ಟೀಂ ಇಂಡಿಯಾದ ದಾಂಡಿಗ ಸೂರ್ಯಕುಮಾರ್ ಯಾದವ್ ಅವರನ್ನು ಗ್ಲೆನ್ ಮ್ಯಾಕ್ಸ್‌ವೆಲ್ ಮುಕ್ತಕಂಠದಿಂದ ಗುಣಗಾನ ಮಾಡಿದ್ದಾರೆ. ಅವರ ಹೊಡಿಬಡಿ ಆಟಕ್ಕೆ ಪ್ರಶಂಸೆ ವ್ಯಕ್ತಪಡಿಸಿರುವ ಆಸ್ಟ್ರೇಲಿಯಾ ಆಟಗಾರ, ಬಿಗ್ ಬ್ಯಾಶ್‌ನಲ್ಲಿ (ಐಪಿಎಲ್ ಮಾದರಿ) ಆಡಲು ಅವರನ್ನು ಕರೆತರುವಷ್ಟು ಹಣ ನಮ್ಮಲ್ಲಿಲ್ಲ ಎಂದರು.
ಸೂರ್ಯಕುಮಾರ್ ಕಡಿಮೆ ಅವಧಿಯಲ್ಲಿ ತಮ್ಮ ಕೌಶಲ್ಯಭರಿತ ಆಟದಿಂದ ಅಪಾರ ಕ್ರೀಡಾಭಿಮಾನಿಗಳನ್ನು ಗಳಿಸಿಕೊಂಡಿದ್ದಾರೆ. ಅವರ ವಿಭಿನ್ನ ಶೈಲಿಯ ಆಟ ಎದುರಾಳಿ ಕ್ರಿಕೆಟಿಗರ ಎದೆಯಲ್ಲಿ ಭಯ ಹುಟ್ಟಿಸಿದೆ. ಕ್ರಿಕೆಟಿಗರು ಕೂಡ ಅವರ 360 ಡಿಗ್ರಿ ಬ್ಯಾಟಿಂಗ್ ನೋಡಿ ಅಚ್ಚರಿ ವ್ಯಕ್ತಪಡಿಸಿದ್ದಾರೆ ಎಂದು ಮ್ಯಾಕ್ಸ್‌ವೆಲ್ ಹೇಳಿದರು.
ಇಂತಹ ಓರ್ವ ಆಟಗಾರ ನಮ್ಮಲ್ಲಿಲ್ಲ ಅನ್ನೋದು ಬೇಸರ ತರಿಸುತ್ತಿದೆ. ಅವತ್ತು ಪಂದ್ಯ (ನ್ಯೂಜಿಲೆಂಡ್ ವಿರುದ್ಧ ಟಿ20 ಪಂದ್ಯ) ನಡೆಯುತ್ತಿರುವ ಬಗ್ಗೆ ನನಗೆ ತಿಳಿದಿರಲಿಲ್ಲ. ಆದರೆ, ನಂತರ ನಾನು ಸ್ಕೋರ್ ಕಾರ್ಡ್ ನೋಡಿದೆ. ಅದರ ಚಿತ್ರವನ್ನು ಆ್ಯರನ್ ಫಿಂಚ್‌ಗೆ ಕಳುಹಿಸಿದೆ. ಅಲ್ಲಿ ಏನು ನಡೆಯುತ್ತಿದೆ? ಆತ ಸಂಪೂರ್ಣವಾಗಿ ಬೇರೆ ಗ್ರಹದವರಂತೆ ಬ್ಯಾಟಿಂಗ್ ಮಾಡುತ್ತಿದ್ದಾರೆ ಎಂದುಕೊಂಡೆ.
ನಾನು ಮರುದಿನ ಆ ಪಂದ್ಯವನ್ನು ಮತ್ತೊಮ್ಮೆ ವೀಕ್ಷಿಸಿದೆ. ಅಲ್ಲಿ ಆಶ್ಚರ್ಯ ಕಾದಿತ್ತು. ಆತ ಎಲ್ಲರಿಗಿಂತ ಅತ್ಯುತ್ತಮವಾಗಿ ಬ್ಯಾಟಿಂಗ್ ಮಾಡಿದ್ದರು. ನನಗೆ ಗೊತ್ತಿರುವ ಯಾವೊಬ್ಬ ಆಟಗಾರನೂ ಕೂಡ ಆತನಂತೆ ಬ್ಯಾಟಿಂಗ್ ಮಾಡುವುದಿಲ್ಲ. ಅವರ ಆಟ ನೋಡುವುದು ಕಷ್ಟ. ನಮ್ಮಲ್ಲಿ ಅವರನ್ನು ಹೋಲುವ ಯಾವ ಆಟಗಾರನೂ ಇಲ್ಲ ಎಂದರು.
ಅವರನ್ನು ಬಿಗ್ ಬ್ಯಾಶ್ಗೆ ಕರೆತರುವ ಬಗ್ಗೆ ತಮಾಷೆಯಾಗಿ ಪ್ರತಿಕ್ರಿಯಿಸಿದ ಮ್ಯಾಕ್ಸ್‌ವೆಲ್, ಸದ್ಯ ಆತ ತುಂಬಾ ದುಬಾರಿ ಆಟಗಾರ. ಅಂತಹ ಯಾವ ಅವಕಾಶವೂ ನಮ್ಮಲ್ಲಿಲ್ಲ. ನಮ್ಮಲ್ಲಿ ಆತನಿಗೆ ನೀಡುವಷ್ಟು ಹಣವೂ ಇಲ್ಲ. ಹಲವು ಆಟಗಾರನನ್ನು ವಜಾಗೊಳಿಸಿದರೆ ಬಹುಶಃ ಸೂರ್ಯಕುಮಾರ್ ಯಾದವ್‌ಗೆ ನೀಡುವಷ್ಟು ಹಣ ಸಿಗಬಹುದು ಎಂದು ನಕ್ಕರು.
ಇದನ್ನೂ ಓದಿ: ಬೆಲ್ಜಿಯಂಗೆ ಮಣಿದ ಕೆನಡಾ; ಕೋಸ್ಟರಿಕಾ ವಿರುದ್ಧ ಸ್ಪೇನ್‌ಗೆ ಪ್ರಚಂಡ ಗೆಲುವು!