ನವದೆಹಲಿ: ಮುಂದಿನ ತಿಂಗಳಿಂದ ಆರಂಭಗೊಳ್ಳಲಿರುವ ದುಲೀಪ್ ಟ್ರೋಫಿ ಕ್ರಿಕೆಟ್ ಟೂರ್ನಿಯಲ್ಲಿ ಪೂರ್ವ ವಲಯಕ್ಕೆ ಪಶ್ಚಿಮ ಬಂಗಾಳ ಸಚಿವ ಮನೋಜ್ ತಿವಾರಿ ನಾಯಕರಾಗಿದ್ದಾರೆ. ಪ್ರಸಕ್ತ ಸಾಲಿನ ರಣಜಿಯಲ್ಲಿ ಗಮನಾರ್ಹ ಪ್ರದರ್ಶನ ನೀಡಿರುವ ಪಶ್ಚಿಮ ಬಂಗಾಳ ಬ್ಯಾಟರ್ ಮನೋಜ್ ತಿವಾರಿಗೆ ಇದೀಗ ಹೊಸ ಜವಾಬ್ದಾರಿ ನೀಡಲಾಗಿದೆ. ಪೂರ್ವ ವಲಯದ ತಂಡದಲ್ಲಿ ರಿಯಾನ್ ಪರಾಗ್ ಸಹ ಇದ್ದು, ಟ್ರೋಫಿ ಗೆಲ್ಲುವ ಹುಮ್ಮಸ್ಸಿನಿಂದ ಕಣಕ್ಕಿಳಿಯಲಿದೆ. ಪೂರ್ವ ವಲಯ ಆಯ್ಕೆ ಸಮಿತಿ ಇಂದು ತಂಡ ಆಯ್ಕೆ ಮಾಡಿದ್ದು, ಅದಕ್ಕಾಗಿ ರಾಂಚಿಯ ಜೆಎಸ್ಸಿಇ ಅಂತಾರಾಷ್ಟ್ರೀಯ ಮೈದಾನದಲ್ಲಿ ಸಭೆ ಸೇರಿತ್ತು.
ಪಶ್ಚಿಮ ಬಂಗಾಳದ ಹಾಲಿ ಸಚಿವ ಮತ್ತು ಕ್ರಿಕೆಟಿಗ ಮನೋಜ್ ತಿವಾರಿ ಅವರನ್ನು ಕ್ಯಾಪ್ಟನ್ ಆಗಿ ನೇಮಕ ಮಾಡಲಾಗಿದ್ದು, ವಿರಾಟ್ ಸಿಂಗ್ ತಂಡ ಉಪನಾಯಕನಾಗಿ ಕಾರ್ಯನಿರ್ವಹಿಸಲಿದ್ದಾರೆ. ತಂಡದಲ್ಲಿ ಮುಖ್ಯವಾಗಿ ಅಸ್ಸೋಂ ಹಾಗೂ ಐಪಿಎಲ್ ಸ್ಟಾರ್ ಪ್ಲೇಯರ್ ರಿಯಾನ್ ಪರಾಗ್ಗೆ ಮಣೆ ಹಾಕಿದೆ. ಸೆಪ್ಟೆಂಬರ್ 8 ರಿಂದ ಸೆಪ್ಟೆಂಬರ್ 25 ರವರೆಗೆ ತಮಿಳುನಾಡಿನಲ್ಲಿ ಪಂದ್ಯಾವಳಿ ಆಯೋಜಿಸಲಾಗಿದೆ.
