ಮುಂಬೈ (ಮಹಾರಾಷ್ಟ್ರ): ಭಾರತ- ಇಂಗ್ಲೆಂಡ್ ನಡುವಿನ ಟೆಸ್ಟ್ ಸರಣಿ ಮುಕ್ತಾಯವಾಗಿದ್ದು, ಭಾರತ ತಂಡ 3-1 ರಿಂದ ಸರಣಿ ವಶಪಡಿಸಿಕೊಂಡಿದೆ. ಹಾಗೆಯೇ ಜೂನ್ನಲ್ಲಿ ನಡೆಯಲಿರುವ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್ ಪಂದ್ಯಕ್ಕೆ ಅರ್ಹತೆ ಗಿಟ್ಟಿಸಿಕೊಂಡಿದೆ.
ಭಾರತ- ಇಂಗ್ಲೆಂಡ್ ನಡುವಿನ ಟೆಸ್ಟ್ ಸರಣಿಯ ಪಂದ್ಯಗಳಿಗೆ ಕೋವಿಡ್ ಕಾರಣದಿಂದ ಪ್ರೇಕ್ಷಕರಿಗೆ ಪ್ರವೇಶ ನಿಷೇಧಿಸಲಾಗಿತ್ತು. ಹೀಗಾಗಿ ಹೆಚ್ಚಿನ ಸಂಖ್ಯೆಯ ಕ್ರಿಕೆಟ್ ಅಭಿಮಾನಿಗಳು ಮನೆಯಲ್ಲಿಯೇ ಕುಳಿತು ಟಿವಿಯಲ್ಲಿ ಪಂದ್ಯಗಳನ್ನು ವೀಕ್ಷಿಸಿದ್ದರು. ಕಳೆದ ಐದು ವರ್ಷಗಳಲ್ಲಿ ಅತಿ ಹೆಚ್ಚು ವೀಕ್ಷಕರು ಟೆಸ್ಟ್ ಪಂದ್ಯವನ್ನು ಟಿವಿಯಲ್ಲಿ ವೀಕ್ಷಣೆ ಮಾಡಿದ್ದಾರೆ. ಸರಣಿಯ ಉದ್ದಕ್ಕೂ ಸರಾಸರಿ 1.3 ಮಿಲಿಯನ್ ಪ್ರೇಕ್ಷಕರು ತಮ್ಮ ಟಿವಿ ಪರದೆಯ ಮೇಲೆ ಟೆಸ್ಟ್ ಪಂದ್ಯ ವೀಕ್ಷಣೆ ಮಾಡಿದ್ದಾರೆ.
"ಟೆಸ್ಟ್ ಸರಣಿಯನ್ನ ಪ್ರೇಕ್ಷಕರು ತಮ್ಮ ಟಿವಿ ಪರದೆಯ ಮೇಲೆ ವೀಕ್ಷಿಸಿದ್ದು ಸಂತೋಷ ನೀಡಿದೆ. ಸುಮಾರು ಒಂದು ವರ್ಷದ ನಂತರ ಭಾರತದಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಪುನರಾರಂಭವಾಗಿದ್ದು, ಟೆಸ್ಟ್ ಸರಣಿ ಗೆಲ್ಲುವ ಮೂಲಕ ಭಾರತ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ತಲುಪಿದೆ ಎಂದು ಟಿವಿ ಪ್ರಸಾರಕ ಸಂಘದ ಮುಖ್ಯಸ್ಥ ಸಂಜೋಗ್ ಗುಪ್ತಾ ಹೇಳಿದ್ದಾರೆ.
ಓದಿ : ಇಂದು ಮೋದಿ ಕ್ರೀಡಾಂಗಣದಲ್ಲಿ ಮದ ಗಜಗಳ ಕದನ.. ಸರಣಿ ಗೆಲುವಿನ ತವಕ
"ಇದು ಸ್ಟಾರ್‌ನ ಹೈ ಡೆಸಿಬಲ್ ಮಾರ್ಕೆಟಿಂಗ್ ಅಭಿಯಾನವಾಗಿದೆ. 4 ಭಾರತೀಯ ಪ್ರಾದೇಶಿಕ ಭಾಷೆಗಳಲ್ಲಿ ಪಂದ್ಯ ಪ್ರಸಾರ ಮಾಡಲಾಗಿತ್ತು. ಇದು ದಾಖಲೆಯ ವೀಕ್ಷಕರಿಗೆ ವೇದಿಕೆಯಾಗಿದೆ. ಆ ವೇಗವನ್ನು ಮುಂದುವರಿಸುತ್ತಾ, ಮುಂಬರುವ ಭಾರತ-ಇಂಗ್ಲೆಂಡ್ ಏಕದಿನ, ಐಪಿಎಲ್ 2021 ಮತ್ತು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪಂದ್ಯಗಳನ್ನು ಉನ್ನತ ಮಟ್ಟದಲ್ಲಿ ವೀಕ್ಷಕರ ಮುಂದಿಡುತ್ತೇವೆ."ಎಂದು ಅವರು ಹೇಳಿದರು.