ಮುಂಬೈ: ಇಂಡಿಯನ್ ಪ್ರೀಮಿಯರ್ ಲೀಗ್ನ 2022ರ ಆವೃತ್ತಿಗೂ ಮುನ್ನ ಬಿಸಿಸಿಐ ಡಿಆರ್ಎಸ್ ಸೇರಿದಂತೆ ಕೆಲವು ಮಹತ್ತರ ನಿರ್ಧಾರಗಳನ್ನು ಕೈಗೊಳ್ಳಲಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.
ಮಾರ್ಚ್ 26 ರಂದು ಇಂಡಿಯನ್ ಪ್ರೀಮಿಯರ್ ಲೀಗ್ ಆರಂಭವಾಗಲಿದೆ. ಮೊದಲ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಸಿಎಸ್ಕೆ ಮತ್ತು ರನ್ನರ್ ಅಪ್ ಕೆಕೆಆರ್ ಕಣಕ್ಕಿಳಿಯಲಿವೆ. ಈ ಬಾರಿ ಶ್ರೀಮಂತ ಲೀಗ್ನಲ್ಲಿ ಅಂಪೈರ್ ತೀರ್ಪು ಪರಾಮರ್ಶೆ ಪದ್ದತಿ(ಡಿಆರ್ಎಸ್) ರಿವ್ಯೂವ್ಗಳ ಸಂಖ್ಯೆಯನ್ನು ಹೆಚ್ಚಿಗೆ ಮಾಡುವ ಸಾಧ್ಯತೆಯಿದೆ.
ಕ್ರಿಕ್ಬಜ್ ವರದಿಯ ಪ್ರಕಾರ, ಬಿಸಿಸಿಐ 15ನೇ ಆವೃತ್ತಿಯಲ್ಲಿ ಪ್ರತಿ ಇನ್ನಿಂಗ್ಸ್ನಲ್ಲಿ ಒಂದರ ಬದಲು ಎರಡು ರಿವ್ಯೂವ್ ತೆಗೆದುಕೊಳ್ಳುವ ಅವಕಾಶವನ್ನು ನೀಡಿದೆ. ಅಂದರೆ ಪ್ರತಿ ಇನ್ನಿಂಗ್ಸ್ನಲ್ಲಿ ಬೌಲಿಂಗ್ ಮತ್ತು ಬ್ಯಾಟಿಂಗ್ ತಂಡಗಳು ಅಂಪೈರ್ ತೀರ್ಪಿನ ವಿರುದ್ಧ ತಲಾ 2 ಬಾರಿ ರಿವ್ಯೂವ್ ತೆಗೆದುಕೊಳ್ಳಬಹುದು. ಈ ಹಿಂದಿನ ಆವೃತ್ತಿಗಳು ಪ್ರತಿ ಇನ್ನಿಂಗ್ಸ್ನಲ್ಲಿ ಎರಡೂ ತಂಡಗಳು ಒಮ್ಮೆ ಮಾತ್ರ ರಿವ್ಯೂವ್ ತೆಗೆದುಕೊಳ್ಳಬಹುದಿತ್ತು.
ಪಂದ್ಯವನ್ನು ಮುಂದೂಡುವ ಅವಕಾಶ
ಇನ್ನು ಕೋವಿಡ್ 19 ಭೀತಿ ಇರುವುದರಿಂದ ಯಾವುದೇ ತಂಡದಲ್ಲಿ ಕೋವಿಡ್ 19 ಪಾಸಿಟಿವ್ ಪ್ರಕರಣಗಳು ಕಂಡು ಬಂದು ಮೈದಾನಕ್ಕಿಳಿಯಲು 12 ಸದಸ್ಯರ ತಂಡ(ಸಬ್ಸ್ಟಿಟ್ಯೂಟ್ ಸೇರಿ) ಸಿದ್ಧರಿಲ್ಲದಿದ್ದರೆ. ಆ ದಿನದ ಪಂದ್ಯವನ್ನು ಮುಂದೂಡಿ ಬೇರೆ ದಿನ ಆಡಿಸುವ ಅವಕಾಶವನ್ನು ನೀಡಲಾಗಿದೆ. ಮರುವೇಳಾಪಟ್ಟಿಯ ಕೆಲಸವನ್ನು ಐಪಿಎಲ್ ಟೆಕ್ನಿಕಲ್ ಸಮಿತಿ ನಿರ್ಧರಿಸಲಿದೆ.
ಇನ್ನು ಇತ್ತೀಚೆಗೆ ಎಂಸಿಸಿ ಜಾರಿಗೆ ತಂದಿರುವ ಬ್ಯಾಟರ್ ಕ್ಯಾಚ್ ನೀಡಿ ಔಟಾದರೂ ಹೊಸ ಬ್ಯಾಟರ್ ಸ್ಟ್ರೈಕ್ನಲ್ಲೇ ಬ್ಯಾಟಿಂಗ್ ಮಾಡಬೇಕು ನಿಯಮವನ್ನು ಐಪಿಎಲ್ನಲ್ಲೂ ಜಾರಿಗೆ ತರಲು ನಿರ್ಧರಿಸಲಾಗಿದೆ. ಈ ನಿಯಮದ ಪ್ರಕಾರ ಕ್ಯಾಚ್ ವೇಳೆ ನಾನ್ ಸ್ಟ್ರೈಕ್ನಲ್ಲಿ ಬ್ಯಾಟರ್ ಕ್ರೀಸ್ ಕ್ರಾಸ್ ಮಾಡಿದ್ದರೂ ಸಹಾ ಹೊಸದಾಗಿ ಬರುವ ಬ್ಯಾಟರ್ ಸ್ಟ್ರೈಕ್ ತೆಗೆದುಕೊಳ್ಳಬೇಕಾಗಿರುತ್ತದೆ.
ಇದನ್ನೂ ಓದಿ:ಅಯ್ಯರ್ ಉತ್ತಮವಾಗಿ ಆಡಿದ್ದಾರೆ, ಆದ್ರೆ ರಹಾನೆ-ಪೂಜಾರ ಸ್ಥಾನ ತುಂಬಲು ಇನ್ನೂ ಶ್ರಮಿಸಬೇಕು: ರೋಹಿತ್