2023ರ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಭಾರತದ ಯುವ ಆಟಗಾರರು ಮಿಂಚಿದರು. ಅದರಲ್ಲೂ ಭಾರತ ತಂಡವನ್ನು ಪ್ರತಿನಿಧಿಸದ ಆಟಗಾರರು ಸಹ ಉತ್ತಮ ಪ್ರದರ್ಶನ ನೀಡಿದ್ದರು. ಐಪಿಎಲ್ ಬೆನ್ನಲ್ಲೇ ನಡೆಯುತ್ತಿರುವ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನಲ್ಲಿ ಐಪಿಎಲ್ನ ಆಧಾರದಲ್ಲಿ ಯಶಸ್ವಿ ಜೈಸ್ವಾಲ್ ಸ್ಥಾವನ್ನು ಪಡೆದುಕೊಂಡಿದ್ದಾರೆ. ಅದೇ ರೀತಿ ಭಾರತ ತಂಡಕ್ಕೆ ಈಗಾಗಲೇ ಪಾದಾರ್ಪಣೆ ಮಾಡಿರುವ 23ರ ಹರೆಯದ ಯುವ ಬ್ಯಾಟರ್ ಗಿಲ್ ಕೂಡ ಈ ವರ್ಷ ಗೋಲ್ಡನ್ ಫಾರ್ಮ್ನಲ್ಲಿದ್ದು, ಆರಂಭಿಕ ಸ್ಥಾನದಲ್ಲಿ ಫಿಕ್ಸ್ ಆಗಿದ್ದಾರೆ.
ಶುಭಮನ್ ಗಿಲ್ ಅವರ ಐಪಿಎಲ್ ಬ್ಯಾಟಿಂಗ್ ಬಗ್ಗೆ ಕ್ರಿಕೆಟ್ ವಲಯದಲ್ಲಿ ಉತ್ತಮ ಪ್ರತಿಕ್ರಿಯೆ ಮತ್ತು ಚರ್ಚೆಗಳು ನಡೆಯುತ್ತಿವೆ. ಅಲ್ಲದೇ ಅವರನ್ನು ಹಿಂದಿನ ಖ್ಯಾತ ಆಟಗಾರರಿಗೆ ಹೋಲಿಕೆ ಮಾಡಲಾಗುತ್ತಿದೆ. ಈ ಆವೃತ್ತಿಯಲ್ಲಿ ಗಿಲ್ ಕೊನೆ ಐದು ಪಂದ್ಯದಲ್ಲಿ ಮೂರು ಶತಕ ಗಳಿಸಿದ್ದು, ಹೆಚ್ಚು ಚರ್ಚೆಗೆ ಕಾರಣವಾಯಿತು. ಮೂರನೇ ಶತಕದ ನಂತರ ಗಿಲ್ ಅವರ ಸಂದರ್ಶನ ಮಾಡಿದ ಹಾರ್ದಿಕ್ ಪಾಂಡ್ಯ ಟಿ20 ಈತನಿಗೆ ಶತಕಗಳು ಮುಂಜಾನೆಯ ಉಪಹಾರ ಇದ್ದಂತೆ. ಅಷ್ಟು ಸರಳವಾಗಿ ಮುಗಿಸುತ್ತಾನೆ ಎಂದಿದ್ದರು.
ಗಿಲ್ ಲೀಗ್ನಲ್ಲಿ ಉತ್ತಮ ಲಯದಲ್ಲೇ ಕಂಡುಬಂದರು. ಐಪಿಎಲ್ಗೂ ಮುನ್ನ ಭಾರತಕ್ಕಾಗಿ ಆಡಿದ್ದಾಗಲೂ ದಿಶ್ವತಕ ಮತ್ತು ಶತಕ ಗಳಿಸಿದ್ದರು. ಐಪಿಎಲ್ನಲ್ಲಿ 59.33ರ ಸರಾಸರಿಯಲ್ಲಿ ಬ್ಯಾಟ್ ಬೀಸಿದ್ದ ಅವರು, 17 ಪಂದ್ಯದಲ್ಲಿ 4 ಅರ್ಧಶತಕ ಹಾಗೂ 3 ಶತಕದಿಂದ 890 ರನ್ ಗಳಿಸಿದ್ದಾರೆ. ಒಂದು ಆವೃತ್ತಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರರ ಪಟ್ಟಿಯಲ್ಲಿ ಎರಡನೇ ಸ್ಥಾನವನ್ನು ಗಿಲ್ ಗಳಿಸಿದ್ದಾರೆ. 973 ರನ್ನಿಂದ ವಿರಾಟ್ ಕೊಹ್ಲಿ ಮೊದಲ ಸ್ಥಾನದಲ್ಲಿದ್ದಾರೆ.
