ನವದೆಹಲಿ: ಹೊಸ ತಂಡಗಳ ನಾಯಕತ್ವದ ಮೇಲೆ ಕಣ್ಣಿಟ್ಟಿರುವ ಶ್ರೇಯಸ್ ಅಯ್ಯರ್ ಮುಂಬರುವ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡ ಬಿಟ್ಟು ಮೆಗಾ ಹರಾಜಿನಲ್ಲಿ ಕಾಣಿಸಿಕೊಳ್ಳಲು ಬಯಸಿದ್ದಾರೆ ಎನ್ನಲಾಗಿದೆ.
2022ರ ಇಂಡಿಯನ್ ಪ್ರೀಮಿಯರ್ ಲೀಗ್ಗೆ ಈಗಾಗಲೇ ಲಖನೌ ಮತ್ತು ಅಹ್ಮದಾಬಾದ್ ತಂಡಗಳು ಸೇರಿಕೊಂಡಿವೆ. ಲಖನೌ ತಂಡವನ್ನು ಆರ್ಪಿಎಸ್ಜಿ ಸಂಸ್ಥೆ ಹಾಗೂ ಅಹ್ಮದಾಬಾದ್ ತಂಡವನ್ನು ಸಿವಿಸಿ ಕ್ಯಾಪಿಟಲ್ ಸಮೂಹ ಸಂಸ್ಥೆ ಖರೀದಿಸಿದೆ. ಈಗಾಗಲೆ ಪಂಜಾಬ್ ತಂಡದ ನಾಯಕ ಕೆಎಲ್ ರಾಹುಲ್ ಕೂಡ ತಮ್ಮ ಫ್ರಾಂಚೈಸಿಯನ್ನು ಬಿಟ್ಟು ಹೊರಬರಲಿದ್ದಾರೆ. ಇದೀಗ ಅಯ್ಯರ್ ಕೂಡ ಅದೇ ದಾರಿಯನ್ನ ಹಿಡಿಯಬಹುದು ಎಂದು ಐಪಿಎಲ್ನ ಹಿರಿಯ ಅಧಿಕಾರಿಯೊಬ್ಬರು ಪಿಟಿಐಗೆ ತಿಳಿಸಿದ್ದಾರೆ.
ಶ್ರೇಯಸ್ ಅಯ್ಯರ್ ಗಾಯಕ್ಕೊಳಗಾಗಿದ್ದರಿಂದ 2021ರ ಐಪಿಎಲ್ನಲ್ಲಿ ರಿಷಭ್ ಪಂತ್ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಮುನ್ನಡೆಸಿದ್ದರು. ಆದರೆ, ಅಯ್ಯರ್ ಕಮ್ಬ್ಯಾಕ್ ಮಾಡಿದ ನಂತರವೂ ಫ್ರಾಂಚೈಸಿ ರಿಷಭ್ ಪಂತ್ ಅವರನ್ನೇ ನಾಯಕರನ್ನಾಗಿ ಮುಂದುವರಿಸಿತ್ತು.
ಮುಂದಿನ ವರ್ಷವೂ ನಾಯಕತ್ವ ಬದಲಾವಣೆ ಮಾಡುವ ನಿರೀಕ್ಷೆ ಕಡಿಮೆ ಇರುವುದರಿಂದ ಅಯ್ಯರ್ ನಾಯಕತ್ವ ಬಯಸಿ ಡೆಲ್ಲಿ ತಂಡವನ್ನು ಬಿಡಲಿದ್ದಾರೆ ಎನ್ನಲಾಗುತ್ತಿದೆ. ಅಯ್ಯರ್ 2018ರಲ್ಲಿ ಡೆಲ್ಲಿ ತಂಡದ ನಾಯಕನಾಗಿ ಬಡ್ತಿ ಪಡೆದಿದ್ದರು. 2019ರಲ್ಲಿ ತಂಡವನ್ನು ಪ್ಲೇ ಆಫ್ಗೆ 2020ರಲ್ಲಿ ಫೈನಲ್ಗೆ ಕೊಂಡೊಯ್ದಿದ್ದರು.
ಲಕ್ನೋ, ಅಹ್ಮದಾಬಾದ್ ಕೋಲ್ಕತ್ತಾ, ಪಂಜಾಬ್ ತಂಡಗಳು 2022ಕ್ಕೆ ಹೊಸ ನಾಯಕರನ್ನು ಘೋಷಿಸುವ ಸಾಧ್ಯತೆಯಿದೆ. ಕೆಕೆಆರ್ ತಂಡವನ್ನು ಮಾರ್ಗನ್ ಫೈನಲ್ಗೆ ಕೊಂಡೊಯ್ದಿದ್ದರಾದರೂ ಅವರ ಬ್ಯಾಟಿಂಗ್ ಪ್ರದರ್ಶನ ಕಳಪೆಯಾಗಿತ್ತು. ಹಾಗಾಗಿ ಅವರನ್ನು ರೀಟೈನ್ ಮಾಡಿಕೊಳ್ಳುವ ಸಾಧ್ಯತೆ ಕೂಡ ಕಡಿಮೆಯಿದೆ.
ಇದನ್ನು ಓದಿ:ಪಾಂಡ್ಯ ರೀಟೈನ್ ಮಾಡಿಕೊಳ್ಳುವ ಸಾಧ್ಯತೆ ಕಡಿಮೆ: ಮುಂಬೈ ಲಿಸ್ಟ್ನಲ್ಲಿದ್ದಾರೆ ಈ 3 ಆಟಗಾರು!