ನವದೆಹಲಿ: ರಷ್ಯಾದ ಟೆನಿಸ್ ಸ್ಟಾರ್ ಮರಿಯಾ ಶರಪೋವಾ ಮತ್ತು ಮಾಜಿ ಫಾರ್ಮುಲಾ ಒನ್ ರೇಸರ್ ಮೈಕೆಲ್ ಶುಮಾಕರ್ ಮತ್ತು 11 ಮಂದಿ ವಿರುದ್ಧ ಬುಧವಾರ ಗುರುಗ್ರಾಮದಲ್ಲಿ ವಂಚನೆ ಪ್ರಕರಣದಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ.
ದೆಹಲಿಯ ಚತ್ತಾಪುರ್ ಮಿನಿ ಫಾರ್ಮ್ ನಿವಾಸಿ ಶಫಾಲಿ ಅಗರ್ವಾಲ್ ಎಂಬ ಮಹಿಳೆ ನೀಡಿದ ದೂರಿನ ಮೇರೆಗೆ ವಂಚನೆ ಮತ್ತು ಅಪರಾಧ ಆರೋಪದ ಮೇಲೆ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಶರಪೋವಾ ಮತ್ತು ಶುಮೇಕರ್ ಅವರು ಪ್ರಚಾರಕರಾಗಿದ್ದ ಪ್ರಾಜೆಕ್ಟ್ನಲ್ಲಿ ರೆಸಿಡೆನ್ಸಿಯಲ್ ಅಪಾರ್ಟ್ಮೆಂಟ್ ಬುಕ್ ಮಾಡಿದ್ದೆವು. ಆ ಪ್ರಾಜೆಕ್ಟ್ 2016ರ ವೇಳೆಗೆ ಪೂರ್ಣಗೊಳ್ಳಬೇಕಾಗಿತ್ತು. ಆದರೆ ಅದು ಇನ್ನೂ ಪ್ರಾರಂಭವಾಗಿಲ್ಲ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಜಾಹೀರಾತಿನ ಮೂಲಕ ಯೋಜನೆಯ ಬಗ್ಗೆ ತಿಳಿದುಕೊಂಡು ಪ್ರಾಜೆಕ್ಟ್ನ ಫೋಟೋಗಳು ಮತ್ತು ಸಾಕಷ್ಟು ಭರವಸೆಗಳನ್ನು ನಂಬಿ ನಾವು ಅಲ್ಲಿಗೆ ಹೋಗಿದ್ದೆವು, ಆದರೆ ಅವರು ನಮಗೆ ಮೋಸ ಮಾಡಿದ್ದಾರೆ. ಶರಪೋವಾ ಮತ್ತು ಶುಮೇಕರ್ ಇಬ್ಬರು ಪ್ರಾಜೆಕ್ಟ್ನ ಪ್ರಚಾರಕರಾಗಿದ್ದರು. ಅಲ್ಲದೆ ಶರಪೋವಾ ಅಪಾರ್ಟಮೆಂಟ್ನಲ್ಲಿ ಟೆನಿಸ್ ಅಕಾಡೆಮಿ ಮತ್ತು ಸ್ಪೋರ್ಟ್ಸ್ ಸ್ಟೋರ್ ಆರಂಭಿಸುವುದಾಗಿಯೂ ಭರವಸೆ ನೀಡಿದ್ದರು. ಇವರಿಬ್ಬರು ಗ್ರಾಹಕರಿಗೆ ಜೊತೆಗೆ ಔತಣಕೂಟವನ್ನು ಏರ್ಪಡಿಸಿ ಹಲವಾರು ಭರವಸೆಗಳನ್ನು ನೀಡಿದ್ದರು. ಆದರೆ ಪ್ರಾಜೆಕ್ಟ್ ಪ್ರಾರಂಭಿಸದೇ ನಮಗೆ ವಂಚಿಸಿದ್ದಾರೆ ಎಂದು ದೂರಿನಲ್ಲಿ ಶಫಾಲಿ ತಿಳಿಸಿದ್ದಾರೆ.
ಈ ಕುರಿತು ಕಂಪನಿಯ ಪ್ರತಿನಿಧಿಗಳನ್ನು ಹಲವು ಬಾರಿ ಸಂಪರ್ಕಿಸಿದರೂ ಸಮರ್ಪಕ ಉತ್ತರ ದೊರೆಯಲಿಲ್ಲ. ನಂತರ ರಾಷ್ಟ್ರೀಯ ಗ್ರಾಹಕ ಆಯೋಗಕ್ಕೆ ದೂರು ನೀಡಿದೆವೂ, ಅದೂ ಪ್ರಯೋಜನವಾಗಿಲ್ಲ. ಈ ಹಿನ್ನೆಲೆಯಲ್ಲಿ ನ್ಯಾಯಾಲಯದ ಮೊರೆ ಹೋಗಿದ್ದು, ಅವರ ವಿರುದ್ಧ ವಂಚನೆ ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ:'ಆಮ್ ಆದ್ಮಿ'ಯಾಗಿ ರಾಜ್ಯಸಭೆ ಪ್ರವೇಶಿಸಲಿದ್ದಾರೆ ಮಾಜಿ ಕ್ರಿಕೆಟಿಗ ಹರ್ಭಜನ್ ಸಿಂಗ್