ಹೈದರಾಬಾದ್: ವಿಶ್ವಕಪ್ಗೆ ಇನ್ನು ಒಂದೂವರೆ ತಿಂಗಳಿದೆ. ಈ ನಡುವೆ ಭಾರತ ತನ್ನ ತಂಡವನ್ನು ಸಿದ್ಧಗೊಳಿಸಬೇಕಿದೆ. ಮುಂದಿನ ತಿಂಗಳ 5ರೊಳಗೆ ತಾತ್ಕಾಲಿಕ ತಂಡವನ್ನು ಪ್ರಕಟಿಸಬೇಕು. ಕೆ.ಎಲ್. ರಾಹುಲ್ ಮತ್ತು ಶ್ರೇಯಸ್ ಅಯ್ಯರ್ ಗಾಯದಿಂದ ಗುಣಮುಖರಾಗಿದ್ದು ತಂಡಕ್ಕಾಗಿ ಆಡಲು ಎದುರು ನೋಡುತ್ತಿದ್ದಾರೆ. ಆದರೆ ವಿಶ್ವಕಪ್ಗೂ ಮುನ್ನ ಏಷ್ಯಾಕಪ್ ಒಂದೇ ಇಬ್ಬರಿಗೂ ಅವಕಾಶದ ಬಾಗಿಲಾಗಿದೆ.
ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಆಕಾಡೆಮಿಯಲ್ಲಿ (ಎನ್‌ಸಿಎ) ಇಬ್ಬರು ಬ್ಯಾಟರ್ಗಳು ಅಭ್ಯಾಸದಲ್ಲಿ ತೊಡಗಿದ್ದು ಕಮ್ಬ್ಯಾಕ್ಗಾಗಿ ಶತಾಯಗತಾಯ ಪ್ರಯತ್ನದಲ್ಲಿದ್ದಾರೆ. ಐರ್ಲೆಂಡ್ ಪ್ರವಾಸದ ನಾಯತ್ವದಲ್ಲಿರುವ ಬುಮ್ರಾ ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆಯುವುದು ಬಹುತೇಕ ಖಚಿತ ಎಂದೇ ಹೇಳಬಹುದು. ಆದರೆ ಅವರು ಮತ್ತೆ ಗಾಯಕ್ಕೆ ತುತ್ತಾಗಬಾರದು. ಸಪ್ಟೆಂಬರ್ 28ರೊಳಗೆ ವಿಶ್ವಕಪ್ನ ತಂಡ ಪ್ರಕಟಿಸಬೇಕಿದ್ದು ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿ ಆಡಿದ ಆಟಗಾರರನ್ನು ಪರಿಗಣನೆಗೆ ತೆಗೆದುಕೊಳ್ಳುವುದು ಕಷ್ಟವಾಗಲಿದೆ.
