ಮೆಲ್ಬೋರ್ನ್: ಪುರುಷರ ಟಿ20 ವಿಶ್ವಕಪ್ ಅಂತಿಮ ಘಟ್ಟ ತಲುಪಿದ್ದು, ಭಾನುವಾರ ಇಂಗ್ಲೆಂಡ್ ಹಾಗೂ ಪಾಕಿಸ್ತಾನ ತಂಡಗಳು ಮುಖಾಮುಖಿಯಾಗಲಿವೆ. ಹಲವು ಘಟ್ಟಗಳ ಬಳಿಕ ಫೈನಲ್ ತಲುಪಿರುವ ಉಭಯ ತಂಡಗಳು ಗೆಲ್ಲುವ ವಿಶ್ವಾಸದಲ್ಲಿವೆ. ಆದರೆ, ಮಳೆ ಬರುವ ಸಾಧ್ಯತೆ ಹೆಚ್ಚಿದ್ದು ಕ್ರೀಡಾಭಿಮಾನಿಗಳ ನಿರೀಕ್ಷೆಯನ್ನು ಬುಡಮೇಲು ಮಾಡಬಹುದು ಎಂದ ವರದಿ ಬಂದಿದೆ.
ಮೋಡ ಕವಿದ ವಾತಾವರಣ ಹೆಚ್ಚಿದ್ದು, ಮೆಲ್ಬೋರ್ನ್‌ನಲ್ಲಿ ಭಾನುವಾರ 95 ಪ್ರತಿಶತದಷ್ಟು ಮಳೆಯಾಗುವ ಸಾಧ್ಯತೆಯಿದೆ. ಗುಡುಗು ಸಹಿತ 25 ಮಿಮೀ ವರೆಗೆ ಭಾರೀ ಮಳೆಯಾಗಲಿದೆ. ಯಾವದಕ್ಕೂ ಸಜ್ಜಾಗಿರುವಂತೆ ಹವಾಮಾನ ಮುನ್ಸೂಚನೆ ನೀಡಿದೆ.
ಮೀಸಲು ದಿನ ಇರುವ ಕಾರಣ ಭಾನುವಾರ ಸಂಪೂರ್ಣವಾಗಿ ಪಂದ್ಯ ಮಳೆಗೆ ಆಹುತಿಯಾದರೂ ಸೋಮವಾರ ಪಂದ್ಯವನ್ನು ಮುಂದುವರಿಸುವ ಅವಕಾಶವಿದೆ. ದುರದೃಷ್ಟವಶಾತ್ ಮೀಸಲು ದಿನವೂ ಮಳೆಯಾದರೆ ಟಿ20 ವಿಶ್ವಕಪ್ ಟ್ರೋಫಿಯನ್ನು ಉಭಯ ತಂಡಗಳು(ಇಂಗ್ಲೆಂಡ್ ಹಾಗೂ ಪಾಕಿಸ್ತಾನ) ಹಂಚಿಕೊಳ್ಳಬಹುದು ಎಂಬ ಲೆಕ್ಕಚಾರವೂ ನಡೆಯುತ್ತಿದೆ.
ಸಾಮಾನ್ಯವಾಗಿ ಟಿ20 ಪಂದ್ಯಗಳಲ್ಲಿ ಮಳೆ ಅಡ್ಡಿಯಾದರೆ ಫಲಿತಾಂಶಕ್ಕಾಗಿ 5 ಓವರ್ ಪಂದ್ಯವಾದರೂ ನಡೆಯಲೇಬೇಕು. ಡಕ್ವರ್ತ್ ಲೂಯಿಸ್ ನಿಯಮದ ಪ್ರಕಾರ 2ನೇ ಇನ್ನಿಂಗ್ಸ್ನಲ್ಲಿ ಕನಿಷ್ಠ 5 ಓವರ್ ಆಟವಾದರೂ ನಡೆದಿರಬೇಕು. ಇತ್ತೀಚೆಗೆ ಈ ನಿಯಮವನ್ನು ಐಸಿಸಿ ಬದಲಾವಣೆ ಮಾಡಿದ್ದು, ಟಿ20 ವಿಶ್ವಕಪ್ನ ಸೆಮಿ ಫೈನಲ್ ಮತ್ತು ಫೈನಲ್ ಪಂದ್ಯದಲ್ಲಿ ಫಲಿತಾಂಶ ನೀಡಲು ಎರಡೂ ಇನ್ನಿಂಗ್ಸ್ಗಳಲ್ಲಿ ಕನಿಷ್ಠ 10 ಓವರ್ ಆಟ ನಡೆಯಬೇಕು.
