ನವದೆಹಲಿ: ಏಷ್ಯಾಕಪ್ ಟೂರ್ನಾಮೆಂಟ್ನಲ್ಲಿ ಟೀಂ ಇಂಡಿಯಾ ಕಳಪೆ ಪ್ರದರ್ಶನ ನೀಡಿ, ಟೂರ್ನಿಯಿಂದ ಹೊರಬಿದ್ದಿದೆ. ಈ ವಿಚಾರವಾಗಿ ಕೋಚ್ ರಾಹುಲ್ ದ್ರಾವಿಡ್ ಹಾಗೂ ಕ್ಯಾಪ್ಟನ್ ರೋಹಿತ್ ಶರ್ಮಾ ಸೇರಿದಂತೆ ಅನೇಕರ ವಿರುದ್ಧ ಟೀಕೆ ವ್ಯಕ್ತವಾಗುತ್ತಿದೆ. ಇದೇ ವಿಚಾರವಾಗಿ ಮಾತನಾಡಿರುವ ಟೀಂ ಇಂಡಿಯಾ ಮಾಜಿ ಆಟಗಾರ, ಬಿಸಿಸಿಐ ಆಯ್ಕೆ ಸಮಿತಿ ಮಾಜಿ ಸದಸ್ಯ ಸಬಾ ಕರೀಮ್ ಕೋಚ್ ರಾಹುಲ್ ದ್ರಾವಿಡ್ ಹಾಗೂ ತಂಡದ 'ಹನಿಮೂನ್ ಅವಧಿ' ಮುಗಿದಿದೆ ಎಂದು ಟೀಕಿಸಿದ್ದಾರೆ.
ತಂಡದಲ್ಲಿ ಸಾಕಷ್ಟು ಆತ್ಮಾವಲೋಕನದ ಅಗತ್ಯವಿದೆ. ಕೋಚ್ ರಾಹುಲ್ ದ್ರಾವಿಡ್ ಅವರ ಹನಿಮೂನ್ ಅವಧಿ ಮುಕ್ತಾಯಗೊಂಡಿದೆ. ಇದೀಗ ಆಟಗಾರರಿಗೆ ಎಚ್ಚರಿಕೆಯ ಕರೆ ನೀಡಬೇಕಾಗಿದೆ ಎಂದಿದ್ದಾರೆ.
ಇದನ್ನೂ ಓದಿ: ಪಾಕ್ ದಹನ ಮಾಡಿದ ಲಂಕಾ.. ಫೈನಲ್ಗೂ ಮುನ್ನ ಹೆಚ್ಚಿದ ಆತ್ಮವಿಶ್ವಾಸ
ಅಕ್ಟೋಬರ್ ಮಧ್ಯದಲ್ಲಿ ಕಾಂಗರೂ ನಾಡಲ್ಲಿ ಮಹತ್ವದ ಟಿ-20 ವಿಶ್ವಕಪ್ ಟೂರ್ನಿ ನಡೆಯಲಿದೆ. ಇದಕ್ಕೂ ಮುಂಚಿತವಾಗಿ ಟಿ20 ಮಾದರಿಯಲ್ಲಿ ನಡೆದ ಏಷ್ಯಾಕಪ್ನಲ್ಲಿ ಭಾರತ ಹೇಳಿಕೊಳ್ಳುವಂತಹ ಪ್ರದರ್ಶನ ನೀಡುವಲ್ಲಿ ವಿಫಲವಾಗಿದೆ. ಲೀಗ್ ಹಂತದಲ್ಲಿ ತಾನು ಆಡಿದ್ದ ಎಲ್ಲ ಪಂದ್ಯದಲ್ಲೂ ಗೆದ್ದಿದ್ದ ರೋಹಿತ್ ಬಳಗ ಸೂಪರ್ ಫೋರ್ ಹಂತದಲ್ಲಿ ಪಾಕ್ ಹಾಗೂ ಶ್ರೀಲಂಕಾ ವಿರುದ್ಧ ಸೋತು ಟೂರ್ನಿಯಿಂದ ಹೊರಬಿದ್ದಿದೆ.
ಇದೇ ವಿಚಾರವನ್ನಿಟ್ಟುಕೊಂಡು ಮಾತನಾಡಿರುವ ಸಬಾ ಕರೀಂ, ದ್ರಾವಿಡ್ ಹಾಗೂ ತಂಡದ ಹನಿಮೂನ್ ಅವಧಿ ಮುಕ್ತಾಯಗೊಂಡಿದೆ. ದ್ರಾವಿಡ್ ಅವರ ಬಳಿ ತುಂಬಾ ಕಡಿಮೆ ಸಮಯವಿದ್ದು, ಅವರಿಗೆ ಇದೊಂದು ಸಂಕಷ್ಟದ ಸಮಯವಾಗಿದೆ ಎಂದಿದ್ದಾರೆ. ಟಿ-20 ವಿಶ್ವಕಪ್ ಹಾಗೂ ಮುಂದಿನ ವರ್ಷ ಏಕದಿನ ವಿಶ್ವಕಪ್ ನಡೆಯಲಿದೆ. ಈ ಎರಡು ಮಹತ್ವದ ಈವೆಂಟ್ಗಳಲ್ಲಿ ಭಾರತ ಚಾಂಪಿಯನ್ ಆಗದಿದ್ದರೆ, ರಾಹುಲ್ ದ್ರಾವಿಡ್ ಅವರ ನೇಮಕ ವ್ಯರ್ಥವಾಗುತ್ತದೆ. ಜೊತೆಗೆ ಅವರು ನೀಡಿರುವ ಸಲಹೆಗಳಿಂದ ತೃಪ್ತರಾಗಲು ಸಾಧ್ಯವಾಗುವುದಿಲ್ಲ ಎಂದು ಹೇಳಿದ್ದಾರೆ.
ಸಬಾ ಕರೀಂ ಟೀಂ ಇಂಡಿಯಾ ಪರ ಒಂದು ಟೆಸ್ಟ್ ಹಾಗೂ 34 ಏಕದಿನ ಪಂದ್ಯಗಳನ್ನು ಆಡಿದ್ದಾರೆ. ಜೊತೆಗೆ ಈ ಹಿಂದೆ ಭಾರತೀಯ ಕ್ರಿಕೆಟ್ ಮಂಡಳಿ ಆಯ್ಕೆ ಸಮಿತಿ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದಾರೆ.