ಕೋಲ್ಕತ್ತಾ: ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ 2023ಕ್ಕೆ ಮಹಿಳಾ ಇಂಡಿಯನ್ ಪ್ರೀಮಿಯರ್ ಲೀಗ್ ಆರಂಭಿಸುವ ಅಭಿಲಾಷೆ ವ್ಯಕ್ತಪಡಿಸಿದ್ದರು. ಆದರೆ, ಭಾರತದಲ್ಲಿ ಗುಣಮಟ್ಟದ ಕ್ರಿಕೆಟಿಗರ ಸಂಖ್ಯೆ ಅತ್ಯಂತ ಕಡಿಮೆಯಿದ್ದು ಮಹಿಳಾ ಲೀಗ್ ಆರಂಭಿಸುವುದು ಕಷ್ಟಸಾಧ್ಯ ಎಂದು ಮಂಡಳಿಯ ಒಂದು ಭಾಗ ಭಾವಿಸುತ್ತಿದೆ ಎನ್ನಲಾಗಿದೆ.
ಮಹಿಳಾ ಕ್ರಿಕೆಟ್ ಅಭಿವೃದ್ಧಿಗೆ ಬಿಸಿಸಿಐ ಸಾಕಷ್ಟು ಕಾರ್ಯಗಳನ್ನು ಮಾಡುತ್ತಿದೆ. ಆದರೆ ಪ್ರತಿಭೆಗಳ ಗಂಭೀರ ಕೊರತೆ ಕಾಣುತ್ತಿದೆ. ಈ ಹಂತದಲ್ಲಿ ಮಹಿಳಾ ಐಪಿಎಲ್ ಆರಂಭಿಸುವುದು ಅಸಾಧ್ಯದಂತೆ ತೋರುತ್ತಿದೆ ಎಂದು ಈ ವಿಷಯದ ಬಗ್ಗೆ ತಿಳಿದಿರುವ ಮಂಡಳಿಯ ಅಧಿಕಾರಿಯೊಬ್ಬರು ಈಟಿವಿ ಭಾರತಕ್ಕೆ ತಿಳಿಸಿದ್ದಾರೆ.
ಐಪಿಎಲ್‌ನಂತಹ ಲೀಗ್ ಆರಂಭಿಸಲು 4-5 ತಂಡಗಳು ಬೇಕು. ಪ್ರಸ್ತುತ ಭಾರತದಲ್ಲಿ ಆಟಗಾರರ ವಲಯವನ್ನು ಗಮನಿಸಿದರೆ 4-5 ಗುಣಮಟ್ಟದ ತಂಡಗಳನ್ನು ರಚಿಸುವುದಕ್ಕೆ ಸಾಧ್ಯವಿಲ್ಲ. ಪುರುಷರ ಕ್ರಿಕೆಟ್‌ನಲ್ಲಿರುವ ಪ್ರತಿಭೆಗಳಿಗೆ ಸರಿಸಮಾನವಾಗಿರಲು ಇನ್ನೂ ವರ್ಷಗಳೇ ಬೇಕಾಗುತ್ತವೆ ಎಂದು ಅವರು ಹೇಳಿದ್ದಾರೆ.
ಪುರುಷರ ಕ್ರಿಕೆಟ್‌ನ ಪ್ರತಿಭೆಗಳನ್ನು ಹೈಲೈಟ್ ಮಾಡಿರುವ ಅವರು, ಇತ್ತೀಚಿನ ವರ್ಷಗಳಲ್ಲಿ ಮಹಿಳಾ ಕ್ರಿಕೆಟ್ ಅಂತರರಾಷ್ಟ್ರೀಯ ಗುಣಮಟ್ಟದ ಸಾಕಷ್ಟು ಆಟಗಾರರನ್ನು ತಯಾರು ಮಾಡಿಲ್ಲ. ನೀವು ಪುರುಷರ ಕ್ರಿಕೆಟ್ ಒಮ್ಮೆ ನೋಡಿ, ಅಲ್ಲಿ ಸಾಕಷ್ಟು ಬದಲೀ ಆಟಗಾರರ ವ್ಯವಸ್ಥೆಯಿದೆ. ಆದರೆ ಮಹಿಳಾ ಕ್ರಿಕೆಟ್ನಲ್ಲಿ ಸಾಕಷ್ಟು ಗುಣಮಟ್ಟದ ಆಟಗಾರ್ತಿಯರಿಲ್ಲ. ಇದಕ್ಕೆ ಸೂಕ್ತ ಉದಾಹರಣೆ ಎಂದರೆ, ನಿವೃತ್ತಿ ಅಂಚಿನಲ್ಲಿರುವ ಜೂಲನ್ ಗೋಸ್ವಾಮಿ ಅವರಿಗೆ ಸರಿಸಮನಾದ ಒಬ್ಬ ಆಟಗಾರ್ತಿಯನ್ನೂ ನಾನು ಹೊಂದಿಲ್ಲ ಎಂದು ಬಿಸಿಸಿಐ ಅಧಿಕಾರಿ ಹೇಳುತ್ತಾರೆ.
ಇದನ್ನೂ ಓದಿ:ಭಾರತದ ವಿರುದ್ಧ ಕಣಕ್ಕಿಳಿಯಲಿದ್ದಾರೆ ವಿಶ್ವಕಪ್ ಹೀರೋ ಉನ್ಮುಖ್ತ್ ಚಾಂದ್!