ಲಾಹೋರ್(ಪಾಕಿಸ್ತಾನ): ಕಳಪೆ ಬ್ಯಾಟಿಂಗ್ ಪ್ರದರ್ಶನ ಮುಂದುವರೆಸಿರುವ ವಿರಾಟ್ ಕೊಹ್ಲಿ ಬಗ್ಗೆ ಅನೇಕರು ಟೀಕೆ ವ್ಯಕ್ತಪಡಿಸಿದರೆ, ಇನ್ನೂ ಹಲವರು ಅವರ ಬೆಂಬಲಕ್ಕೆ ನಿಂತಿದ್ದಾರೆ. ಇದರ ಮಧ್ಯೆ ಪಾಕಿಸ್ತಾನದ ಮಾಜಿ ಕ್ಯಾಪ್ಟನ್ ರಶೀದ್ ಲತೀಫ್ ಕೂಡ ಮಾತನಾಡಿದ್ದು, 'ಟೀಂ ಇಂಡಿಯಾದಿಂದ ವಿರಾಟ್ ಕೊಹ್ಲಿ ಅವರನ್ನ ಕೈಬಿಡುವ ಯಾವುದೇ ಸೆಲೆಕ್ಟರ್ ಭಾರತದಲ್ಲಿ ಹುಟ್ಟಿಲ್ಲ' ಎಂದಿದ್ದಾರೆ.
ಯೂಟ್ಯೂಬ್ ಚಾನಲ್ವೊಂದರಲ್ಲಿ ಭಾಗಿಯಾಗಿ ಮಾತನಾಡಿರುವ ರಶೀದ್ ಲತೀಫ್, ಪ್ರತಿಯೊಂದು ಪಂದ್ಯದಲ್ಲೂ ವಿರಾಟ್ ಕೊಹ್ಲಿ ವೈಫಲ್ಯ ಅನುಭವಿಸುತ್ತಿದ್ದಾರೆ. ತಂಡದಿಂದ ಅವರನ್ನ ಕೈಬಿಡುವ ಬಗ್ಗೆ ಬಿಸಿಬಿಸಿಯಾಗಿ ಚರ್ಚೆ ನಡೆಯುತ್ತಿದೆ. ಕಳಪೆ ಫಾರ್ಮ್ ನಡುವೆ ಸಹ ಕೊಹ್ಲಿಯನ್ನ ಕೈಬಿಡುವ ಬಗ್ಗೆ ಯಾವುದೇ ಆಯ್ಕೆಗಾರರು ಮುಂದಾಗುತ್ತಿಲ್ಲ ಎಂದು ಅವರು ಪ್ರಶ್ನೆ ಮಾಡಿದ್ದಾರೆ.
ಲಂಡನ್ನ ಲಾರ್ಡ್ಸ್ ಮೈದಾನದಲ್ಲಿ ನಡೆದ ಎರಡನೇ ಏಕದಿನ ಪಂದ್ಯದಲ್ಲೂ ವಿರಾಟ್ ಬ್ಯಾಟಿಂಗ್ ವೈಫಲ್ಯ ಅನುಭವಿಸಿದರು. ತಾವು ಎದುರಿಸಿದ 25 ಎಸೆತಗಳಲ್ಲಿ 16ರನ್ ಗಳಿಕೆ ಮಾಡಿದರು. ಇದರ ಬೆನ್ನಲ್ಲೇ ಜೋಸ್ ಬಟ್ಲರ್, ಪಾಕ್ ಕ್ಯಾಪ್ಟನ್ ಬಾಬರ್ ಆಜಂ, ವಿರಾಟ್ ಕೊಹ್ಲಿ ಸೇರಿದಂತೆ ಅನೇಕರು ಅವರ ಬೆಂಬಲಕ್ಕೆ ನಿಂತಿದ್ದಾರೆ. ಇಂದು ಬೆಳಗ್ಗೆ ಟ್ವೀಟ್ ಮಾಡಿದ್ದ ಪಾಕಿಸ್ತಾನದ ಕ್ಯಾಪ್ಟನ್ ಬಾಬರ್ ಆಜಮ್, ‘ದೃಢವಾಗಿರಿ, ಈ ಸಮಯ ಕಳೆದು ಹೋಗುತ್ತದೆ’ ಎಂದು ಟ್ವೀಟ್‌ನಲ್ಲಿ ಬರೆದಿದ್ದಾರೆ. ಅಷ್ಟೇ ಅಲ್ಲ, ಇದರ ಜೊತೆ ಫೋಟೋ ಪೋಸ್ಟ್ ಮಾಡಿದ್ದಾರೆ.
ಇದನ್ನೂ ಓದಿರಿ: ‘ದೃಢವಾಗಿರಿ, ಈ ಸಮಯ ಕಳೆದುಹೋಗುತ್ತದೆ’: ಕೊಹ್ಲಿಗೆ ಧೈರ್ಯ ತುಂಬಿದ ಪಾಕ್ ಕ್ರಿಕೆಟಿಗ
ಜುಲೈ 29ರಿಂದ ವೆಸ್ಟ್ ಇಂಡೀಸ್ ವಿರುದ್ಧ ಆರಂಭಗೊಳ್ಳಲಿರುವ ಐದು ಟಿ-20 ಹಾಗೂ ಮೂರು ಏಕದಿನ ಪಂದ್ಯಗಳ ಸರಣಿಯಿಂದಲೂ ವಿರಾಟ್ ಕೊಹ್ಲಿ ವಿಶ್ರಾಂತಿ ಪಡೆದುಕೊಂಡಿದ್ದಾರೆ. ಇದೇ ವರ್ಷದ ಅಂತ್ಯದಲ್ಲಿ ಭಾರತ ಟಿ-20 ವಿಶ್ವಕಪ್ನಲ್ಲಿ ಭಾಗಿಯಾಗಲಿದ್ದು, ವಿರಾಟ್ ಕೊಹ್ಲಿ ಆಯ್ಕೆಯಾಗುವುದರ ಬಗ್ಗೆ ಅನೇಕ ಗೊಂದಲಗಳಿವೆ.