ಅಹಮದಾಬಾದ್: ಇಂದು ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಭಾರತ ವಿರುದ್ಧ ನಡೆಯಲಿರುವ ಮೂರನೇ ಟಿ-20 ಪಂದ್ಯದಲ್ಲಿ ನಮ್ಮ ತಂಡವು ಪುನರಾಗಮನ ಮಾಡುವ ವಿಶ್ವಾಸವಿದೆ ಎಂದು ಇಂಗ್ಲೆಂಡ್ ಆರಂಭಿಕ ಬ್ಯಾಟ್ಸ್‌ಮನ್ ಜೇಸನ್ ರಾಯ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಭಾರತ ವಿರುದ್ಧ ನಡೆಯುತ್ತಿರುವ 5 ಪಂದ್ಯಗಳ ಟಿ-20 ಸರಣಿಯಲ್ಲಿ ರಾಯ್ ಉತ್ತಮ ಫಾರ್ಮ್‌ನಲ್ಲಿದ್ದಾರೆ. ಮೊದಲ ಎರಡು ಪಂದ್ಯಗಳಲ್ಲಿ 49 ಮತ್ತು 46 ಸ್ಕೋರ್‌ಗಳನ್ನು ದಾಖಲಿಸಿದ್ದಾರೆ. ಭಾರತ ಎರಡನೇ ಟಿ-20 ಯನ್ನು ಏಳು ವಿಕೆಟ್‌ಗಳಿಂದ ಗೆದ್ದ ನಂತರ ಸರಣಿಯು ಪ್ರಸ್ತುತ 1-1ರಿಂದ ಸಮಬಲವಾಗಿದೆ.
"ನಾವು ಮತ್ತೆ ಪುಟಿದೇಳುವ ವಿಶ್ವಾಸವಿದೆ. ಭಾರತವು ಒಂದು ಉತ್ತಮ ತಂಡವಾಗಿದೆ. ಆದರೆ, ನಾವು ಮೊದಲ ಪಂದ್ಯದಲ್ಲಿ ಸರಣಿಯನ್ನು ಪ್ರಾರಂಭಿಸಿದ ರೀತಿ, ಹಾಗೂ ಎರಡನೇ ಪಂದ್ಯದಲ್ಲಿ ಆಡಿದ ರೀತಿಯಲ್ಲಿ ಬಹಳ ವ್ಯತ್ಯಾಸವಿತ್ತು. ಆದರೆ, ನಾವು ಮೂರನೇ ಪಂದ್ಯದಲ್ಲಿ ಫೈಟ್ ಮಾಡಲಿದ್ದೇವೆ. ಎರಡನೇ ಪಂದ್ಯದಲ್ಲಿ ನಮ್ಮ ಬ್ಯಾಟಿಂಗ್‌ನ ಕೊನೆಯ ಎಂಟು ಓವರ್‌ಗಳಲ್ಲಿ ಸ್ವಲ್ಪ ಕಷ್ಟವಾಯಿತು. ವೇಗವಾಗಿ ರನ್ ಗಳಿಸಲು ಸಾಧ್ಯವಾಗಲಿಲ್ಲ, ಆದ್ದರಿಂದ ನಾವು ಮತ್ತೆ ಪುಟಿದೇಳುತ್ತೇವೆ ಎಂಬ ವಿಶ್ವಾಸವಿದೆ "ಎಂದು ರಾಯ್ ಹೇಳಿದರು.
ಓದಿ : ಇಂದು 3ನೇ ಟಿ-20 ಪಂದ್ಯ: ರೋಹಿತ್ ಬಂದರೆ ಇವರ ಜೊತೆ ಇನ್ನಿಂಗ್ಸ್ ಆರಂಭಿಸೋರು ಯಾರು..?
"ನಾನು ನನ್ನ ಹೊಡೆತಗಳ ಮೇಲೆ ಬಹಳ ನಂಬಿಕೆಯಿಂದಿರುತ್ತೇನೆ. ನೀವು ನನ್ನ ರಿವರ್ಸ್ ಸ್ವೀಪ್ಗಳನ್ನು ನೋಡಿದ್ದೀರಿ, ನಾನು ಕೆಲವು ಚೆಂಡುಗಳನ್ನು ತಪ್ಪಿಸಿಕೊಂಡಿದ್ದೇನೆ. ಆದರೆ, ನನ್ನ ಇನ್ನಿಂಗ್ಸ್ ಸಮಯದಲ್ಲಿ ನಾನು ಅದನ್ನು ಸರಿಪಡಿಸಿದೆ. ನಾನು ಯಾವ ಬೌಲರ್ಗಳನ್ನ ಟಾರ್ಗೆಟ್ ಮಾಡಬೇಕು ಅಂದು ಕೊಂಡಿದ್ದೆ, ಆದರೆ ಅವರೇ ನನ್ನನ್ನು ಔಟ್ ಮಾಡಿದರು. ನಾನು ವಾಷಿಂಗ್ಟನ್ ಗುರಿಯಿಡಲು ನೋಡುತ್ತಿದ್ದೆ. ನಿಧಾನ ಮತ್ತು ಕಠಿಣವಾದ ಪಿಚ್ ಆಗಿತ್ತು, ಎದುರಾಳಿ ತಂಡ ಅದನ್ನು ಸರಿಯಾಗಿ ಬಳಸಿಕೊಂಡರು" ಎಂದರು.