ನವದೆಹಲಿ: ಆಸ್ಟ್ರೇಲಿಯಾ ನೆಲದಲ್ಲಿ ಐತಿಹಾಸಿಕ ಸರಣಿ ವಿಜಯದ ನಂತರ ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್‌ನಲ್ಲಿ 227ರನ್ಗಳ ಹೀನಾಯ ಸೋಲಿನಿಂದ ಕಂಗೆಟ್ಟಿರುವ ಭಾರತ, ಎರಡನೇ ಪಂದ್ಯದಲ್ಲಿ ಗೆದ್ದು ತಿರುಗೇಟು ನೀಡಲು ಸಜ್ಜಾಗಿದೆ. ಜೊತೆಗೆ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ಗೇರುವ ಆಸೆಯನ್ನು ಮತ್ತು ಸರಣಿ ಜೀವಂತ ಇರಿಸುವ ವಿಶ್ವಾಸದಲ್ಲಿದೆ.
ಭಾರತದಲ್ಲಿ ಕೊರೊನಾ ಕಾಲದಲ್ಲಿ 11 ತಿಂಗಳ ವಿರಾಮದ ನಂತರ ಬಿಸಿಸಿಐ ಆಯೋಜಿಸಿದ ಮೊದಲ ಅಂತಾರಾಷ್ಟ್ರೀಯ ಸರಣಿಯಾಗಿದ್ದು, ಮೊದಲ ಸೋಲಿನ ಕಹಿಯಿಂದ ಪಾರಾಗಲು ಭಾರತ ಇನ್ನಿಲ್ಲದ ಕಸರತ್ತು ನಡೆಸುತ್ತಿದೆ. ಫೆ.13ರಿಂದ ಆರಂಭವಾಗಲಿರುವ ಐದು ದಿನಗಳ 2ನೇ ಟೆಸ್ಟ್ಗೆ ಎಂ.ಎ.ಚಿದಂಬರಂ ಕ್ರೀಡಾಂಗಣವೇ ಆತಿಥ್ಯ ವಹಿಸಲಿದೆ.
ಮೊದಲ ಪಂದ್ಯದಲ್ಲಿ ಬ್ಯಾಟಿಂಗ್ ವಿಭಾಗ ಸಂಪೂರ್ಣ ವಿಫಲಗೊಂಡಿದ್ದು, ಆತಿಥೇಯರ ಸೋಲಿಗೆ ಪ್ರಮುಖ ಕಾರಣ ಎನ್ನಲಾಗಿದೆ. ಶುಭ್ಮನ್ ಗಿಲ್ ಮತ್ತು ರೋಹಿತ್ ಶರ್ಮಾ ಅವರು ಆರಂಭದಲ್ಲಿ ಭದ್ರ ಬುನಾದಿ ಹಾಕಲು ತಡಕಾಡುತ್ತಿದ್ದರೆ, ಟೆಸ್ಟ್ ಪರಿಣಿತರು ಚೇತೇಶ್ವರ ಪೂಜಾರ, ಅಜಿಂಕ್ಯ ರಹಾನೆ ಮತ್ತು ವಿರಾಟ್ ಕೊಹ್ಲಿ ಬೃಹತ್ ಇನ್ನಿಂಗ್ಸ್ ಕಟ್ಟುವಲ್ಲಿ ವಿಫಲರಾಗುತ್ತಿದ್ದಾರೆ.
