ನವದೆಹಲಿ : ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ ಬುಧವಾರ ವೆಸ್ಟ್ ಇಂಡೀಸ್ ತಂಡದ ಮಾಜಿ ಆಲ್ರೌಂಡರ್ ಮಾರ್ಲೋನ್ ಸ್ಯಾಮ್ಯುಯೆಲ್ಸ್ ವಿರುದ್ಧ ಭ್ರಷ್ಟಾಚಾರ ವಿರೋಧಿ ಸಂಹಿತೆ ಉಲ್ಲಂಘನೆ ಆರೋಪ ಮಾಡಿದೆ.
ಯುಎಇಯ ಟಿ10 ಲೀಗ್ನಲ್ಲಿ ಸ್ಯಾಮ್ಯುಯೆಲ್ಸ್ ಭ್ರಷ್ಟಾಚಾರ ವಿರೋಧಿ ನೀತಿಯ 4 ನಿಯಮಗಳನ್ನು ಉಲ್ಲಂಘಿಸಿದ್ದಾರೆ ಎಂದು ವಿಶ್ವ ಕ್ರಿಕೆಟ್ ಮಂಡಳಿ ಆರೋಪ ಮಾಡಿದೆ. ವೆಸ್ಟ್ ಇಂಡೀಸ್ ಆಟಗಾರ ಲೀಗ್ನಲ್ಲಿ ಭಾಗವಹಿಸುವುದಕ್ಕೆ ತಾವು ಸ್ವೀಕರಿಸಿರುವ ಉಡುಗೊರೆ, ನಗದು, ಆತಿಥ್ಯ ಅಥವಾ ಅಲ್ಲಿ ನೀಡಲಾದ ಪ್ರಯೋಜನದ ವಿವರಗಳನ್ನು ಐಸಿಸಿ ಅಧಿಕಾರಿಗಳ ಮುಂದೆ ಬಹಿರಂಗ ಪಡಿಸುವಲ್ಲಿ ವಿಫಲರಾಗಿ ಭ್ರಷ್ಟಾಚಾರ ವಿರೋಧಿ ನೀತಿಯ 2.4.2 ಆರ್ಟಿಕಲ್ ಅನ್ನು ಉಲ್ಲಂಘನೆ ಮಾಡಿದ್ದಾರೆ.
ಇದರ ಜೊತೆಗೆ ಆರ್ಟಿಕಲ್ 2.4.3(750 ಡಾಲರ್ಗಿಂತ ಹೆಚ್ಚು ಮೌಲ್ಯದ ಆತಿಥ್ಯ ಸ್ವೀಕರಿಸಿದ ರಶೀತಿಯನ್ನು ಬಹಿರಂಗ ಪಡಿಸಲು ವಿಫಲ), ಆರ್ಟಿಕಲ್ 2.4.6 (ತನಿಖೆ ವೇಳೆ ಅಧಿಕಾರಿಗಳೊಂದಿಗೆ ಅಸಹಕಾರ) ಮತ್ತು ಆರ್ಟಿಕಲ್ 2.4.7( ತನಿಖೆಗೆ ವಿಳಂಬ ಮತ್ತು ತನಿಖೆಗೆ ಅಗತ್ಯ ಮಾಹಿತಿ ಒದಗಿಸಲು ವಿಫಲ) ಉಲ್ಲಂಘನೆ ಮಾಡಿದ್ದಾರೆಂದು ಐಸಿಸಿ ಚಾರ್ಜ್ಶೀಟ್ನಲ್ಲಿ ಉಲ್ಲೇಖಿಸಲಾಗಿದೆ. ಈ ಆರೋಪಗಳಿಗೆ ಉತ್ತರಿಸಲು ಐಸಿಸಿ ಸ್ಯಾಮ್ಯುಯೆಲ್ಸ್ಗೆ 14 ದಿನಗಳ ಗಡುವನ್ನು ನೀಡಿದೆ. ಒಂದು ವೇಳೆ ಉತ್ತರಿಸದಿದ್ದರೆ ನಿಷೇಧದ ಶಿಕ್ಷೆಗೆ ಗುರಿಯಾಗುವ ಸಾಧ್ಯತೆಯಿದೆ.
ಸ್ಯಾಮ್ಯುಯೆಲ್ಸ್ ವೆಸ್ಟ್ ಇಂಡೀಸ್ ಪರ 2000 ರಿಂದ 2018ರವರೆಗೆ 71 ಟೆಸ್ಟ್, 207 ಏಕದಿನ ಪಂದ್ಯ ಮತ್ತು 67 ಟಿ20 ಪಂದ್ಯಗಳನ್ನಾಡಿದ್ದಾರೆ. 11,134 ರನ್ ಮತ್ತು 152 ವಿಕೆಟ್ ಪಡೆದಿದ್ದಾರೆ. ಅವರು 2012 ಮತ್ತು 2016ರ ಟಿ20 ವಿಶ್ವಕಪ್ ಫೈನಲ್ಗಳಲ್ಲಿ ಕ್ರಮವಾಗಿ 78 ಮತ್ತು 85 ರನ್ಗಳಿಸಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದಿದ್ದರು.
ಇದನ್ನೂ ಓದಿ:ಪಾಕ್ ಸರಣಿ ರದ್ದು ಮಾಡಿಕೊಂಡ ನ್ಯೂಜಿಲ್ಯಾಂಡ್: ಭಾರತದ ಮೇಲೆ ಗೂಬೆ ಕೂರಿಸಿದ ಪಾಕಿಸ್ತಾನ