ಲಿ ಇಂತಹ ದುರಂತವನ್ನು ಮುಚ್ಚಿಡುವ ಮಟ್ಟಿಗೆ ಅವರನ್ನು ಕಲ್ಲು ಹೃದಯವಂತರನ್ನಾಗಿಸಿತ್ತು.
ಆದರೆ, ತಮ್ಮನ ಜೊತೆ ತುಂಬಾ ಅನ್ಯೋನ್ಯವಾಗಿದ್ದ ಸಕಾರಿಯಾ ಈ ಘಟನೆ ತಿಳಿದು ಆಘಾತಕ್ಕೊಳಗಾದರು. ಒಂದು ವಾರ ಊಟ ತ್ಯಜಿಸಿ, ಯಾರೊಂದಿಗೂ ಮಾತನಾಡದೇ ಒಂಟಿಯಾಗಿ ಕಾಲ ಕಳೆದಿದ್ದರೆಂದು ಅವರ ತಾಯಿ ಸಂದರ್ಶನವೊಂದರಲ್ಲಿ ಬಹಿರಂಗಪಡಿಸಿದ್ದರು. ಇನ್ನು ಮೊದಲ ಐಪಿಎಲ್ನಲ್ಲಿ ಆಡಿದ ಖುಷಿಯಲ್ಲಿದ್ದ ಯುವ ಆಟಗಾರನಿಗೆ ತಮ್ಮನ ಸಾವು ಮರೆತು ಕುಟುಂಬದೊಡನೆ ಸಂತೋಷದಲ್ಲಿ ಇರಬೇಕೆನ್ನುವಷ್ಟರಲ್ಲೇ ತಂದೆ ಕೊರೊನಾಗೆ ಬಲಿಯಾದರು.
ಒಂದೇ ವರ್ಷದಲ್ಲಿ ಒಂದು ಸಂಕಷ್ಟದ ಸರಮಾಲೆ ಮತ್ತೊಂದು ಕಡೆ ಕ್ರಿಕೆಟ್ ಜೀವನದಲ್ಲಿ ಯಶಸ್ಸು ಪಡೆದ ಸಕಾರಿಯಾ ಜುಲೈನಲ್ಲಿ ಶ್ರೀಲಂಕಾ ಪ್ರವಾಸ ಕೈಗೊಂಡಿದ್ದ ಶಿಖರ್ ಧವನ್ ನೇತೃತ್ವದ ಭಾರತ ತಂಡದ ಭಾಗವಾದರು, ಇದೀಗ ತಮ್ಮ 2ನೇ ಆವೃತ್ತಿಯಲ್ಲೇ 4.2 ಕೋಟಿ ರೂಗಳಿಗೆ ಮಾರಾಟವಾಗಿದ್ದಾರೆ. ತಮ್ಮ ನೋವು ಕ್ರಿಕೆಟ್ ಆಡದ ಮೂಲಕ ಮರೆಯುತ್ತಿರುವ ಯುವ ಆಟಗಾರ ಈ ಬಾರಿ ದುಬಾರಿ ಮೊತ್ತ ಪಡೆದಿದ್ದು, ಡೆಲ್ಲಿ ತಂಡದಲ್ಲಿ ಉತ್ತಮ ಪ್ರದರ್ಶನ ತೋರಿ ಭಾರತ ತಂಡದಲ್ಲಿ ಅವಕಾಶ ಪಡೆಯಲಿ ಎಂಬುವುದು ಕ್ರೀಡಾಭಿಮಾನಿಗಳ ಆಶಯವಾಗಿದೆ.
ಇದನ್ನೂ ಓದಿ:ಐಪಿಎಲ್ನ 10 ತಂಡಗಳಿಗೆ ಖರ್ಚಾದ 553 ಕೋಟಿ ರೂ.ಗಳಲ್ಲಿ 16 ಕನ್ನಡಿಗರಿಗೆ ಸಿಕ್ತು 66.6 ಕೋಟಿ ರೂ!