ಟೆಸ್ಟ್ ಪರಿಣಿತರಿಂದ ಮೂಡಿ ಬರುತ್ತಾ ರನ್ ಹೊಳೆ
ಮೊದಲ ಇನ್ನಿಂಗ್ಸ್ನಲ್ಲಿ ರಿಷಭ್ ಪಂತ್, ರವಿಚಂದ್ರನ್ ಅಶ್ವಿನ್, ವಾಷಿಂಗ್ಟನ್ ಸುಂದರ್ ಅವರು ಉನ್ನತ ದರ್ಜೆಯ ಆಂಗ್ಲರ ಬೌಲರ್ಗಳ ವಿರುದ್ಧ ಉತ್ತಮ ಪ್ರದರ್ಶನ ತೋರಿ ಗಮನ ಸೆಳೆದರಾದರೂ ಎರಡನೇ ಇನ್ನಿಂಗ್ಸ್ನಲ್ಲಿ ನಿರಾಸೆ ಮೂಡಿಸಿದರು. ದ್ವಿತೀಯ ಇನ್ನಿಂಗ್ಸ್ನಲ್ಲಿ ಶುಭ್ಮನ್ ಗಿಲ್ ಮತ್ತು ನಾಯಕ ವಿರಾಟ್ ಕೊಹ್ಲಿ ಹೊರತುಪಡಿಸಿದರೆ ಉಳಿದವರಿಂದ ಅಷ್ಟಾಗಿ ರನ್ ಮೂಡಿ ಬರಲಿಲ್ಲ. ಹೋಗಲಿ ಕ್ರೀಸ್ನಲ್ಲಿ ನಿಂತು ತಾಳ್ಮೆಯುತ ಆಟಕ್ಕೂ ಯಾರೂ ಮುಂದಾಗಲಿಲ್ಲ.
ಮೊದಲ ಇನ್ನಿಂಗ್ಸ್ನಲ್ಲಿ ದುಬಾರಿಯಾದ ಭಾರತೀಯ ಬೌಲರ್ಗಳ ವಿರುದ್ಧ ಎರಡನೇ ಇನ್ನಿಂಗ್ಸ್ನಲ್ಲಿ ಇಂಗ್ಲಿಷರು ಮಂಕಾದರು. ಮತ್ತೊಂದೆಡೆ, ಎರಡನೇ ಟೆಸ್ಟ್‌ನಲ್ಲಿ ಜಸ್ಪ್ರೀತ್ ಬುಮ್ರಾ ಮತ್ತು ಇಶಾಂತ್ ಶರ್ಮಾ ಲಯಕ್ಕೆ ಮರಳಲು ಪ್ರಯತ್ನಿಸುತ್ತಿದ್ದರೆ, ಸ್ಪಿನ್ ಟ್ರ್ಯಾಕ್ನಲ್ಲಿ ಅಶ್ವಿನ್ ತಮ್ಮ ಪ್ರಾಬಲ್ಯ ಮುಂದುವರೆಸಲು ಎದುರು ನೋಡುತ್ತಿದ್ದಾರೆ. ಎರಡನೇ ಟೆಸ್ಟ್‌ನಲ್ಲಿ ಬ್ಯಾಟ್ಸ್ಮನ್ಗಳಿಂದ ರನ್ ಮೂಡಿ ಬರದಿದರೆ, ಮತ್ತೆಯೂ ಮುಖಭಂಗ ಎದುರಿಸಲಿದೆ.
ಇದನ್ನೂ ಓದಿ...ನಾಳೆಯಿಂದ 2ನೇ ಟೆಸ್ಟ್ ಪಂದ್ಯ.. ಹಲವು ಬದಲಾವಣೆಯೊಂದಿಗೆ ಕಣಕ್ಕಿಳಿಯಲಿದೆ ಟೀಂ ಇಂಡಿಯಾ..
ಕಣಕ್ಕೆ ಅಕ್ಷರ್ ಸಾಧ್ಯತೆ?