ಐಪಿಎಲ್ನಲ್ಲಿ ಗಿಲ್ ಬ್ಯಾಟ್ ಘರ್ಜಿಸಿದ ನಂತರ ಅವರನ್ನು ಶ್ರೇಷ್ಠ ಬ್ಯಾಟ್ಸ್‌ಮನ್‌ಗಳಾದ ಸಚಿನ್ ತೆಂಡೂಲ್ಕರ್ ಮತ್ತು ವಿರಾಟ್ ಕೊಹ್ಲಿ ಅವರೊಂದಿಗೆ ಹೋಲಿಸಲಾಗುತ್ತಿದೆ. ಆದರೆ ಈ ಬಗ್ಗೆ ಮಾತನಾಡಿದ ಭಾರತದ ಮಾಜಿ ಕೋಚ್ ಈಗಲೇ ಹೋಲಿಕೆ ಮಾಡುವುದು ಸರಿಯಲ್ಲ ಎಂದಿದ್ದಾರೆ.
ಗ್ಯಾರಿ ಕರ್ಸ್ಟನ್ ಅವರು, ವಿಶ್ವದ ಅತ್ಯುತ್ತಮ ಆಟಗಾರರಲ್ಲಿ ಒಬ್ಬರಾಗಲು ನಂಬಲಾಗದ ಕೌಶಲ್ಯ ಮತ್ತು ನಿರ್ಣಯವನ್ನು ಹೊಂದಿರುವ ಯುವ ಆಟಗಾರ ಶಭಮನ್ ಗಿಲ್. ಆದರೆ ಇಷ್ಟು ಬೇಗ ಅವರನ್ನು ಸಚಿನ್ ಮತ್ತು ವಿರಾಟ್ ಜೊತೆ ಹೋಲಿಸುವುದು ಸರಿಯಲ್ಲ ಎಂದು ವರದಿಯೊಂದನ್ನು ಉಲ್ಲೇಖಿಸಿ ಹೇಳಿದ್ದಾರೆ. ಭಾರತಕ್ಕಾಗಿ ಎಲ್ಲಾ ಮೂರು ಸ್ವರೂಪಗಳಲ್ಲಿ ಯಶಸ್ವಿಯಾಗಿ ಆಡುವ ಕೌಶಲ್ಯ ಅವರಲ್ಲಿದೆ ಎಂದು ನಾನು ನಂಬುತ್ತೇನೆ. ವಿಶೇಷವಾಗಿ ಟಿ20 ಕ್ರಿಕೆಟ್ ಅಭಿವೃದ್ಧಿ ಹೊಂದುತ್ತಿರುವಾಗ ಹೆಚ್ಚು ಅದರ ಕಡೆ ಗಮನ ಹರಿಸಿ ಎಲ್ಲರೂ ಮಾತನಾಡುತ್ತಿದ್ದಾರೆ. ಆದರೆ ಮೂರು ವಿಭಾಗದ ದೀರ್ಘ ಯಶಸ್ಸು ಕಂಡರೆ ಮಾತ್ರ ಆ ಇಬ್ಬರಿಗೆ ಹೋಲಿಕೆ ಮಾಡಲು ಸಾಧ್ಯ ಎಂದಿದ್ದಾರೆ.
ಜೂನ್ 7 ರಿಂದ 11ರ ವರೆಗೆ ಇಂಗ್ಲೆಂಡ್ನ ಓವಲ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧದ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನಲ್ಲಿ ಭಾರತ ತಂಡದ ನಾಯಕ ರೋಹಿತ್ ಶರ್ಮಾ ಅವರೊಂದಿಗೆ ಗಿಲ್ ಓಪನಿಂಗ್ ಮಾಡಲು ಸಿದ್ಧರಾಗಿದ್ದಾರೆ.
ಇದನ್ನೂ ಓದಿ: ಬದ್ಧವೈರಿಗಳಾದ ಭಾರತ- ಪಾಕ್ 'ವಿಶ್ವಕಪ್ ಕಾದಾಟ'ಕ್ಕೆ ಲಖನೌ ಮೈದಾನ ಆತಿಥ್ಯ?