ಇದನ್ನೂ ಓದಿ: ರಣಜಿ ಕ್ರಿಕೆಟ್: ಜಾರ್ಖಂಡ್ ವಿರುದ್ಧ ಶತಕ ಸಿಡಿಸಿದ ಬಂಗಾಳ ಕ್ರೀಡಾ ಸಚಿವ ಮನೋಜ್ ತಿವಾರಿ
ಬಂಗಾಳ ಕ್ರಿಕೆಟ್ ಸಂಸ್ಥೆಯಿಂದ ಒಟ್ಟು ಏಳು ಆಟಗಾರರು, ಜಾರ್ಖಂಡ್ ರಾಜ್ಯ ಕ್ರಿಕೆಟ್ ಸಂಸ್ಥೆಯಿಂದ ನಾಲ್ವರು, ಅಸ್ಸೋಂ ಕ್ರಿಕೆಟ್ ಸಂಸ್ಥೆಯಿಂದ ಇಬ್ಬರು ಮತ್ತು ಒಡಿಶಾ ಕ್ರಿಕೆಟ್ ಸಂಸ್ಥೆ ಮತ್ತು ತ್ರಿಪುರಾ ಕ್ರಿಕೆಟ್ ಸಂಸ್ಥೆಯಿಂದ ತಲಾ ಒಬ್ಬ ಆಟಗಾರರನ್ನು ಆಯ್ಕೆ ಮಾಡಲಾಗಿದೆ. ಮನೋಜ್ ತಿವಾರಿ ಟೀಂ ಇಂಡಿಯಾ ಪರ 12 ಏಕದಿನ ಮತ್ತು 3 ಟಿ20 ಪಂದ್ಯಗಳನ್ನಾಡಿದ್ದಾರೆ. 125 ಪ್ರಥಮ ದರ್ಜೆ ಮತ್ತು 163 ಲಿಸ್ಟ್ ಎ ಪಂದ್ಯಗಳನ್ನೂ ಆಡಿದ್ದು, ದೇಶೀಯ ಕ್ರಿಕೆಟ್ನಲ್ಲಿ 14,000 ರನ್ಗಳಿಸಿದ್ದಾರೆ.
ತಂಡ ಇಂತಿದೆ: ಮನೋಜ್ ತಿವಾರಿ (ನಾಯಕ), ವಿರಾಟ್ ಸಿಂಗ್ (ಉಪನಾಯಕ), ನಜೀಮ್ ಸಿದ್ದಿಕ್, ಸುದೀಪ್ ಕುಮಾರ್ ಘರಾಮಿ, ಶಾಂತನು ಮಿಶ್ರಾ, ಅನುಸ್ತಪ್ ಮಜುಂದಾರ್, ರಿಯಾನ್ ಪರಾಗ್, ಕುಮಾರ್ ಕುಶಾಗ್ರಾ, ಅಭಿಷೇಕ್ ಪೊರೆಲ್, ಶಬಾಜ್ ಅಹ್ಮದ್, ಶಹಬಾಜ್ ನದೀಮ್, ಇಶಾನ್ ಪೊರೆಲ್, ಆಕಾಶ್ ದೀಪ್, ಮುಖ್ತಾರ್ ಹುಸೇನ್, ಮಣಿ ಶಂಕರ್ ಮುರಾ ಸಿಂಗ್
ಮೀಸಲು ಆಟಗಾರರು: ಅಭಿಜೀತ್ ಸಾಕೇತ್, ರಾಜೇಶ್ ಮೊಹಂತಿ, ಸಯನ್ ಶೇಖರ್ ಮೊಂಡಲ್, ಅನುಕುಲ್ ರಾಯ್
ಪಶ್ಚಿಮ ವಲಯಕ್ಕೆ ರಹಾನೆ ಕ್ಯಾಪ್ಟನ್: ಇನ್ನೂ ಪಶ್ಚಿಮ ವಲಯಕ್ಕೆ ಟೀಂ ಇಂಡಿಯಾ ಆಟಗಾರ ಅಜಿಂಕ್ಯ ರಹಾನೆ ಅವರಿಗೆ ನಾಯಕ ಪಟ್ಟ ನೀಡಲಾಗಿದೆ. ಈ ತಂಡದಲ್ಲಿ ಪೃಥ್ವಿ ಶಾ, ಶಾರ್ದೂಲ್ ಠಾಕೂರ್, ಯಶಸ್ವಿ ಜೈಸ್ವಾಲ್ ಸಹ ಇದ್ದಾರೆ. ಕೇಂದ್ರ ವಲಯಕ್ಕೆ ಕರಣ್ ಶರ್ಮಾ ಕ್ಯಾಪ್ಟನ್ ಆಗಿದ್ದಾರೆ.