ವೆಸ್ಟ್ ಇಂಡೀಸ್ ಟಿ20 ಸರಣಿ ಸೋಲಿನ ನಂತರ ಮಾತನಾಡಿದ ಕೋಚ್ ರಾಹುಲ್ ದ್ರಾವಿಡ್, "ನಮ್ಮಲ್ಲಿ ಯಾವುದೇ ಸಂದರ್ಭದಲ್ಲಿ ಗಾಯದಿಂದ ಹಿಂತಿರುಗುವ ಕೆಲವು ಹುಡುಗರಿದ್ದಾರೆ. ನಾವು ಅವರಿಗೆ ಏಷ್ಯಾ ಕಪ್‌ನಲ್ಲಿ ಆಡಲು ಅವಕಾಶ ನೀಡಬೇಕು. ನಾವು ಏಷ್ಯಾ ಕಪ್‌ಗಾಗಿ ಆಗಸ್ಟ್ 23ರಿಂದ ಬೆಂಗಳೂರಿನಲ್ಲಿ ಒಂದು ವಾರ ಶಿಬಿರ ಮಾಡಲಿದ್ದೇವೆ. ಈ ಆಧಾರದಲ್ಲಿ ಆಯ್ಕೆ ನಡೆಯಲಿದೆ" ಎಂದರು
ದ್ರಾವಿಡ್ ಅವರ ಈ ಮಾತು ಏಷ್ಯಾಕಪ್ನಲ್ಲಿ ರಾಹುಲ್ ಹಾಗೂ ಶ್ರೇಯಸ್ ಅಯ್ಯರ್ ಅವರ ಕಮ್ಬ್ಯಾಕ್ ಸೂಚನೆ ನೀಡಿದೆ. ಬುಮ್ರಾ ಈಗಾಗಲೇ ಐರ್ಲೆಂಡ್ ಪ್ರವಾಸದ ಮೂಲಕ ಟೀಂ ಇಂಡಿಯಾಕ್ಕೆ ಮರಳಿದ್ದಾರೆ. ಮಧ್ಯಮ ಕ್ರಮಾಂಕದ ಬ್ಯಾಟರ್ನ ಕೊರತೆ ನೀಗಿಸಲು ಇಬ್ಬರ ಮೇಲೂ ಭರವಸೆ ಹೆಚ್ಚಿದೆ.
ತಿಲಕ್ ವರ್ಮಾ ಅಚ್ಚರಿ ಆಯ್ಕೆ?: ವೆಸ್ಟ್ ಇಂಡೀಸ್ ವಿರುದ್ಧ ಟಿ20ಗೆ ಪಾದಾರ್ಪಣೆ ಮಾಡಿ ಮಧ್ಯಮ ಕ್ರಮಾಂಕದಲ್ಲಿ ಉತ್ತಮವಾಗಿ ಬ್ಯಾಟ್ ಬೀಸಿದ ತಿಲಕ್ ವರ್ಮಾ ವಿಶ್ವಕಪ್ನ ಅಚ್ಚರಿಯ ಆಯ್ಕೆ ಆಗಬಹುದು ಎಂದು ಕ್ರಿಕೆಟ್ ವಲಯದಲ್ಲಿ ಚರ್ಚೆ ಆಗುತ್ತಿದೆ. ಇದಕ್ಕೆ ಅವರ ಬ್ಯಾಟಿಂಗ್ನ ಶೈಲಿ ಮತ್ತು ಲಯ ಕಾರಣವಾಗಿದೆ. ವಿಂಡೀಸ್ ವಿರುದ್ಧದ ಐದು ಇನ್ನಿಂಗ್ಸ್ನಲ್ಲಿ 173 ರನ್ ಗಳಿಸಿದ್ದಾರೆ. ಇದರಲ್ಲಿ ಒಂದು ಅರ್ಧಶತಕವೂ ಇದೆ. 57.67 ರ ಸರಾಸರಿಯಲ್ಲಿ ರನ್ ಕಲೆಹಾಕಿದ್ದು, ಸ್ಟ್ರೈಕ್ರೇಟ್ 140.65 ಇದೆ. 51 ಬೆಸ್ಟ್ ಸ್ಕೋರ್ ಆಗಿದೆ.
ಅಭ್ಯಾಸದಲ್ಲಿ ಅಯ್ಯರ್, ರಾಹುಲ್ : ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ಶ್ರೇಯಸ್ ಅಯ್ಯರ್ ಮತ್ತು ರಾಹುಲ್ ಅಭ್ಯಾಸ ಪಂದ್ಯ ಆಡುತ್ತಿದ್ದಾರೆ. ರಿಷಬ್ ಪಂತ್ ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಈ ಇಬ್ಬರು ಆಡುತ್ತಿರುವ ಮಾಹಿತಿ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ: India vs Ireland: ಐರ್ಲೆಂಡ್ ಪ್ರವಾಸ: 'ಯಂಗ್ ಇಂಡಿಯಾ'ಗೆ ಬುಮ್ರಾ ಕ್ಯಾಪ್ಟನ್