ಗಾಯಗೊಂಡು ಮೊದಲ ಟೆಸ್ಟ್ನಿಂದ ದೂರವಿದ್ದ ಆಲ್ರೌಂಡರ್ ಅಕ್ಷರ್ ಪಟೇಲ್ ಬದಲಾಗಿ ಶಹಬಾದ್ ನದೀಂ ಕಣಕ್ಕಿಳಿದಿದ್ದರು. ಆದರೆ, ನದೀಂ ವಿಕೆಟ್ ಪಡೆಯುವಲ್ಲಿ ಸಂಪೂರ್ಣ ವಿಫಲರಾದರು. ಈಗ ಅಕ್ಷರ್ ಫಿಟ್ ಆಗಿದ್ದು, ಮುಂದಿನ ಕಣಕ್ಕಿಳಿಯಲಿರುವುದು ಬಹುತೇಕ ಖಚಿತ ಎನ್ನಲಾದರೂ ಚೈನಾಮೆನ್ ಬೌಲರ್ ಕುಲ್ದೀಪ್ ಯಾದವ್ ಕೂಡ ಆ ಸ್ಥಾನಕ್ಕೆ ಪೈಪೋಟಿ ನಡೆಸುತ್ತಿದ್ದಾರೆ. ಮೊದಲ ಪಂದ್ಯದಲ್ಲಿ ಕುಲ್ದೀಪ್ ಯಾದವ್ರನ್ನು ಆಯ್ಕೆ ಮಾಡದಕ್ಕೆ ಮಾಜಿ ಕ್ರಿಕೆಟಿಗರು ಆಕ್ರೋಶ ವ್ಯಕ್ತಪಡಿಸಿದ್ದರು. ಹೀಗಾಗಿ, ಯಾರಿಗೆ ಮಣೆ ಹಾಕಲಾಗುತ್ತದೆ ಎಂಬುದನ್ನು ನಾಳೆಯವರೆಗೂ ಕಾಯಬೇಕಿದೆ.
ಮತ್ತೊಂದು ಆಕರ್ಷಕ ಇನ್ನಿಂಗ್ಸ್ನತ್ತ ರೂಟ್ ಕಣ್ಣು
ಗೆಲುವಿನ ನಂತರವೂ ಇಂಗ್ಲೆಂಡ್ ತಂಡದಲ್ಲಿ ಮಹತ್ತರ ಬದಲಾವಣೆ ತರುವ ಸಾಧ್ಯತೆ ಇದೆ. ದ್ವಿಶತಕ ಬಾರಿಸಿ ತಂಡದ ಗೆಲುವಿಗೆ ಕಾರಣರಾಗಿದ್ದ ನಾಯಕ ಜೋರೂಟ್ ಉತ್ತಮ ಲಯದಲ್ಲಿದ್ದು, ಮತ್ತೊಂದು ಆಕರ್ಷಕ ಪ್ರದರ್ಶನ ತೋರಲು ತುದಿಗಾಲಲ್ಲಿ ನಿಂತಿದ್ದಾರೆ. 600 ವಿಕೆಟ್ಗಳ ಸರದಾರ ಜೇಮ್ಸ್ ಆ್ಯಂಡರ್ಸನ್ಗೆ ಈ ಪಂದ್ಯಕ್ಕೆ ವಿಶ್ರಾಂತಿ ನೀಡಲಾಗಿದೆ. ಆ್ಯಂಡರ್ಸನ್ ಬದಲಿಗೆ ಸ್ಟುವರ್ಟ್ ಬ್ರಾಡ್ ತಂಡ ಸೇರಿಕೊಳ್ಳಲಿದ್ದಾರೆ ಎನ್ನಲಾಗಿದೆ.
ಜೊತೆಗೆ ಅರ್ಧಶತಕ ಸಿಡಿಸಿ ನಾಯಕ ರೂಟ್ ಜೊತೆಗೆ ಉತ್ತಮ ಜೊತೆಯಾಟವಾಡಿದ್ದ ಆಲ್ರೌಂಡರ್ ಬೆನ್ಸ್ಟೋಕ್ಸ್ ಕೂಡ ಫಾರ್ಮ್ನಲ್ಲಿದ್ದಾರೆ. ಹಾಗೆಯೇ ಎರಡನೇ ಇನ್ನಿಂಗ್ಸ್ನಲ್ಲಿ ವಿರಾಟ್ ಕೊಹ್ಲಿ ವಿಕೆಟ್ ಬೌಲಿಂಗ್ನಲ್ಲೂ ಮಿಂಚುವ ಭರವಸೆ ಮೂಡಿಸಿದರು. ಡಾಮಿನಿಕ್ ಸಿಬ್ಲಿ ಮತ್ತು ಆಲಿ ಪೋಪ್ ಅವರೂ ಸುಲಭ ವಿಕೆಟ್ ನೀಡುವವರಲ್ಲ.
