ಪುಣೆ: ಭಾರತ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಇಂಗ್ಲೆಂಡ್ 66 ರನ್‌ಗಳ ಸೋಲು ಅನುಭವಿಸಿದೆ. ಈ ಬಗ್ಗೆ ಇಂಗ್ಲೆಂಡ್ ನಾಯಕ ಇಯಾನ್ ಮಾರ್ಗನ್ ಮಾತನಾಡಿದ್ದು, ಸೋಲಿಗೆ ತಮ್ಮ ತಂಡದ ಯಾವುದೇ ಆಟಗಾರರನ್ನು ದೂಷಿಸಲು ಅವರು ನಿರಾಕರಿಸಿದರು. ದೊಡ್ಡ ರನ್ ಚೇಸ್‌ನಲ್ಲಿ ಪಾಲುದಾರಿಕೆ ಕೊರತೆಯಿದ್ದಾಗ ಕೆಲವೊಮ್ಮ ಸೋಲು ಅನುಭವಿಸಬೇಕಾಗುತ್ತದೆ ಎಂದರು.
ಗೆಲುವಿಗಾಗಿ 318 ರನ್‌ಗಳ ಬೆನ್ನಟ್ಟಿದ ಇಂಗ್ಲೆಂಡ್ ತಂಡ ಉತ್ತಮ ಆರಂಭ ಪಡೆದಿತ್ತು, ಆದರೆ ಮಧ್ಯಮ ಕ್ರಮಾಂಕದಲ್ಲಿ ಉತ್ತಮ ಸಾಥ್ ಸಿಗದ ಕಾರಣ 66 ರನ್‌ಗಳ ಅಂತರದಲ್ಲಿ ಸೋಲು ಕಂಡಿತ್ತು.
"ನಾವು ಯಾವ ತಂಡದ ವಿರುದ್ಧ ಆಡುತ್ತಿದ್ದೆವೊ ಅದು ಅಪಾಯಕಾರಿ ತಂಡವೆಂದು ನಾನು ನಂಬುತ್ತೇನೆ. ನಮ್ಮ ತಂಡ ಉತ್ತಮ ಆರಂಭ ಪಡೆದಿತ್ತು, ಅಂದುಕೊಂಡ ಹಾಗೆ ಸಾಗಿದ್ದರೆ ಇಂದಿನ ಆಟವನ್ನ ನಾವು ಉತ್ತಮವಾಗಿ ಗೆಲ್ಲುತ್ತಿದ್ದೆವು." ಎಂದು ಮಾರ್ಗನ್ ಹೇಳಿದ್ದಾರೆ.
ಓದಿ : ಧವನ್, ಪ್ರಸಿದ್ ಕೃಷ್ಣ ಮಿಂಚು.. ಇಂಗ್ಲೆಂಡ್ ವಿರುದ್ಧ 66 ರನ್ಗಳಿಂದ ಜಯ ಸಾಧಿಸಿದ ಭಾರತ!
"ಭಾರತವು ವಿಶ್ವದ ಅತ್ಯುತ್ತಮ ತಂಡ. ಆ ತಂಡದ ವಿರುದ್ಧ ಆಡುವುದು ತುಂಬಾ ಕಠಿಣ. ಭಾರತದ ವಿರುದ್ಧ ನಾವು ಮೊದಲ ಪಂದ್ಯ ಸೋತಿದ್ದಕ್ಕೆ ನಮ್ಮ ತಂಡದ ಯಾವ ಆಟಗಾರನನ್ನು ನಾನು ದೂಷಿಸುವುದಿಲ್ಲ. ಭಾರತ ಉತ್ತಮವಾದ ಬೌಲಿಂಗ್ ದಾಳಿ ಮಾಡಿತು, ಹಾಗೆಯೇ ನಾವು ಕೆಲವೊಂದು ತಪ್ಪು ಮಾಡಿದ್ದೇವೆ. ನಮ್ಮ ತಂಡದಿಂದ ಮಧ್ಯಮ ಕ್ರಮಾಂಕದಲ್ಲಿ ಉತ್ತಮ ಆಟ ಬರಲಿಲ್ಲ, ಇದು ಸೋಲಿಗೆ ಪ್ರಮುಖ ಕಾರಣವಾಗಿತ್ತು ಎಂದು ಮಾರ್ಗನ್ ಹೇಳಿದರು.