ಸದ್ಯ ಅಂತಿಮ ಘಟ್ಟ ಫೈನಲ್ನಲ್ಲಿ ದುರದೃಷ್ಟವಶಾತ್ (ನಿಗದಿಪಡಿಸಿ ಮತ್ತು ಮೀಸಲು) ಎರಡೂ ದಿನಗಳಲ್ಲಿ ಮಳೆಯಾದರೆ ಉಭಯ ತಂಡಗಳು ಟ್ರೋಫಿ ಹಂಚಿಕೊಳ್ಳುವ ಅನಿವಾರ್ಯತೆ ಬರಬಹುದು.
ಭಾನುವಾರ ನಡೆಯಬೇಕಿರುವ ಪಂದ್ಯ ನಡೆಯದಿದ್ದರೆ ಸೋಮವಾರ ಯಥಾಪ್ರಕಾರ ಪುನರಾರಂಭಿಸಲಾಗುತ್ತದೆ. ಒಮ್ಮೆ ಟಾಸ್ ಆದ ಬಳಿಕ ಆಟವನ್ನು ಲೈವ್ ಎಂದು ಪರಿಗಣಿಸಲಾಗುತ್ತದೆ. ಪಂದ್ಯವು ಸ್ಥಳೀಯ ಕಾಲಮಾನದ ಪ್ರಕಾರ ರಾತ್ರಿ 7 ಗಂಟೆಗೆ ಪ್ರಾರಂಭವಾಗಲಿದೆ. ಅಂದು ಮಳೆಯಾದರೆ ಮೀಸಲು ದಿನ ಸೋಮವಾರ ಮುಂದುವರಿಸಲಾಗುತ್ತದೆ.
ಅದು ಸ್ಥಳೀಯ ಕಾಲಮಾನ ಮಧ್ಯಾಹ್ನ 3 ಗಂಟೆಗೆ ಪ್ರಾರಂಭವಾಗಲಿದೆ. ಭಾನುವಾರವೇ ಪೂರ್ಣಗಿಳಿಸುವ ಕಸರತ್ತು ಮಾಡಲಾಗುತ್ತದೆ. ಅಗತ್ಯವಿದ್ದರೆ ಓವರ್‌ಗಳನ್ನು ಕಡಿತಗೊಳಿಯೂ ಆಡಿಸಬಹುದು. ಇದ್ಯಾವುದು ಆಗದಿದ್ದಲ್ಲಿ ಮಾತ್ರ ಮೀಸಲು ದಿನದಂದು ಪಂದ್ಯವನ್ನು ನಡೆಸಬಹುದು.
ಭಾರತ ಮತ್ತು ಶ್ರೀಲಂಕಾ ನಡುವಿನ 2002-03 ಚಾಂಪಿಯನ್ಸ್ ಟ್ರೋಫಿಯು ಅದೇ ರೀತಿಯಲ್ಲಿ ಕೊನೆಗೊಂಡಿತು. ಅದಕ್ಕೂ ಮುನ್ನ 2019ರಲ್ಲಿ ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ODI ವಿಶ್ವಕಪ್ ಸೆಮಿಫೈನಲ್ ಪಂದ್ಯ ಮಳೆಯಿಂದಾಗಿ ಎರಡು ದಿನಗಳ ಕಾಲ ನಡೆದಿತ್ತು. ಆವಾಗಿನ ನಿಯಮದ ಪ್ರಕಾರ ಮೀಸಲು ದಿನದಂದು ಹೊಸ ಆಟವನ್ನು ನಡೆಸಲಾಗಿತ್ತು. ಆದರೆ, ಇದೀಗ ಹೊಸ ನಿಯಮಗಳ ಪ್ರಕಾರ ನಡೆಯಬೇಕಿದೆ.
ಇದನ್ನೂ ಓದಿ: ಏಷ್ಯನ್ ಬಾಕ್ಸಿಂಗ್ ಚಾಂಪಿಯನ್‌ಶಿಪ್: ಚಿನ್ನಕ್ಕೆ ಮುತ್ತಿಕ್ಕಿದ ಪರ್ವೀನ್, ಬೆಳ್ಳಿಗೆ ಕೊರಳೊಡ್ಡಿದ ಮೀನಾಕ್ಷಿ