ಮೊದಲ ಟೆಸ್ಟ್ ನಂತರ ಭಾರತ ಪ್ರವಾಸ ಕೊನೆಗೊಳಿಸಿದ ಜೋಸ್ ಬಟ್ಲರ್ ಅವರ ವಿಕೆಟ್ ಕೀಪಿಂಗ್ ಕರ್ತವ್ಯವನ್ನು ಬೆನ್ ಫೋಕ್ಸ್ ವಹಿಸಿಕೊಳ್ಳಲಿದ್ದಾರೆ. ಸ್ಪಿನ್ನರ್‌ಗಳಾದ ಜಾಕ್ ಲೀಚ್ ಮತ್ತು ಡಾಮ್ ಬೆಸ್ ಕೂಡ ಭಾರತದ ಆಟಗಾರರಿಗೆ ಆಘಾತ ನೀಡುವ ಸಾಧ್ಯತೆ ಇದೆ. ಗಾಯಗೊಂಡ ಬಲ ಮೊಣಕೈಗೆ ಚುಚ್ಚುಮದ್ದು ನೀಡಿದ ನಂತರ ಜೋಫ್ರಾ ಆರ್ಚರ್ 2ನೇ ಟೆಸ್ಟ್ ತಪ್ಪಿಸಿಕೊಳ್ಳಲಿದ್ದಾರೆ. ಆದರೆ, ಭಾರತಕ್ಕೆ ಈ ಪಂದ್ಯ ನಿರ್ಣಾಯಕವಾಗಿದ್ದು, ಗೆಲುವು ಸಾಧಿಸುವ ಮೂಲಕ ಆಶಾದಾಯಕ ಭರವಸೆ ಮೂಡಿಸುತ್ತಾರೆಯೇ ಎಂಬುದನ್ನು ಕಾದು ನೋಡಬೇಕಿದೆ.
ನಾಲ್ಕನೇ ಸ್ಥಾನಕ್ಕೆ ಕುಸಿದ ಭಾರತ:
ಜೂನ್ 18ರಂದು ಲಾರ್ಡ್ಸ್‌ನಲ್ಲಿ ನಡೆಯಲಿರುವ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (ಡಬ್ಲ್ಯೂಟಿಸಿ) ಫೈನಲ್‌ನಲ್ಲಿ ಯಾವ ತಂಡ ನ್ಯೂಜಿಲ್ಯಾಂಡ್ನ್ನು ಎದುರಿಸಲಿದೆ ಎಂಬುದನ್ನು ಸರಣಿ ನಿರ್ಧರಿಸುತ್ತದೆ. ಹೀಗಾಗಿ, ಹೆಚ್ಚು ರೋಚಕತೆ ಪಡೆದುಕೊಂಡಿದೆ. ಮೊದಲ ಗೆಲುವಿನ ನಂತರ ಡಬ್ಲ್ಯೂಟಿಸಿ ಅಂಕಪಟ್ಟಿಯಲ್ಲಿ 70.2 ಅಂಕಗಳೊಂದಿಗೆ ಇಂಗ್ಲೆಂಡ್ ಮೊದಲ ಸ್ಥಾನಕ್ಕೆ ಜಿಗಿದಿದೆ. ಇಂಗ್ಲೆಂಡ್ 3-1, 3-0 ಅಥವಾ 4-0 ಅಂತರದಿಂದ ಗೆಲುವು ಸಾಧಿಸಬೇಕಿದೆ. ಭಾರತ 1-2, 1-3 ಅಂತರಿಂದ ಗೆದ್ದರೆ ಮಾತ್ರ ಫೈನಲ್ ಪ್ರವೇಶಿಸಲಿದೆ. ಸೋಲಿನ ನಂತರ ಮೊದಲ ಸ್ಥಾನದಿಂದ ನಾಲ್ಕನೇ ಶ್ರೇಯಾಂಕಕ್ಕೆ ಭಾರತ ಕುಸಿದಿದೆ. ಆಸ್ಟ್ರೇಲಿಯಾ ಮೂರನೇ ಸ್ಥಾನದಲ್ಲಿದೆ.