ಲಂಡನ್ : 2ನೇ ಟೆಸ್ಟ್ನ ಮೂರನೇ ದಿನದಾಟ ಮುಗಿದ ನಂತರ ಇಂಗ್ಲೆಂಡ್ ಮತ್ತು ಭಾರತ ತಂಡಗಳ ಆಟಗಾರರು ಲಾರ್ಡ್ಸ್ನ ಲಾಂಗ್ ರೂಮಿನಲ್ಲಿ ಜಗಳವಾಡಿಕೊಂಡಿದ್ದಾರೆ ಎಂದು ತಡವಾಗಿ ಬೆಳಕಿಗೆ ಬಂದಿದೆ.
ಮಾಧ್ಯಮಗಳ ವರದಿಯ ಪ್ರಕಾರ ಜಸ್ಪ್ರೀತ್ ಬುಮ್ರಾ 3ನೇ ದಿನದಾಟದ ಅಂತ್ಯದಲ್ಲಿ ಜೇಮ್ಸ್ ಆ್ಯಂಡರ್ಸನ್ ಅವರಿಗೆ ಬೌನ್ಸರ್ಗಳ ದಾಳಿ ನಡೆಸಿದ್ದರು. ಆ್ಯಂಡರ್ಸನ್ ಔಟಾಗುತ್ತಿದ್ದಂತೆ ಅವರು ಬುಮ್ರಾ ಬಳಿ ಬಂದು ತಮ್ಮ ಕೋಪ ಹೊರ ಹಾಕಿದ್ದರು. ಈ ಸಂದರ್ಭದಲ್ಲಿ ಇಬ್ಬರು ಆಟಗಾರರ ನಡುವೆ ವಾಕ್ಸಮರ ನಡೆದಿತ್ತು.
ಆದರೆ, ಈ ವಾಕ್ಸಮರ ಕೇವಲ ಮೈದಾನಕ್ಕೆ ಮಾತ್ರ ಸೀಮಿತವಾಗಿಲ್ಲ, ಡ್ರೆಸ್ಸಿಂಗ್ ರೂಮ್ನಲ್ಲೂ ಎರಡೂ ತಂಡದ ಆಟಗಾರರ ನಡುವೆ ಭಾರಿ ಜಗಳ ನಡೆದಿದೆ. ಇದು ಒಂದು ಹಂತದಲ್ಲಿ ಮಿತಿ ಮೀರಿತ್ತು ಎಂದು ವರದಿಗಳಿಂದ ತಿಳಿದು ಬಂದಿದೆ.
ಬುಮ್ರಾ ಮತ್ತು ಆ್ಯಂಡರ್ಸನ್ ಪರ ನಾಯಕರಾದ ವಿರಾಟ್ ಕೊಹ್ಲಿ ಮತ್ತು ಜೋ ರೂಟ್ ಕೂಡ ಈ ಸಂದರ್ಭದಲ್ಲಿ ಮಾತಿನ ಚಕಮಕಿ ನಡೆಸಿದ್ದಾರೆ ಎಂದು ಇಂಗ್ಲೆಂಡ್ ಮಾಧ್ಯಮಗಳು ವರದಿ ಮಾಡಿವೆ.
ಇದಕ್ಕೂ ಮೊದಲು ವೇಗಿ ಜೇಮ್ಸ್ ಆ್ಯಂಡರ್ಸನ್ ತಮ್ಮ ಮತ್ತು ಭಾರತೀಯ ಆಟಗಾರರ ನಡುವೆ ಏನಾಯಿತು ಎನ್ನುವುದನ್ನು ಬಹಿರಂಗಪಡಿಸಿದ್ದರು. ಲಾರ್ಡ್ಸ್ ಟೆಸ್ಟ್ನ 3ನೇ ದಿನ ಇಂಗ್ಲೆಂಡ್ ಬ್ಯಾಟಿಂಗ್ ಮಾಡುವ ವೇಳೆ ಬುಮ್ರಾ ಬೌನ್ಸರ್ ಎಸೆದಿದ್ದರಿಂದ ತಮಗೆ ಕೋಪ ಬಂದಿದ್ದು, ತಾವೂ ಭಾರತೀಯ ಆಟಗಾರರ ನಡುವೆ ಮಾತಿನ ಚಕಮಕಿ ನಡೆಸಿದ್ದಾಗಿ ತಿಳಿಸಿದ್ದಾರೆ.
"ಕೊನೆಯಲ್ಲಿ ನಾನು ಕೋಪಗೊಂಡಿದ್ದೆ. ನನ್ನಲ್ಲಿ ಉಂಟಾದ ಭಾವನೆಯಿಂದ ನನ್ನನ್ನು ಆ ಸಂದರ್ಭದಲ್ಲಿ ಏನನ್ನಾದರೂ (ಬುಮ್ರಾಗೆ) ಹೇಳಬೇಕೆಂದು ಅನಿಸಿತು. ಆದರೆ, ಆ ಘಟನೆ ನನಗೆ ಬೇಸರ ತರಿಸಿದೆ. ಯಾಕೆಂದರೆ, ನನ್ನಿಂದ ಜೋ ರೂಟ್ ಅವರ ಅದ್ಭುತ ಇನ್ನಿಂಗ್ಸ್ನ ಸಂಭ್ರಮ ಮರೆಯಾಯಿತು.
ನನ್ನ ಕೋಪ ಅವರ ಸಂಭ್ರಮಚಾರಣೆಗಿಂತಲೂ ಗಮನ ಸೆಳೆಯಿತು. ಅದಕ್ಕಾಗಿ ನಾನು ಕ್ಷಮೆಯಾಚಿಸುತ್ತೇನೆ. ಆದರೆ, ಆಟದಲ್ಲಿ ಇದು ಕೆಲವೊಮ್ಮೆ ಸಂಭವಿಸುತ್ತದೆ" ಎಂದು ಮಾಧ್ಯಮವೊಂದಕ್ಕೆ ಬರೆದ ಲೇಖನದಲ್ಲಿ ಆ್ಯಂಡರ್ಸನ್ ಉಲ್ಲೇಖಿಸಿದ್ದಾರೆ.
ಇದನ್ನು ಓದಿ : ಕೊನೆಗೂ ಟಾಸ್ ಗೆದ್ದ ಕೊಹ್ಲಿ.. ಇಂಗ್ಲೆಂಡ್ ನೆಲದಲ್ಲಿ ಸತತ ಟಾಸ್ ಸೋಲಿನ ಸರಪಳಿಗೆ ಬ್ರೇಕ್